Karnataka Bandh: ಮರಾಠಿ ಪುಂಡಾಟಿಕೆ ವಿರೋಧಿಸಿ ಮಾ.22ರಂದು ರಾಜ್ಯ ಬಂದ್‌ಗೆ ಕರೆ, ಹಂತ-ಹಂತವಾಗಿ, ಹೋರಾಟ ಬೇಡಿಕೆಗಳು ಏನು?

ಬೆಂಗಳೂರು: ರಾಜ್ಯದಲ್ಲಿ ಎಂಇಎಸ್‌ಗೆ ನಿಷೇಧ ಹೇರಬೇಕು, ಕಳಸಾ ಬಂಡೂರಿ, ಮೇಕೆದಾಟು ನೀರಾವರಿ ಯೋಜನೆಗೆ ಕೇಂದ್ರ ಸರಕಾರ ಅನುಮತಿ ನೀಡಬೇಕು ಹಾಗೂ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಕಾಯ್ದೆ ಜಾರಿಯಾಗಬೇಕು ಎಂದು ಆಗ್ರಹಿಸಿ ಕನ್ನಡ ಒಕ್ಕೂಟದಿಂದ ಮಾ-22ರಂದು “ಅಖಂಡ ಕರ್ನಾಟಕ ಬಂದ್’ಗೆ ಕರೆ ನೀಡಲಾಗಿದೆ.
ಆದರೆ ಮಾ. 3ರಿಂದಲೇ ಆರಂಭವಾಗುವ ಹೋರಾಟವು ಒಟ್ಟು 7 ಹಂತದಲ್ಲಿ ನಡೆಯುತ್ತಿದೆ. 7ನೇ ಹಂತವೇ ಕರ್ನಾಟಕ ಬಂದ್ ಆಗಿದೆ.
ಶುಕ್ರವಾರ ಖಾಸಗಿ ಹೊಟೇಲ್‌ನಲ್ಲಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಡಾ| ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಸಹಿತ ವಿವಿಧ ಕನ್ನಡಪರ ಸಂಘಟನೆ ಮುಖಂಡರ ಜತೆ ಚರ್ಚೆ ನಡೆಸಿದರು. ಬಳಿಕ ಕರ್ನಾಟಕ ಬಂದ್ ಮಾಡುವ ಬಗ್ಗೆ ತೀರ್ಮಾನಕ್ಕೆ ಬರಲಾಯಿತು.
ರಾಜ್ಯದಲ್ಲಿ ಎಂಇಎಸ್‌ಗೆ ನಿಷೇಧ ಹೇರುವುದರ ಸಹಿತ ವಿವಿಧ ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ಮಾ. 22ರಂದು “ಅಖಂಡ ಕರ್ನಾಟಕ ಬಂದ್’ ಕರೆಗೆ ನೀಡಲಾಗಿದೆ. ಅಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ನಡೆಯಲಿದೆ ಎಂದು ಸಭೆಯ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಾಟಾಳ್ ನಾಗರಾಜ್ ಹೇಳಿದರು.
ಹಂತ-ಹಂತವಾಗಿ ಹೋರಾಟ
*ಮಾ.3: ಬೆಳಗ್ಗೆ 11ಕ್ಕೆ ರಾಜಭವನ ಮುತ್ತಿಗೆ
*ಮಾ.7: ಬೆಳಗಾವಿ ಚಲೋ
*ಮಾ.11: ಮೇಕೆದಾಟಿಗಾಗಿ ಅತ್ತಿಬೆಲೆ ಬಳಿ ತಮಿಳುನಾಡು ಗಡಿ ಬಂದ್
*ಮಾ.14: ರಾಮನಗರ, ಮಂಡ್ಯ, ಮೈಸೂರು ಜಿಲ್ಲಾಧಿ ಕಾರಿಗಳ ಕಚೇರಿ ಬಳಿ ಪ್ರತಿಭಟನೆ
*ಮಾ.16: ಹೊಸಕೋಟೆ – ಚೆನ್ನೈ ಹೆದ್ದಾರಿ ತಡೆ
*ಮಾ.18: ಕನ್ನಡಪರ ಸಂಘಟನೆಗಳ ಸಭೆ
*ಮಾ.22: ಅಖಂಡ ಕರ್ನಾಟಕ ಬಂದ್
“ಬೆಳಗಾವಿ ಉಳಿಸಿ’ ಎಂದು ಆಗ್ರಹಿಸಿ ಮಾ. 3ರಂದು ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು. ಮಾ. 7ರಂದು ಬೆಳಗಾವಿ ಚಲೋ ನಡೆಸಲಾಗುವುದು. ಮಾ. 11ರಂದು ಮೇಕೆದಾಟಿಗಾಗಿ ಅತ್ತಿಬೆಲೆ ತಮಿಳುನಾಡು ಗಡಿ ಬಂದ್ ಮಾಡಲಾಗುವುದು. ಮಾ. 14ರಂದು ರಾಮನಗರ, ಮಂಡ್ಯ, ಮೈಸೂರು ಜಿಲ್ಲಾಧಿ ಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದು. ಮಾ. 16ರಂದು ಹೊಸಕೋಟೆ-ಚೆನ್ನೈ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದರು.
ಮಾ. 18ರಂದು ಮತ್ತೂಮ್ಮೆ ಕನ್ನಡಪರ ಸಂಘಟನೆಗಳ ಒಕ್ಕೂಟಗಳು ಸಭೆ ಸೇರಲಿವೆ. ಯಾವುದೇ ಕಾರಣಕ್ಕೂ ಬಂದ್ ಅನ್ನು ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಬೆಂಬಲಕ್ಕೆ ಮನವಿ
“ಕರ್ನಾಟಕ ಬಂದ್’ಗೆ ಸಿಎಂ ಸಿದ್ದರಾಮಯ್ಯ ಸಂಪೂರ್ಣ ಬೆಂಬಲ ಕೊಡಬೇಕು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಇಲಾಖೆಯ ಎಲ್ಲ ಬಸ್ಗಳನ್ನು ನಿಲ್ಲಿಸಬೇಕು. ಹೊಟೇಲ್ ಮಾಲಕರು, ಸಿನೆಮಾ ರಂಗದವರು, ಸರಕಾರಿ ನೌಕರರು, ದೊಡ್ಡ ಹಾಗೂ ಸಣ್ಣ ವಾಹನಗಳ (ಲಾರಿ, ಖಾಸಗಿ ಬಸ್, ಕಾರು, ವ್ಯಾನ್) ಮಾಲಕರು ನಮಗೆ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದರು. ತುರ್ತು ಸೇವೆಗಳಿಗೆ ನಿರ್ಬಂಧ ಇರುವುದಿಲ್ಲ. ಮರಾಠಿಗರಿಗೆ ಸರಿಯಾದ ಪಾಠ ಕಲಿಸಬೇಕಿದೆ. ಹೀಗಾಗಿ ಕರ್ನಾಟಕದ ಎಲ್ಲ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಗಳು ಸಂಪೂರ್ಣ ಬೆಂಬಲ ನೀಡಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳು ಏನು?
* ಸಾಂಬಾಜಿ ಪ್ರತಿಮೆ ತೆರವಾಗಬೇಕು
* ಬೆಳಗಾವಿ ಉಳಿಸಬೇಕು, ಎಂಇಎಸ್‌ಗೆ ನಿಷೇಧ
* ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿದವರಿಗೆ ಕಠಿನ ಶಿಕ್ಷೆ
* ಶಿವಸೇನೆ ಮತ್ತು ಎಂಇಎಸ್ ಪುಂಡರನ್ನು ಗಡಿಪಾರು
* ಕರ್ನಾಟಕದಲ್ಲಿ ಪರಭಾಷಾ ದಬ್ಟಾಳಿಕೆ ಸ್ಥಗಿತ
* ಹಿಂದಿ ಬೇಡವೇ ಬೇಡ
* ಮಹಾರಾಷ್ಟ್ರದಲ್ಲಿ ಕನ್ನಡ ಮಹಾಮಹಿಮರ ಪ್ರತಿಮೆಗಳ ಸ್ಥಾಪನೆ
* ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ
– ಬಂದ್‌ಗೆ ಯಾರೆಲ್ಲ ಬೆಂಬಲ?
* ಕರ್ನಾಟಕ ಚಲನಚಿತ್ರವಾಣಿಜ್ಯ ಮಂಡಳಿ
* ಡಾ| ರಾಜ್‌ಕುಮಾರ್ ಅಭಿಮಾನಿಗಳ ಸಂಘ
* ಕನ್ನಡ ಸೇನೆ
* ಕರವೇ ಶಿವರಾಮೇಗೌಡ ಬಣ
* ಕನ್ನಡ ಜಾಗೃತಿ ವೇದಿಕೆ
* ಜಯಕರ್ನಾಟಕ ಸಂಘಟನೆ
* ಭಾರತೀಯರ ಸೇವಾ ಸಮಿತಿ
* ಡಾ| ಬಿ.ಆರ್. ಭೀಮ್ ಸೇವಾ ಸಮಿತಿ
* ಆದರ್ಶ ಆಟೋ ಯೂನಿಯನ್



