ಬೆಳಗಾವಿ ನಗರದಲ್ಲಿ ಹೋಳಿ ಹಬ್ಬಕ್ಕೆ ಪೊಲೀಸ್ ಹೈ ಅಲರ್ಟ್: ನಿಯಮ ಮೀರಿದರೆ ಕ್ರಮ, ಅತೀ ಹೆಚ್ಚು ಧ್ವನಿವರ್ಧಕ ಬಳಸುವಂತಿಲ್ಲ! ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಖಡಕ್ ಎಚ್ಚರಿಕೆ

ಬೆಳಗಾವಿ ಕುಂದಾನಗರಿಯಲ್ಲಿ ಹೋಳಿ ಮತ್ತು ರಂಗಪಂಚಮಿ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಬ್ಬದ ನೆಪದಲ್ಲಿ ಅತಿರೇಕದ ವರ್ತನೆ ತೋರುವವರ ವಿರುದ್ಧ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಖಡಕ್ ಎಚ್ಚರಿಕೆ ನೀಡಿದ್ದು, ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಮಾರ್ಚ್ 2 ರಂದು 329 ಜಾಗಗಳಲ್ಲಿ ಕಾಮದಹನ ಹಾಗೂ ಮಾರ್ಚ್ 3 ರಂದು ಸುಮಾರು 180 ಕಡೆಗಳಲ್ಲಿ ರಂಗಪಂಚಮಿ ಬಣ್ಣದ ಆಟ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ. ಹಬ್ಬದ ಭದ್ರತೆಗಾಗಿ 1000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ ಹಾಗೂ ಗೃಹರಕ್ಷಕ ದಳವನ್ನು ನಿಯೋಜಿಸಲಾಗಿದೆ. ನಗರದ 19 ಆಯಕಟ್ಟಿನ ಸ್ಥಳಗಳಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದ್ದು, ಕುಡಿದು ವಾಹನ ಚಾಲನೆ ಮಾಡುವವರು ಮತ್ತು ಚಾಕು-ಚೂರಿಯಂತಹ ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಪಿಯುಸಿ ಸೇರಿದಂತೆ ವಿವಿಧ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳ ಬಳಕೆಗೆ ಮಿತಿ ಹೇರಲಾಗಿದೆ. 75 ಡೆಸಿಬಲ್‌ಗಿಂತ ಹೆಚ್ಚು ಶಬ್ದ ಬಳಸಿದರೆ ಉಪಕರಣಗಳನ್ನು ಜಪ್ತಿ ಮಾಡಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ. ಹಬ್ಬದ ಮೇಲೆ ಕಣ್ಗಾವಲು ಇಡಲು 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಹಾಗೂ 8 ಡ್ರೋನ್’ಗಳನ್ನು ಬಳಸಲಾಗುತ್ತಿದೆ. ಸಾರ್ವಜನಿಕರು ಕೇವಲ ನೈಸರ್ಗಿಕ ಬಣ್ಣಗಳನ್ನು ಬಳಸಬೇಕು, ಯಾರ ಮೇಲೆಯೂ ಒತ್ತಾಯಪೂರ್ವಕವಾಗಿ ಬಣ್ಣ ಹಚ್ಚಬಾರದು ಹಾಗೂ ಸಂಚಾರ ದಟ್ಟಣೆಯಾಗದಂತೆ ಸಹಕರಿಸಬೇಕು ಎಂದು ಅವರು ವಿನಂತಿಸಿದ್ದಾರೆ. ಸಾರ್ವಜನಿಕರ ಸಹಕಾರದೊಂದಿಗೆ ಶಾಂತಿಯುತ ಹೋಳಿ ಆಚರಣೆಗೆ ಪೊಲೀಸ್ ಇಲಾಖೆ ಕರೆ ನೀಡಿದೆ.


