ನಕಲಿ ಯೂಟ್ಯೂಬರ್‌ಗಳಿಗೆ ಬೆಳಗಾವಿ ಎಸ್ಪಿ ಖಡಕ್ ವಾರ್ನಿಂಗ್: ಬ್ಲ್ಯಾಕ್‌ಮೇಲ್ ಮಾಡಿದ್ರೇ ರೌಡಿಶೀಟ್ ಫಿಕ್ಸ್!

ಬೆಳಗಾವಿ ಜಿಲ್ಲೆಯಲ್ಲಿ ಯೂಟ್ಯೂಬರ್ಸ್ ಹಾಗೂ ಸೋಷಿಯಲ್ ಮೀಡಿಯಾ ಆಕ್ಟಿವಿಸ್ಟ್‌ಗಳ ಹೆಸರಿನಲ್ಲಿ ನಡೆಯುತ್ತಿದ್ದ ದಂಧೆಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಈಗ ಕಠಿಣ ಕಾನೂನು ಅಸ್ತ್ರವನ್ನು ಕೈಗೆತ್ತಿಕೊಂಡಿದೆ. ಹಣ ವಸೂಲಿ ಮಾಡುವ ನಕಲಿ ಜರ್ನಲಿಸ್ಟ್‌ಗಳಿಗೆ ಖುದ್ದಾಗಿ ಎಸ್ಪಿಯವರೇ ಖಡಕ್ ಎಚ್ಚರಿಕೆ ನೀಡಿದ್ದು, ಬ್ಲ್ಯಾಕ್‌ಮೇಲ್ ಮಾಡಿದ್ರೆ ರೌಡಿಶೀಟ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಯೂಟ್ಯೂಬರ್ಸ್ ಹಾಗೂ ಸಾಮಾಜಿಕ ಜಾಲತಾಣದ ಆಕ್ಟಿವಿಸ್ಟ್‌ಗಳ ಹೆಸರಿನಲ್ಲಿ ಸಾರ್ವಜನಿಕರು ಮತ್ತು ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿರುವ ದಂಧೆಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಳಗಾವಿ ಎಸ್ಪಿ, ಕೆ ರಾಮರಾಜನ್ ಅವರು ರೈತರಿಂದ ಹಿಡಿದು ವಿವಿಧ ಇಲಾಖೆಯ ಅಧಿಕಾರಿಗಳವರೆಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುವವರ ವಿರುದ್ಧ ಕಠಿಣ ಹಣ ವಸೂಲಿ ಪ್ರಕರಣ ದಾಖಲಿಸಲಾಗುವುದು. ಅಲ್ಲದೆ, ಇಂತಹ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಮುಂದಿನ ದಿನಗಳಲ್ಲಿ ರೌಡಿಶೀಟ್ ಓಪನ್ ಮಾಡಲಾಗುವುದು ಎಂದು ತೀವ್ರ ಎಚ್ಚರಿಕೆ ನೀಡಿದರು.
ಯೂಟ್ಯೂಬರ್ಸ್ ಅಥವಾ ಆಕ್ಟಿವಿಸ್ಟ್‌ಗಳ ಹೆಸರಿನಲ್ಲಿ ಯಾರಾದರೂ ವೈಯಕ್ತಿಕ ಇಮೇಜ್ ಹಾಳು ಮಾಡುವ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟರೆ, ಸಾರ್ವಜನಿಕರು ಹಾಗೂ ಅಧಿಕಾರಿಗಳು ಧೈರ್ಯವಾಗಿ ಬಂದು ಪೊಲೀಸ್ ಇಲಾಖೆಗೆ ದೂರು ನೀಡಬೇಕು. ಇಂತಹ ಪ್ರಕರಣಗಳಲ್ಲಿ ಇಲಾಖೆಯು ಸೂಕ್ತ ಕಾನೂನು ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಲಿದೆ. ಇನ್ಮುಂದೆ ಕೇವಲ ಅಧಿಕೃತ ಹಾಗೂ ನೋಂದಾಯಿತ ಮಾಧ್ಯಮಗಳಿಗೆ ಮಾತ್ರ ಪೊಲೀಸ್ ಇಲಾಖೆಯ ಸುದ್ದಿಗೋಷ್ಠಿ ಮತ್ತು ಮಾಹಿತಿ ವಿನಿಮಯಕ್ಕೆ ಅವಕಾಶ ನೀಡಲಾಗುವುದು. ನಕಲಿ ಮತ್ತು ಬ್ಲ್ಯಾಕ್‌ಮೇಲ್ ಮಾಡುವ ಯೂಟ್ಯೂಬರ್‌ಗಳನ್ನು ಸುದ್ದಿಗೋಷ್ಠಿಗಳಿಂದ ಹೊರದಬ್ಬಲಾಗುವುದು ಎಂದು ಎಸ್ಪಿ ಸ್ಪಷ್ಟಪಡಿಸಿದರು.



