
ಬೆಂಗಳೂರು, ಮಾರ್ಚ್, 08: ಸಿಎಂ ಸಿದ್ದರಾಮಯ್ಯ ಅವರು ಮಾರ್ಚ್ 7ರಂದು ರಾಜ್ಯ ಬಜೆಟ್ ಮಂಡನೆ ಮಾಡಿದ್ದಾರೆ. ಈ ಕುರಿತು ವಿರೋಧ ಪಕ್ಷದ ನಾಯಕರು ಟೀಕೆ ಮಾಡುವುದಲ್ಲದೆ, ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಕೆಲವರು ಸರ್ಕಾರವು ರಾಜ್ಯದ ಜನರ ಮೇಲೆ ಸಾಲದ ಹೊರೆ ಹೊರಿಸಿದೆ ಎಂದು ಹೇಳಿದರೆ, ಇನ್ನೂ ಕೆಲವರು ಮುಸ್ಲಿಮರಿಗೆ ಹೆಚ್ಚು ಆದ್ಯತೆ ನೀಡಿದೆ ಅಂತಲೂ ಆಕ್ರೋಶ ಹೊರಹಾಕಿದ್ದಾರೆ.
ಅದರಲ್ಲೂ ಯತ್ನಾಳ್ ಅವರು ಇದು ಸಂಪೂರ್ಣ ಮುಸ್ಲಿಂ ಪರ ಬಜೆಟ್ ಎಂದು ಆರೋಪ ಮಾಡಿದ್ದರು. ಇವರಷ್ಟೇ ಅಲ್ಲದೆ ಬಹುತೇಕ ಬಿಜೆಪಿ ನಾಯಕರು ಇದೇ ಹೇಳಿಕೆಯನ್ನೇ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಸಚಿವ ಜಮೀರ್ ಅಹ್ಮದ್ ಅವರು ನಮ್ಮ ಸಮುದಾಯವರಿಗೆ ಸರ್ಕಾರ ಬಜೆಟ್‌ನಲ್ಲಿ ಕಡಿಮೆ ಅನುದಾನ ಘೋಷಣೆ ಮಾಡಿದೆ ಎಂದು ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಬಜೆಟ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ 4,700 ಕೋಟಿ ರೂಪಾಯಿ ಅನುದಾನವನ್ನು ಘೋಷಣೆ ಮಾಡಿದ್ದಾರೆ. ಇದರಲ್ಲಿ ಮಸೀದಿ ಇಮಾಮ್ಗಳ ಗೌರವಧನ ಹೆಚ್ಚಳ, ವಕ್ಫ್ ಸಂಸ್ಥೆಗಳ ಜೀರ್ಣೋದ್ಧಾರ ಸೇರಿದಂತೆ ಹಲವು ಯೋಜನೆಗಳಿಗೆ ಹಣ ಮೀಸಲಾಗಿಸಲಾಗಿದೆ.
ಇನ್ನು ಬಿಜೆಪಿಯ ಟೀಕೆಗೆ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್, ಈ ಬಜೆಟ್ ಅನ್ನು ಮುಸ್ಲಿಂ ಬಜೆಟ್ ಎಂದು ಕರೆದಿರುವ ಆರೋಪಗಳನ್ನು ತಿರಸ್ಕರಿಸಿದರು. ಕರ್ನಾಟಕ ರಾಜ್ಯದಲ್ಲಿ ಮುಸ್ಲಿಂ ಸಮುದಾಯವು ಒಟ್ಟು ಜನಸಂಖ್ಯೆಯ ಶೇಕಡ 14ರಷ್ಟು ಹೊಂದಿದೆ. ಈ ಲೆಕ್ಕಾಚಾರದ ಪ್ರಕಾರ, ಮುಸ್ಲಿಂ ಸಮುದಾಯಕ್ಕೆ ಕನಿಷ್ಠ 60,000 ಕೋಟಿ ರೂಪಾಯಿ ಅನುದಾನ ನೀಡಬೇಕಾಗಿತ್ತು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಆದರೆ, ಈ ಬಾರಿ ಬಜೆಟ್‌ನಲ್ಲಿ ಕೇವಲ 4,700 ಕೋಟಿ ರೂಪಾಯಿ ಮಾತ್ರ ಮುಸ್ಲಿಂ ಸಮುದಾಯಕ್ಕೆ ಮೀಸಲಾಗಿದ್ದು, ಇದು ಸಮುದಾಯದ ಹಕ್ಕಿಗೆ ತಕ್ಕ ಮಟ್ಟಿಗೆ ಕಡಿಮೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಸಿದರು. ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖವಾಗಿದೆ ಎಂಬ ನಿಲುವು ಹೊಂದಿ ಸರ್ಕಾರವು ಈ ಭಾಗದಲ್ಲಿ ಹೆಚ್ಚಿನ ಅನುದಾನವನ್ನು ಬಳಸಲು ಮುಂದಾಗಿದೆ ಎಂದು ಹೇಳಿದರು.
ಬಿಜೆಪಿಯವರಿಗೆ ಸಾಮಾನ್ಯ ಜ್ಞಾನವಿಲ್ಲವೇ? ಎಂದು ಪ್ರಶ್ನಿಸಿದ ಜಮೀರ್ ಅಹ್ಮದ್ ಖಾನ್, ಮುಸ್ಲಿಂ ಸಮುದಾಯಕ್ಕೆ ನೀಡಲಾಗಿರುವ ಅನುದಾನವು ಅವರ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿಲ್ಲ ಎಂದು ಹೇಳಿದರು. 2025-26ನೇ ಸಾಲಿನ ಬಜೆಟ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ 4,700 ಕೋಟಿ ರೂಪಾಯಿ ಮೀಸಲಾಗಿದ್ದು, ಇದು ಸಮುದಾಯದ ಶೇಕಡ 14ರಷ್ಟು ಜನಸಂಖ್ಯೆಗೆ ಅನುಗುಣವಾಗಿ ಕಡಿಮೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಜೆಟ್‌ನಲ್ಲಿ ಸಮುದಾಯಕ್ಕೆ ಕೊಡುಗೆಗಳೇನು?
* ಅಲ್ಪಸಂಖ್ಯಾತ ಮಹಿಳೆಯರ ಉನ್ನತ ಶಿಕ್ಷಣಕ್ಕೆ ಪೂರಕವಾಗಿ 2024-25ನೇ ಸಾಲಿನಲ್ಲಿ ವಕ್ಸ್ ಸಂಸ್ಥೆಗಳ ಖಾಲಿ ನಿವೇಶನಗಳಲ್ಲಿ 15 ಮಹಿಳಾ ಕಾಲೇಜುಗಳ ನಿರ್ಮಾಣ
* 2025-26ನೇ ಸಾಲಿನಲ್ಲಿ 16 ಹೊಸ ಮಹಿಳಾ ಕಾಲೇಜುಗಳನ್ನು ಸ್ಥಾಪನೆ
* ಆಯ್ದ 100 ಉರ್ದು ಶಾಲೆಗಳ ಉನ್ನತೀಕರಣ
* ಮೌಲಾನಾ ಆಜಾದ್ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಣ
* ಮೌಲಾನಾ ಆಜಾದ್ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಣ
* ಅಲ್ಪಸಂಖ್ಯಾತ ಮೊರಾಜಿ ಶಾಲೆಗಳಲ್ಲಿ ಕಾಮರ್ಸ್ ವಿಭಾಗ
* ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ 1000 ಕೋಟಿ ರೂಪಾಯಿ ಕ್ರಿಯಾ ಯೋಜನೆ
* ಮದರಸಾಗಳಲ್ಲಿ ಕಂಪ್ಯೂಟರ್ ಸ್ಮಾರ್ಟ್ ಬೋರ್ಡ್ ಸೌಲಭ್ಯ
* ವಕ್ಫ್ ಆಸ್ತಿ ಸಂರಕ್ಷಣೆಗೆ 150 ಕೋಟಿ ರೂಪಾಯಿ
* ಪದವಿ ಶಿಕ್ಷಣ ವಂಚಿತ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ KSOU ಕೇಂದ್ರ
* ಬೆಂಗಳೂರಿನ ಹಜ್ ಭವನದಲ್ಲಿ KSOU ಪ್ರಾದೇಶಿಕ ಕೇಂದ್ರ
* ಅಲ್ಪಸಂಖ್ಯಾತ 25 ಸಾವಿರ ವಿದ್ಯಾರ್ಥಿನಿಯರಿಗೆ ರಕ್ಷಣಾ ಕೌಶಲ್ಯ ತರಬೇತಿ
* ಅಲ್ಪಸಂಖ್ಯಾತ ಸರಳ ವಿವಾಹಕ್ಕೆ ಪ್ರೋತ್ಸಾಹ
* ಸಾಮೂಹಿಕ ವಿವಾಹಗಳ ಪ್ರತಿಜೋಡಿಗೆ 50,000 ರೂಪಾಯಿ ಸಹಾಯ
* ಹಜ್ ಯಾತ್ರಿಕರಿಗೆ ಮೂಲಸೌಕರ್ಯ ಸೌಲಭ್ಯ ಹೆಚ್ಚಳ
* ಬೆಂಗಳೂರಿನ ಹಜ್ ಭವನದಲ್ಲಿ ಹೆಚ್ಚುವರಿ ಕಟ್ಟಡ



