
ಬೆಳಗಾವಿ: ಹೂಡಿಕೆದಾರರಿಗೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಬರೋಬ್ಬರಿ 4,500 ಕೋಟಿ ರೂಪಾಯಿ ವಂಚಿಸಿದ ಆರೋಪ ಹೊತ್ತಿರುವ ‘ಶಿವಂ ಅಸೋಸಿಯೇಟ್ಸ್’ ಮಾಲೀಕ ಶಿವಾನಂದ ನೀಲಣ್ಣವರ್‌ಗೆ ಬೆಂಗಳೂರಿನ 93ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಕಠಿಣ ಷರತ್ತುಗಳು: ಪ್ರಕರಣದ ಗಾಂಭೀರ್ಯತೆಯನ್ನು ಪರಿಗಣಿಸಿರುವ ನ್ಯಾಯಾಲಯವು ಆರೋಪಿಗೆ ಕೆಲವು ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸಿದೆ. 3 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಹಾಗೂ ಯಾವುದೇ ಕಾರಣಕ್ಕೂ ದೇಶ ಬಿಟ್ಟು ಹೋಗಬಾರದು ಎಂಬ ಪ್ರಮುಖ ಷರತ್ತಿನ ಮೇರೆಗೆ ಈ ಜಾಮೀನು ನೀಡಲಾಗಿದೆ.
ಸೋಮವಾರ ಬಿಡುಗಡೆ ಸಾಧ್ಯತೆ: ಬಹುಕೋಟಿ ಹಣಕಾಸು ವಂಚನೆ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಶಿವಾನಂದ ನೀಲಣ್ಣವರ್ ಸದ್ಯ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿದ್ದಾನೆ. ನ್ಯಾಯಾಲಯದ ಜಾಮೀನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ಆತ ಸೋಮವಾರ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಹಿನ್ನೆಲೆ ಏನು?: ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕನಾಗಿದ್ದ ಶಿವಾನಂದ ನೀಲಣ್ಣವರ್, ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಥವಾ ಸೆಬಿ (SEBI) ಯಿಂದ ಯಾವುದೇ ರೀತಿಯ ಅಧಿಕೃತ ಅನುಮೋದನೆ ಅಥವಾ ಪರವಾನಗಿ ಪಡೆಯದೇ ಕಾನೂನುಬಾಹಿರವಾಗಿ ಹಣಕಾಸು ಸಂಸ್ಥೆ ನಡೆಸುತ್ತಿದ್ದ. ಸಾರ್ವಜನಿಕರಿಗೆ ಅತಿ ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ, ಸಾವಿರಾರು ಹೂಡಿಕೆದಾರರಿಂದ ಸುಮಾರು 4,500 ಕೋಟಿ ರೂ. ಸಂಗ್ರಹಿಸಿ ವಂಚಿಸಿದ್ದ. ಈ ಸಂಬಂಧ ದಾಖಲಾಗಿದ್ದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.



