ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟ ಕಬ್ಬು ಬೆಳೆಗಾರರು – ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಡೆಡ್ಲೈನ್

ಬೆಳಗಾವಿ: ಸಿಎಂ ಡಿ.ಕೆ ಶಿವಕುಮಾರ್ ಜೊತೆ ಸಭೆ ವಿಫಲ ಬೆನ್ನಲ್ಲೇ ಕಬ್ಬು ಬೆಳೆಗಾರರ ಹೋರಾಟ ಮುಂದುವರಿದಿದೆ. ಬೆಳಗಾವಿಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ನಡೆಯುತ್ತಿರುವ ಕಬ್ಬು ಬೆಲೆಗಾರರ ಪ್ರತಿಭಟನೆ 4ನೇ ದಿನಕ್ಕೆ ಕಾಲಿಟ್ಟಿದೆ.
ಕಬ್ಬಿಗೆ ಯೋಗ್ಯ ಬೆಲೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ರೈತರು ನಾಳೆ ಮಧ್ಯಾಹ್ನ 3 ಗಂಟೆವರೆಗೆ ಸಿಎಂ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಡೆಡ್ಲೈನ್ ಕೊಟ್ಟಿದ್ದಾರೆ. ಸಿಹಿ ಸುದ್ದಿ ಬರದಿದ್ದರೆ ಉಗ್ರ ಹೋರಾಟ ನಡೆಯಲಿದೆ ಅಂತ ಎಚ್ಚರಿಸಿದ್ದಾರೆ.
ಮತ್ತೊಂದೆಡೆ ಕಬ್ಬು ಬೆಳೆಗಾರರ ಹೋರಾಟಕ್ಕೆ ಸ್ಪಂದನೆ ಸಿಗದ ಹಿನ್ನೆಲೆ ಸಕ್ಕರೆ ಕಾರ್ಖಾನೆಗಳಿಗೆ ಬೀಗ ಜಡೆಯಲು ರೈತರು ಮುಂದಾಗಿದ್ದಾರೆ. ಗೋಕಾಕ್ನಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಒಡೆತನದ ಸತೀಶ್ ಶುಗರ್ಸ್ ಹಾಗೂ ಬಿಜೆಪಿ ಶಾಸಕ ನಿಖಿಲ್ ಕತ್ತಿ ಒಡೆತನದ ಕಾರ್ಖಾನೆಗೆ ಬೀಗ ಹಾಕಲು ರೈತರು ಮುಂದಾಗಿದ್ದಾರೆ.
ಎರಡೂ ಕಾರ್ಖಾನೆಗಳಿಗೆ ತೆರಳಿ ಕಬ್ಬಿಗೆ ಬೆಲೆ ನಿಗದಿಯಾಗುವವರೆಗೂ ಸಕ್ಕರೆ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ, ಕೇಂದ್ರ ಸರ್ಕಾರದ ಡಾ. ರಮೇಶ್ ಚಾಂದ್ ನೇತೃತ್ವದ ಸಮಿತಿ ನಾಳೆ ರಾಜ್ಯಕ್ಕೆ ಭೇಟಿ ನೀಡಲಿದೆ. ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ಮಾಲೀಕರ ಸಮಸ್ಯೆ ಆಲಿಸಲಿರುವ ಸಮಿತಿ, ಬೆಂಗಳೂರಿಗೆ ಬರುವಂತೆ ರೈತ ಹೋರಾಟಗಾರರಿಗೆ ಕರೆ ನೀಡಿದ್ದಾರೆ. ಬೆಂಗಳೂರು ಬೇಡ ಬೆಳಗಾವಿಗೆ ಬಂದು ಸಮಸ್ಯೆ ಆಲಿಸಿ ಎಂದು ಹೋರಾಟಗಾರರು ಪಟ್ಟು ಹಿಡಿದಿದ್ದಾರೆ.


