Local NewsState
Trending

ಶಿವಂ ಅಸೋಸಿಯೇಟ್ಸ್ ಕೋಟಿ ಕೋಟಿ ಹಗರಣದ ರೋಚಕ ರಹಸ್ಯ ಬಿಚ್ಚಿಟ್ಟ ಸಿಐಡಿ ಡಿಐಜಿಪಿ ಡಾ. ಭೀಮಾಶಂಕರ್ ಗುಳೇದ್

ಬೆಳಗಾವಿ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬರೋಬ್ಬರಿ 4,500 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್‌ನನ್ನು ಸಿಐಡಿ ಪೊಲೀಸರು ಬಂಧಿಸಿದ್ದು, ತನಿಖೆಯ ವೇಳೆ ವಂಚನೆ ನಡೆದಿರುವುದು ಸಾಕ್ಷ್ಯ ಸಮೇತ ಸಾಬೀತಾಗಿದೆ. ಈ ಕುರಿತು ಬೆಳಗಾವಿಯಲ್ಲಿ ಮಹತ್ವದ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಿಐಡಿ ಡಿಐಜಿಪಿ ಡಾ. ಭೀಮಾಶಂಕರ್ ಗುಳೇದ್ ಅವರು ಪ್ರಕರಣದ ಸ್ಫೋಟಕ ಮಾಹಿತಿಗಳನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.

ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮೇಲೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಜಂಟಿ ದಾಳಿ ನಡೆದು, ಎಫ್‌ಐಆರ್ ದಾಖಲಾದ ಬಳಿಕವೂ ಸಾರ್ವಜನಿಕರು ಶಿವಂ ಅಸೋಸಿಯೇಟ್ಸ್‌ಗೆ ಮತ್ತೇ 5 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಹಾಗಾಗಿ, ಇನ್ಮುಂದೆಯಾದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳಲಿ ಮತ್ತು ಇಂತಹ ವಂಚನೆಗೆ ಬಲಿಬೀಳದಿರಲಿ ಎಂಬ ಕಾರಣಕ್ಕೆ ಸಿಐಡಿ ಈ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದೆ.

ಹೊಸಬರ ಹಣ ಹಳಬರಿಗೆ ಬಡ್ಡಿ: ‘ಪೊಂಜಿ ಸ್ಕೀಮ್’ ರಹಸ್ಯ ಮುಖವಾಡ ಕಳಚಿದ ಸಿಐಡಿ
ಸಿಐಡಿ ಡಿಐಜಿಪಿ ಮಾಹಿತಿ ನೀಡಿರುವ ಪ್ರಕಾರ, ಶಿವಾನಂದ ನೀಲಣ್ಣವರ್ ಈವರೆಗೆ ಸುಮಾರು 40,700 ಹೂಡಿಕೆದಾರರಿಂದ ಒಟ್ಟು 2,400 ಕೋಟಿ ರೂಪಾಯಿ ಸಂಗ್ರಹಿಸಿದ್ದಾನೆ. ಈ ಪೈಕಿ ಬಹುಪಾಲು ಹಣವನ್ನು ಸಾರ್ವಜನಿಕರಿಗೆ ಹಿಂದಿರುಗಿಸಿದ್ದಾನೆ. ಹೊಸದಾಗಿ ಬರುತ್ತಿದ್ದ ಹೂಡಿಕೆದಾರರ ಹಣವನ್ನು ಹಳಬರಿಗೆ ಬಡ್ಡಿಯ ರೂಪದಲ್ಲಿ ಹಂಚಲಾಗುತ್ತಿತ್ತು. ಆದರೆ, ಹೊಸದಾಗಿ ಸಂಗ್ರಹವಾಗುತ್ತಿದ್ದ ಹಣಕ್ಕಿಂತ ಹಳಬರಿಗೆ ಕೊಡಬೇಕಾದ ಬಡ್ಡಿಯ ಮೊತ್ತವೇ ಹೆಚ್ಚಾದಾಗ ಇಡೀ ವ್ಯವಸ್ಥೆ ಕುಸಿದು ಬಿದ್ದು, ವಂಚನೆಯ ರಹಸ್ಯ ಬಯಲಾಗಿದೆ.

ಷೇರು ಮಾರುಕಟ್ಟೆಯಲ್ಲಿ ನಷ್ಟದ ಮೂಟೆ, ಸ್ವಂತಕ್ಕೆ ಬಳಕೆ: ಸಂಗ್ರಹಿಸಿದ ಹಣದಲ್ಲಿ 540 ಕೋಟಿ ರೂಪಾಯಿಯನ್ನು ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಲಾಗಿದ್ದು, ಅದರಲ್ಲಿ 170 ಕೋಟಿ ರೂಪಾಯಿ ನಷ್ಟ ಮಾಡಿಕೊಳ್ಳಲಾಗಿದೆ. ಸದ್ಯದ ತನಿಖೆಯಲ್ಲಿ 660 ಕೋಟಿ ರೂ. ಕೊರತೆ ಕಂಡುಬಂದಿದ್ದು, ಇದರಲ್ಲಿ 330 ಕೋಟಿ ರೂ. ರಿಕವರಿ ಮಾಡಬಹುದು ಎಂದು ಅಂದಾಜಿಸಲಾಗಿದೆ. ಮಾಲೀಕ ನೀಲಣ್ಣವರ್ ಕಂಪನಿಯಿಂದ ಕಾನೂನುಬಾಹಿರವಾಗಿ 55 ಕೋಟಿ ರೂ. ಹಣವನ್ನು ತನ್ನ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿದ್ದಾನಲ್ಲದೆ, ಪ್ರಕರಣದಲ್ಲಿ ಮತ್ತೊಬ್ಬ ಪಾಲುದಾರನೂ ಶಾಮೀಲಾಗಿದ್ದಾನೆ.

ಐಷಾರಾಮಿ ಕಾರುಗಳ ಜಪ್ತಿ & ಸಿನೆಮಾ ಸ್ಟಾರ್‌ಗಳಿಗೆ ನೋಟಿಸ್ ಭೀತಿ: ಆರೋಪಿಯಿಂದ ಈಗಾಗಲೇ 5 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದ್ದು, ಸಂಸ್ಥೆಯ ಹಣದಲ್ಲಿ ಖರೀದಿಸಲಾಗಿದ್ದ ಇನ್ನುಳಿದ 11 ವೋಲ್ವೋ XC90 ಐಷಾರಾಮಿ ಕಾರುಗಳನ್ನು ಶೀಘ್ರದಲ್ಲೇ ವಶಪಡಿಸಿಕೊಳ್ಳಲಾಗುವುದು ಎಂದು ಸಿಐಡಿ ತಿಳಿಸಿದೆ. ಇನ್ನು ತನಿಖೆಯ ವೇಳೆ ಒಟ್ಟು 30 ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದು, ಇವುಗಳಲ್ಲಿ 7 ಖಾತೆಗಳಲ್ಲಿ ಭಾರಿ ಪ್ರಮಾಣದ ಹಣ ವರ್ಗಾವಣೆಯಾಗಿದೆ. ಕೇವಲ ಒಂದೇ ಒಂದು ಬ್ಯಾಂಕ್ ಖಾತೆಯಲ್ಲಿ ಬರೋಬ್ಬರಿ 36,200 ಪುಟಗಳಷ್ಟು ದೀರ್ಘಾವಧಿಯ ವಹಿವಾಟಿನ ದಾಖಲೆ ಪತ್ತೆಯಾಗಿದ್ದು, ಸಿಐಡಿ ಇದರ ತನಿಖೆ ನಡೆಸುತ್ತಿದೆ. ಈ ಸಂಸ್ಥೆಯಿಂದ ಸಿನಿಮಾ ಸ್ಟಾರ್‌ಗಳಿಗೆ ಹಣ ಸಂದಾಯವಾಗಿರುವ ಶಂಕೆ ಇದ್ದು, ಸಾಕ್ಷ್ಯ ಸಿಕ್ಕರೆ ಸಿನೆಮಾ ತಾರೆಯರಿಗೂ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಾಗುವುದು ಎಂದು ಡಿಐಜಿಪಿ ಎಚ್ಚರಿಸಿದ್ದಾರೆ.

ಮಹಾರಾಷ್ಟ್ರ ಲಿಂಕ್ ಹಾಗೂ ಹಣ ಮರುಪಾವತಿ ಹೇಗೆ?: ಈ ವಂಚನೆಯ ಜಾಲ ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲೂ ಭಾರಿ ಪ್ರಮಾಣದಲ್ಲಿ ಹರಡಿದ್ದು, ಅಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಲಾಗಿದೆ. ಹೀಗಾಗಿ ಮಹಾರಾಷ್ಟ್ರ ಪೊಲೀಸರ ಸಹಕಾರದೊಂದಿಗೆ ತನಿಖೆಯನ್ನು ತೀವ್ರಗೊಳಿಸಲಾಗಿದೆ. ಕಂಪನಿ ಸಂಪೂರ್ಣವಾಗಿ ಮುಳುಗುವ ಮುನ್ನವೇ ದಾಳಿ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಹೂಡಿಕೆದಾರರಿಗೆ ನಿಯಮಬಾಹಿರವಾಗಿ ಹೋಗಿರುವ 400 ಕೋಟಿ ರೂ. ಹೆಚ್ಚುವರಿ ಹಣವನ್ನು ವಾಪಸ್ ಪಡೆದು ಬಾಕಿ ಉಳಿದಿರುವ ಹೂಡಿಕೆದಾರರಿಗೆ ಹಂಚಲು ಸಿಐಡಿ ನಿರ್ಧರಿಸಿದೆ.

ಸದ್ಯ ರಿಕವರಿ ಮಾಡಲಾಗುವ ಹಣವನ್ನು ‘ಬಡ್ಸ್’ (BUDS) ಕಾಯ್ದೆ ಮುಖ್ಯಸ್ಥರಾದ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರಿಗೆ ಹಸ್ತಾಂತರಿಸಲಾಗುವುದು. ತದನಂತರ ಅವರು ಕಾನೂನು ಪ್ರಕ್ರಿಯೆಗಳ ಮೂಲಕ ಸಾರ್ವಜನಿಕರಿಗೆ ಹಣವನ್ನು ವಾಪಸ್ ಮಾಡಲಿದ್ದಾರೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button