ಬೆಳಗಾವಿಯ ಕೆಎಸ್‌ಆರ್‌ಟಿಸಿ ಡಿಪೋ-1 ರಲ್ಲಿ ಮೆಕ್ಯಾನಿಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ನ್ಯಾಯ ಸಿಗುವವರೆಗೂ ಶವ ತೆಗೆದುಕೊಂಡು ಹೋಗುವುದಿಲ್ಲ ಕುಟುಂಬಸ್ಥರ ಆಕ್ರೋಶ

ಬೆಳಗಾವಿ, ಮಾರ್ಚ್ 08: ಕೆಎಸ್‌ಆರ್‌ಟಿಸಿ (NWRTC) ಬೆಳಗಾವಿ ಡಿಪೋ 1ರ ಮೆಕ್ಯಾನಿಕ್ ಬಸ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಸ್ ಮೆಕ್ಯಾನಿಕ್ ಕೇಶವ ಕಮಡೊಳಿ (57) ಮೃತ ದುರ್ದೈವಿ. ಮೃತ ಕೇಶವ ಕಮಡೊಳಿ ಬೆಳಗಾವಿಯ ಹಳೇ ಗಾಂಧಿನಗರದ ನಿವಾಸಿಯಾಗಿದ್ದು, ಕೆಎಸ್‌ಆರ್‌ಟಿಸಿ ಬಸ್ ವಾಶಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕೇಶವ್ ಅವರಿಗೆ ಬೆನ್ನು ನೋವಿದ್ದರೂ ಅಧಿಕಾರಿಗಳು ಪಂಚರ್ ಕೆಲಸಕ್ಕೆ ಬದಲಾಯಿದ್ದರು ಎನ್ನಲಾಗಿದೆ
ಕೇಶವ ಅವರ ಡ್ಯೂಟಿ ಬದಲಿಸದಂತೆ ಡಿಪೋ ಮ್ಯಾನೇಜರ್ ಲಿಂಗರಾಜ ಲಾಠಿ ಅವರು ಸಹಾಯಕ ಕಾರ್ಯ ಅಧೀಕ್ಷಕ ಅನಿಲ್ ಬಾಂದೇಕರ್ ಅವರಿಗೆ ಮನವಿ ಮಾಡಿದ್ದರು. ಆದರೂ, ಕೂಡ ಡ್ಯೂಟಿ ಬದಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಡ್ಯೂಟಿ ಬದಲಿಸಿದ್ದಕ್ಕೆ ಮತ್ತು ಕೆಲಸದ ಒತ್ತಡ ತಡೆದುಕೊಳ್ಳಲು ಆಗದೆ ಕೇಶವ ಕಮಡೊಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನು, ಅಧಿಕಾರಿಗಳ ವಿರುದ್ಧ ಮೃತ ಕೇಶವ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಶವ್ರನ್ನು ಮಾನಸಿಕ ಅಸ್ವಸ್ಥ ಎಂದ ಅಧಿಕಾರಿಗಳನ್ನು ಕುಟುಂಬಸ್ಥರು ತರಾಟೆ ತೆಗೆದುಕೊಂಡಿದ್ದಾರೆ. ಯಾವ ಆಧಾರದಲ್ಲಿ ಮಾನಸಿಕ ಅಸ್ವಸ್ಥ ಎಂದು ಹೇಳುತ್ತಿದ್ದೀರಿ? ಹುಷಾರಿಲ್ಲ ಡ್ಯೂಟಿ ಬದಲಿಸಬೇಡಿ ಎಂದು ಮನವಿ ಮಾಡಿದ್ವಿ. ಆದರೆ, ಈಗ ಮಾನಸಿಕ ಅಸ್ವಸ್ಥ ಅಂತ ಸುಳ್ಳು ಹೇಳ್ತಿದ್ದೀರಿ. ನ್ಯಾಯ ಸಿಗುವವರೆಗೂ ಶವ ತೆಗೆದುಕೊಂಡು ಹೋಗುವುದಿಲ್ಲ ಎಂದು ಕಿಡಿಕಾರಿದ್ದಾರೆ.


