ಭಾರತದ ‘ನಯಾಗರ’ ಎಂದೇ ಖ್ಯಾತಿ ಪಡೆದ ಗೋಕಾಕ ಫಾಲ್ಸ್ ಮೈದುಂಬಿ ಹರಿಯುತ್ತಿದೆ.

ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಭಾರತದ ‘ನಯಾಗರ’ ಎಂದೇ ಖ್ಯಾತಿ ಪಡೆದ ಗೋಕಾಕ ಫಾಲ್ಸ್ ಮೈದುಂಬಿ ಹರಿಯುತ್ತಿದೆ.
ಹೌದು…ಬಂಡೆಗಲ್ಲಿನ ಮಧ್ಯೆ ಹರಿದು ಬಂದು ಹಾಲಿನ ನೊರೆಯಂತೆ ಹರಿಯುತ್ತಿರುವ ನೀರು ಈಗ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಈ ಜಲಪಾತ ಭೋರ್ಗರೆಯುತ್ತ 180 ಮೀಟರ್ ಆಳಕ್ಕೆ ಧುಮುಕುವ ಮನಮೋಹಕ, ರುದ್ರರಮಣೀಯ ದೃಶ್ಯಕ್ಕೆ ಮನಸೋಲದವರೇ ಇಲ್ಲ. ಸದ್ಯ ಮಹಾರಾಷ್ಟ್ರ ಪಶ್ಚಿಮ ಘಟ್ಟಗಳು ಸೇರಿ ಘಟಪ್ರಭಾ ನದಿ ಪಾತ್ರದಲ್ಲಿ ಅಧಿಕ ಮಳೆಯಾಗುತ್ತಿರುವ ಕಾರಣ ಘಟಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ದಿನೇ ದಿನೇ ಗೋಕಾಕ್ ಫಾಲ್ಸ್‌ನಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಧುಮುಕ್ಕಿ ಹರಿಯುತ್ತಿರುವ ಗೋಕಾಕ ಫಾಲ್ಸ್‌ನ ಅಂದವನ್ನು ಹೆಚ್ಚಳ ಮಾಡುತ್ತಿದೆ.
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ, ಕರ್ನಾಟಕ ಗಡಿ ಪ್ರದೇಶದ ಜಿಲ್ಲೆಗಳ ಜಲಪಾತಗಳು ತುಂಬಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯ ಸಪ್ತ ನದಿಗಳ ಒಳ ಹರಿವು ಹೆಚ್ಚಾಗುತ್ತಿದೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ, ವೇದಗಂಗಾ, ದೂಧಗಂಗಾ ನದಿಗಳ ಒಳ ಹರಿವಿನಲ್ಲಿ ಭಾರೀ ಹೆಚ್ಚಳವಾಗಿದೆ.