State

ಅರಣ್ಯ ಇಲಾಖೆ ಒಪ್ಪಿಗೆ ಇಲ್ಲದೇ 400 ಕೋಟಿ ವೆಚ್ಚ!; ಭಾರೀ ಗೋಲ್ ಮಾಲ್ ಶಂಕೆ

*ಅರಣ್ಯ ಇಲಾಖೆ ಒಪ್ಪಿಗೆ ಇಲ್ಲದೇ 400 ಕೋಟಿ ವೆಚ್ಚ: ಅಧಿಕಾರಿಗಳ ವಿರುದ್ಧ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಗರಂ*

*ಬಳ್ಳಾರಿ ನಾಲಾ ಕಾಮಗಾರಿ ವಿಳಂಬಕ್ಕೆ ಸಚಿವರ ತರಾಟೆ: ಹಿಡಕಲ್, ಮಾರ್ಕಂಡೇಯ ಯೋಜನೆಗಳ ಪ್ರಗತಿ ಪರಿಶೀಲನೆ*

ಬೆಳಗಾವಿ :

“ಬಳ್ಳಾರಿ ನಾಲಾದಲ್ಲಿ ನೂತನ ಡ್ಯಾಂ ನಿರ್ಮಾಣ ಸಂಬಂಧ ಈಗಾಗಲೇ 400 ಕೋಟಿ ರೂ., ಖರ್ಚು ಮಾಡಿದ್ದೀರಿ. ಅರಣ್ಯ ಇಲಾಖೆಯ ಅನುಮತಿಯೇ ಇಲ್ಲದೆ ಇಷ್ಟು ಹಣ ಖರ್ಚು ಮಾಡಿ ಸಾಧಿಸಿದ್ದೇನು? ಇಂತಹ ದುಂದುವೆಚ್ಚಕ್ಕೆ ನಿಮಗೆ ಕುಮ್ಮಕ್ಕು ನೀಡುತ್ತಿರುವವರು ಯಾರು?” ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕರ್ನಾಟಕ ನೀರಾವರಿ ನಿಗಮದ ನೀರಾವರಿ (ಉತ್ತರ) ವಲಯ ಬೆಳಗಾವಿ ವ್ಯಾಪ್ತಿಗೆ ಒಳಪಡುವ ಪ್ರಮುಖ ಯೋಜನೆಗಳ ಕುರಿತು ನಿಗಮದ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ನೂರಾರು ಕೋಟಿ ರೂ.ಗಳ ವೆಚ್ಚದಲ್ಲಿ 20 ವರ್ಷಗಳ ಹಿಂದೆ ಕೈಗೆತ್ತಿಕೊಳ್ಳಲಾಗಿದ್ದ ಯೋಜನೆ ಕುರಿತು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

“ಇಷ್ಟೊಂದು ವರ್ಷಗಳಿಂದ ಕಾಮಗಾರಿ ಏಕೆ ಪೂರ್ಣಗೊಂಡಿಲ್ಲ? ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಕಾಮಗಾರಿ ಪ್ರಾರಂಭವಾಗಿದ್ದು ಹೇಗೆ? ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಇಲ್ಲದೆ ಡ್ಯಾಂ ನಿರ್ಮಾಣಗೊಳ್ಳಲು ಸಾಧ್ಯವೇ ಇಲ್ಲ. ಕೇವಲ ಕಾಲುವೆಗಳಿಗಾಗಿಯೇ ಈಗಾಗಲೇ 400 ಕೋಟಿ ರೂ., ಖರ್ಚು ಮಾಡಲಾಗಿದೆ. ಡ್ಯಾಂ ಇಲ್ಲದೆ ಬರೀ ಕಾಲುವೆ ನಿರ್ಮಿಸಿ ಏನು ಮಾಡುತ್ತೀರಿ? ನೀರಿಲ್ಲದ ಕಾಲುವೆಗಳು ಹಾಳಾಗುವುದಿಲ್ಲವೇ? ಇಷ್ಟೆಲ್ಲ ಹಣ ಪೋಲು ಮಾಡಲು ನಿಮಗೆ ಕುಮ್ಮಕ್ಕು ನೀಡಿದವರು ಯಾರು?” ಎಂದು ಪ್ರಶ್ನಿಸಿ ಕಿಡಿಕಾರಿದರು.

“ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ನೀರಾವರಿ ಯೋಜನೆಗಳ ಪರಿಸ್ಥಿತಿ ಇದೇ ರೀತಿ ಇದೆ. ಸರಕಾರಿ ಅಧಿಕಾರಿಗಳು ಈ ರೀತಿ ಸಾರ್ವಜನಿಕ ಹಣವನ್ನು ದುಂದುವೆಚ್ಚ ಮಾಡುವುದು ಸರಿಯಲ್ಲ. ಜವಾಬ್ದಾರಿಯಿಂದ ವರ್ತಿಸಬೇಕು” ಎಂದು ಎಚ್ಚರಿಸಿದರು.

ಮುಂದೆ ಯಾರೇ ಸಚಿವರಾಗಲಿ. ನಾನೇ ಇರಲಿ. ಆದರೆ, ನಿಮ್ಮ ಕೆಲಸ ನಿಮಗೆ ಸಾರ್ಥಕ ಎನ್ನಿಸಬೇಕು. ನಾವು ಮಾಡುವ ಕೆಲಸ ಇತರರಿಗೆ ಅನುಕೂಲವಾಗಬೇಕು. ಇನ್ನಾದರೂ ಸರಕಾರಿ ಹಣ ಪೋಲು ಮಾಡುವ ಬದಲು, ಪ್ರಮಾಣಿಕವಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

*ಹಿಡಕಲ್ ಡ್ಯಾಂ ಆಧುನೀಕರಣಕ್ಕೆ 3,650 ಕೋಟಿ ರೂ., ಡಿಪಿಆರ್*

ಹಿಡಕಲ್ ಡ್ಯಾಂ ವ್ಯಾಪ್ತಿಯ ಕಾಲುವೆಗಳ ದುರಸ್ತಿ, ಸೋರಿಕೆ ತಡೆ ಹಾಗೂ ಆಧುನೀಕರಣ ಕಾಮಗಾರಿಗಾಗಿ 3,650 ಕೋಟಿ ರೂ., ಮೊತ್ತದ ವಿಸ್ತೃತ ಯೋಜನಾ ವರದಿ (DPR) ಸಲ್ಲಿಸಲಾಗಿದೆ. ಈ ಯೋಜನೆ ಪೂರ್ಣಗೊಂಡರೆ ಎಡದಂಡೆ ವ್ಯಾಪ್ತಿಯ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ. ಈ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಪ್ರತ್ಯೇಕ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಸಚಿವರು ತಿಳಿಸಿದರು.

*ಸಂಪೂರ್ಣ ಮಾಹಿತಿಯೊಂದಿಗೆ ಹಾಜರಾಗಲು ಸೂಚನೆ*

ಹಿಡಕಲ್ ಡ್ಯಾಂನ ಎಡ ಮತ್ತು ಬಲದಂಡೆಗಳ ವಿವರ, ಅಚ್ಚುಕಟ್ಟು ಪ್ರದೇಶದ ವಿವರ ಹಾಗೂ ಬಳ್ಳಾರಿ ನಾಲಾ ಯೋಜನೆ ಕುರಿತು ಸಂಕ್ಷಿಪ್ತ ಟಿಪ್ಪಣಿ ಸಲ್ಲಿಸುವಂತೆ ಸಚಿವರು ಸೂಚಿಸಿದರು.

2005ರಲ್ಲಿ 135 ಕೋಟಿ ರೂ.,ಇದ್ದ ಬಳ್ಳಾರಿ ನಾಲಾ ಯೋಜನಾ ವೆಚ್ಚವು ಈಗ 635 ಕೋಟಿಗೆ ಏರಿಕೆಯಾಗಿದೆ. ಯೋಜನಾ ವೆಚ್ಚ ಹೆಚ್ಚಳ ಕುರಿತು ನಿಗಮದ ಮಂಡಳಿ ಸಭೆಯಲ್ಲಿಟ್ಟು ಅನುಮೋದನೆ ಪಡೆದು, ಅರಣ್ಯ ಇಲಾಖೆಯ ಅನುಮತಿ ಪಡೆದ ಬಳಿಕ ಟೆಂಡರ್ ಪ್ರಕ್ರಿಯೆಗೆ ಹೋಗುವಂತೆ ಸೂಚಿಸಿದ ಸಚಿವರು, ಅರಣ್ಯ ಇಲಾಖೆಗೆ ಪರಿಹಾರಾತ್ಮಕ ಅರಣ್ಯೀಕರಣಕ್ಕೆ (CA Land – 1:2 ಅನುಪಾತ) ನೀಡಲು ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ಗುರುತಿಸಿರುವ ಜಮೀನನ್ನು ತಕ್ಷಣವೇ ಹಸ್ತಾಂತರಿಸಲು ನಿರ್ದೇಶನ ನೀಡಿದರು.

*ಮಾರ್ಕಂಡೇಯ ಡ್ಯಾಂ ಬಲವರ್ಧನೆಗೆ ಸೂಚನೆ*

“ಮಾರ್ಕಂಡೇಯ ಡ್ಯಾಂ ನಿರ್ಮಾಣಗೊಂಡಿದ್ದು, ಗ್ಯಾಲರಿ ತುಂಬಿಕೊಂಡಿದ್ದು, ಡ್ಯಾಂ ಬಲವರ್ಧನೆ (Strengthening) ಕೆಲಸ ಕೈಗೊಳ್ಳಿ. ಯೋಜನೆಯ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ 92 ಕೋಟಿ ರೂ., ಅನುದಾನ ಬಿಡುಗಡೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಜಲಾಶಯದ ಸೋರಿಕೆ ತಡೆಯಲು ತಜ್ಞರ ಅಭಿಪ್ರಾಯ ಪಡೆಯಿರಿ. ವಿತರಣಾ ಕಾಲುವೆಗಳನ್ನು ನಿರ್ಮಿಸದಿದ್ದರೆ ಡ್ಯಾಂ ಇದ್ದು ಏನು ಪ್ರಯೋಜನ? ಮೊದಲು ವಿತರಣಾ ಕಾಲುವೆಗಳ ಕಾಮಗಾರಿ ಪೂರ್ಣಗೊಳಿಸಿ” ಎಂದು ಅಧಿಕಾರಿಗಳಿಗೆ ಗಡುವು ವಿಧಿಸಿದರು.

ಉತ್ತರ ವಲಯದ ಮಾರ್ಕಂಡೇಯ, ಹಿಡಕಲ್ ಹಾಗೂ ಬಳ್ಳಾರಿ ನಾಲಾ ಸೇರಿದಂತೆ ಪ್ರಮುಖ ಐದು ಯೋಜನೆಗಳ ಸಮಗ್ರ ಮಾಹಿತಿ ಸಂಜೆಯೊಳಗೆ ತಲುಪಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

*ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಸಲ್ಲಿಕೆ*

ಮಹಾರಾಷ್ಟ್ರ ಸರ್ಕಾರವು ತಾನು ಬಳಸಿದ ನಂತರದ ಹೆಚ್ಚುವರಿ ನೀರನ್ನು ಕರ್ನಾಟಕಕ್ಕೆ ಬಿಡುತ್ತಿತ್ತು. ಆದರೆ ಈಗ ಜೂನ್‌ನಿಂದ ಅಕ್ಟೋಬರ್‌ವರೆಗೆ ನದಿ ನೀರನ್ನು ಎತ್ತಿ (ಲಿಫ್ಟ್ ಮಾಡಿ) ಬೇರೆಡೆ ತಿರುಗಿಸಲು (ಡೈವರ್ಟ್ ಮಾಡಲು) ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ರೈತರ ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳ ಮೂಲಕ ಮಹಾರಾಷ್ಟ್ರ ಸಿಎಂ ಅವರೊಂದಿಗೆ ಮಾತುಕತೆ ನಡೆಸಿ, ರಾಜ್ಯಕ್ಕೆ ಅನುಕೂಲವಾಗುವಂತೆ ಮನವಿ ಸಲ್ಲಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

*ನೀರಾವರಿ ಕಾಯ್ದೆ ಜಾರಿಗೆ ಚಿಂತನೆ*

ನೀರಾವರಿ ಯೋಜನೆಗಳ ಸೂಕ್ತ ನಿರ್ವಹಣೆಯೊಂದಿಗೆ ಕಾಲುವೆಗಳಿಂದ ನೀರನ್ನು ಅನಧಿಕೃತವಾಗಿ ಪಂಪ್ ಮಾಡುವುದನ್ನು ತಡೆಯಲು ಆದಷ್ಟು ಶೀಘ್ರದಲ್ಲಿ ಸಮಗ್ರ ‘ನೀರಾವರಿ ಕಾಯ್ದೆ’ ರೂಪಿಸಿ ಅನುಷ್ಠಾನಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ಸಭೆಯಲ್ಲಿ ಹಿಪ್ಪರಗಿ, ಘಟಪ್ರಭಾ, ದೂಧ್‌ಗಂಗಾ ಸೇರಿದಂತೆ ಉತ್ತರ ವಲಯ ವ್ಯಾಪ್ತಿಯ ಒಟ್ಟು 17 ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಸಭೆಯಲ್ಲಿ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಥೋಡ್, ವಲಯದ ಮುಖ್ಯ ಎಂಜಿನಿಯರ್ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button