Crime
Trending

ನಂದಿ ಕಾರ್ಖಾನೆಯ ತೂಕದಲ್ಲಿ ಗೋಲ್‌ಮಾಲ್ ಪ್ರಕರಣ ಎಂಟು ಜನರ ಬಂಧನ ರೂ.11.32 ಕೋಟಿ ವಶ

ವಿಜಯಪುರ: ಕೃಷ್ಣಾ ತೀರದ ಪ್ರತಿಷ್ಠಿತ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ರೈತರ ಹೆಸರಿನಲ್ಲಿ ನಡೆದಿದೆ ಕೋಟ್ಯಂತರ ರೂಪಾಯಿ ಗೋಲ್‌ಮಾಲ್ ಪ್ರಕರಣವನ್ನು ಭೇದಿಸಿದ್ದು, 8 ಆರೋಪಿಗಳನ್ನು ಬಂಧಿಸಿ ಒಟ್ಟು 11.32 ಕೋಟಿ ರೂ. ಹಣ ವಶಪಡಿಸಿಕೊಂಡಿದ್ದಾಗಿ ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ಧರೆಪ್ಪ ದುಂಡಪ್ಪ ನಾವಿ, ಬೆಳಗಾವಿಯ ಯರಗಟ್ಟಿ ಗ್ರಾಮದ ಭೀರಪ್ಪ ಬಸಪ್ಪ ಗಾಡದಾರ, ಯಲ್ಲಪ್ಪ ಬಸಪ್ಪ ಗಾಡದರ, ಆಲಕನೂರ ಗ್ರಾಮದ ಪ್ರಕಾಶ ಸಿದ್ದಲಿಂಗ್ ಗಡ್ಡಿ, ಪರಮಾನಂದ ಪುಂಡಲೀಕ ಗಡ್ಡಿ, ಮಹಾದೇವ ಸಿದ್ದಲಿಂಗ್ ಕಾಂಬಳೆ ಉರ್ಫ್ ಸಿಂಗೆ, ಬಾಳಪ್ಪ ಪಾಂಡು ಚೋಪಡೆ ಹಾಗೂ ಉಗಾರದ ಪ್ರಭಾಕರ ಮಧುಕರ ಸಿಂಗೆ ಬಂಧಿತ ಆರೋಪಿಗಳು.
ಕಾರ್ಖಾನೆಯ ಕಬ್ಬು ತೂಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಧರೆಪ್ಪ ದುಂಡಪ್ಪ ನಾವಿ ಹಾಗೂ ಇತರರು ಸೇರಿಕೊಂಡು 2020-21ರಿಂದ 2025-26ರ ಅವಧಿಯಲ್ಲಿ ವಿವಿಧ ರೈತರ ಹೆಸರಿನಲ್ಲಿ ನಕಲಿ ತೂಕದ ದಾಖಲೆ ಹಾಗೂ ಬೋಗಸ್ ಬಿಲ್ ರಸೀದಿಗಳನ್ನು ಸೃಷ್ಟಿಸಿ, ಸುಮಾರು 1.87 ಕೋಟಿ ರೂ.ಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿ ಕಾರ್ಖಾನೆಗೆ ವಂಚನೆ ಎಸಗಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಬಬಲೇಶ್ವರ ಠಾಣೆಯಲ್ಲಿ 2026 ಫೆ. 12 ರಂದು ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಎಸ್‌ಪಿ ರಾಮನಗೌಡ ಅ. ಹಟ್ಟಿ ಹಾಗೂ ಗ್ರಾಮೀಣ ಉಪವಿಭಾಗದ ಡಿಎಸ್‌ಪಿ ಟಿ.ಎಸ್. ಸುಲ್ಪಿ ಅವರ ಮೇಲ್ವಿಚಾರಣೆಯಲ್ಲಿ, ಸಿಪಿಐ ರಮೇಶ ಅವಜಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು ಎಂದು ಎಸ್‌ಪಿ ನಿಂಬರಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತನಿಖೆ ವೇಳೆ ಕಾರ್ಖಾನೆಯ ತೂಕ ಮಾಪನ ಕೇಂದ್ರದ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು ಪ್ರಮುಖ ಆರೋಪಿ ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ಧರೆಪ್ಪ ದುಂಡಪ್ಪ ನಾವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಆತ ಹಾಗೂ ಇನ್ನೂ ಏಳು ಮಂದಿ ಆರೋಪಿಗಳು ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ವಿವಿಧ ಸಕ್ಕರೆ ಕಾರ್ಖಾನೆಗಳಲ್ಲಿ ಇದೇ ಮಾದರಿಯ ವಂಚನೆ ನಡೆಸಿದ್ದ ಮಾಹಿತಿ ಬಹಿರಂಗವಾಗಿದೆ ಎಂದು ಎಸ್‌ಪಿ ತಿಳಿಸಿದರು.
ಆರೋಪಿಗಳು ಕಾರ್ಖಾನೆಯ ತೂಕ ಮಾಪನ ವ್ಯವಸ್ಥೆಯಲ್ಲಿದ್ದ ಸಿಬ್ಬಂದಿಯ ಸಹಕಾರದಿಂದ ನಕಲಿ ಟೋಕನ್‌ಗಳನ್ನು ಸೃಷ್ಟಿಸಿ, ಕಾರ್ಖಾನೆಗೆ ಬಂದ ಕಬ್ಬಿನ ವಾಹನಗಳಿಗೆ ಅವುಗಳನ್ನು ಜೋಡಿಸಿ, ಹಣವನ್ನು 91 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ರೀತಿ 2020-21ರಿಂದ 2025-26ರ ಅವಧಿಯಲ್ಲಿ ಒಟ್ಟು 34,490.699 ಮೆಟ್ರಿಕ್ ಟನ್ ಕಬ್ಬಿನ ಹೆಸರಿನಲ್ಲಿ ಸುಮಾರು 12.33 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡಿರುವುದು ಪತ್ತೆಯಾಗಿದೆ ಎಂದು ಎಸ್‌ಪಿ ನಿಂಬರಗಿ ವಿವರಿಸಿದರು.
ತನಿಖೆಯ ವೇಳೆ ಪ್ರಮುಖ ಆರೋಪಿ ಧರೆಪ್ಪ ನಾವಿಯಿಂದ 21 ಲಕ್ಷ ರೂ. ನಗದು, ಆತನ ಬ್ಯಾಂಕ್ ಖಾತೆಯಿಂದ 4.80 ಕೋಟಿ ರೂ, ಇತರರ ಬ್ಯಾಂಕ್ ಖಾತೆಗಳಿಂದ 5.48 ಕೋಟಿ ರೂ. ಸೇರಿ ಒಟ್ಟು 10.50 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, 82.07 ಲಕ್ಷ ರೂ. ಹಣವನ್ನು ಬ್ಯಾಂಕ್ ಖಾತೆಗಳಲ್ಲಿ ಫ್ರೀಜ್ ಮಾಡಲಾಗಿದ್ದು, ಒಟ್ಟಾರೆ 11.32 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದರು.
ಎಎಸ್‌ಪಿ ರಾಮನಗೌಡ ಹಟ್ಟಿ, ಡಿಎಸ್‌ಪಿ ಟಿ.ಎಸ್. ಸುಲ್ಪಿ, ಸಿಪಿಐ ರಮೇಶ ಅವಜಿ ಇತರರಿದ್ದರು.
Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button