ಬೆಳಗಾವಿ | ಇದು ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣಕ್ಕೆ ಎದುರಾಗಿರುವ ಸಂಕಷ್ಟ.
ಬೆಳಗಾವಿ | ಎಂ.ಕೆ.ಹುಬ್ಬಳ್ಳಿ: ಪಟ್ಟಣ ಪಂಚಾಯಿತಿ: ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತಾಪತ್ರಯ ತಪ್ಪಿಲ್ಲ. ಉತ್ತಮ ಚರಂಡಿ, ರಸ್ತೆಗಳಿಲ್ಲ. ಬಸ್‌ಗಾಗಿ ಕಾಯುತ್ತ ನಿಲ್ಲಲು ಸುಸಜ್ಜಿತ ತಂಗುದಾಣವಿಲ್ಲ

ಎಂ.ಕೆ.ಹುಬ್ಬಳ್ಳಿ: ಮಲಪ್ರಭೆ ಮಡಿಲಲ್ಲಿ ಇದ್ದರೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತಾಪತ್ರಯ ತಪ್ಪಿಲ್ಲ. ಉತ್ತಮ ಚರಂಡಿ, ರಸ್ತೆಗಳಿಲ್ಲ. ಬಸ್‌ಗಾಗಿ ಕಾಯುತ್ತ ನಿಲ್ಲಲು ಸುಸಜ್ಜಿತ ತಂಗುದಾಣವಿಲ್ಲ. ಹಲವು ಇಲಾಖೆಗಳ ಕಚೇರಿಗಳೇ ಇತ್ತ ಮುಖಮಾಡಿಲ್ಲ…
ಇದು ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣಕ್ಕೆ ಎದುರಾಗಿರುವ ಸಂಕಷ್ಟ.
ಸುಮಾರು 20 ಸಾವಿರ ಜನಸಂಖ್ಯೆ ಹೊಂದಿದ ಈ ಊರು, 2015ರಲ್ಲಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ. ಆದರೆ, ಮೂಲಸೌಕರ್ಯಗಳು ಇನ್ನೂ ಸುಧಾರಿಸಿಲ್ಲ.
‘ಅಲ್ಲಲ್ಲಿ ಚರಂಡಿ, ರಸ್ತೆ ನಿರ್ಮಾಣ ಮತ್ತಿತರ ಸಣ್ಣ-ಪುಟ್ಟ ಅಭಿವೃದ್ಧಿ ಕೆಲಸ ಬಿಟ್ಟರೆ, ಗಮನಸೆಳೆಯುವಂಥ ಅಭಿವೃದ್ಧಿ ಕೆಲಸವಾಗಿಲ್ಲ. ಹೋಬಳಿ ಸ್ಥಾನಮಾನವೂ ಇನ್ನೂ ಸಿಕ್ಕಿಲ್ಲ’ ಎಂಬುದು ಸ್ಥಳೀಯರ ದೂರು.
ಬೇಸಿಗೆಯಲ್ಲಿ ಜಲಸಂಕಷ್ಟ:
ಎಂ.ಕೆ.ಹುಬ್ಬಳ್ಳಿ ಪಕ್ಕದಲ್ಲೇ ಮಲಪ್ರಭಾ ನದಿ ಹರಿದಿದ್ದರೂ, ಪ್ರತಿವರ್ಷ ಬೇಸಿಗೆಯಲ್ಲಿ ಜಲಸಂಕಷ್ಟ ತಲೆದೋರುತ್ತದೆ. 32 ಕೊಳವೆಬಾವಿಗಳಿವೆ. ಆದರೆ, ಬೇಸಿಗೆಯಲ್ಲಿ ಮಲಪ್ರಭೆಯೊಡಲು ಬರಿದಾಗುತ್ತದೆ. ಕೊಳವೆಬಾವಿಗಳಲ್ಲೂ ಅಂತರ್ಜಲ ಮಟ್ಟ ಕುಸಿಯುತ್ತದೆ.
ಇಲ್ಲಿ 3,400ಕ್ಕೂ ಅಧಿಕ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದ್ದು, ಕೆಲವು ಬಡಾವಣೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತದೆ. ಆದರೆ, ಗಾಂಧಿ ನಗರ, ಬಸವ ನಗರ, ಚನ್ನಮ್ಮ ನಗರ, ಹನುಮಾನ ನಗರ, ಸಂಬಣ್ಣವರ ಓಣಿಯಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಚನ್ನಮ್ಮ ನಗರ, ಜನತಾ ಕಾಲೊನಿ ಮತ್ತಿತರ ಪ್ರದೇಶಗಳಲ್ಲಿ ಇರುವ ಚರಂಡಿಗಳು ನಿರ್ವಹಣೆ ಸಮಸ್ಯೆ ಎದುರಿಸುತ್ತಿವೆ.
ಕುಡಿಯುವ ನೀರು ಸರಬರಾಜು ಮಾಡಲು ಕೈಗೊಂಡ ಪೈಪ್‌ಲೈನ್ ಕಾಮಗಾರಿ ಹಿನ್ನೆಲೆಯಲ್ಲಿ ಪಟ್ಟಣದ ರಸ್ತೆಗಳೆಲ್ಲ ಹಾಳಾಗಿದ್ದು, ಸವಾರರು ಸರ್ಕಸ್ ಮಾಡುತ್ತ ಸಂಚರಿಸುವಂತಾಗಿದೆ. ಖಾನಾಪುರ, ವೀರಾಪುರ, ಹಟ್ಟಿಹೊಳಿ ಗ್ರಾಮದ ಕಡೆಯಿಂದ ಬರುವವರಿಗೆ ರಾಷ್ಟ್ರೀಯ ಹೆದ್ದಾರಿ ತಲುಪಲು ಬೈಪಾಸ್ ರಸ್ತೆ ನಿರ್ಮಿಸಲಾಗಿದೆ. ಆದರೆ, ಮಾಹಿತಿ ಫಲಕ ಇಲ್ಲದ್ದರಿಂದ ಸವಾರರು ಪಟ್ಟಣ ಪ್ರವೇಶಿಸಿ ಇಕ್ಕಟ್ಟಾದ ರಸ್ತೆಯಲ್ಲಿ ಸಾಗುವುದು ಸಾಮಾನ್ಯವಾಗಿದೆ. ಇದರಿಂದ ಪಟ್ಟಣದಲ್ಲಿ ಸಂಚಾರ ದಟ್ಟಣೆಯೂ ಹೆಚ್ಚಿ, ಪಾದಚಾರಿಗಳು, ವೃದ್ಧರು ಮತ್ತು ಶಾಲಾ ಮಕ್ಕಳಿಗೆ ಕಿರಿಕಿರಿ ಉಂಟಾಗುತ್ತಿದೆ.
ಸ್ವಂತ ಕಟ್ಟಡವಿಲ್ಲ:
ಜನರಿಗೆ ತ್ವರಿತವಾಗಿ ಸೇವೆ ಒದಗಿಸಲು ತಲೆ ಎತ್ತಿದ ಪಟ್ಟಣ ಪಂಚಾಯಿತಿಗೇ ಸ್ವಂತ ಕಟ್ಟಡವಿಲ್ಲ. ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲೇ ಅದು ಮುನ್ನಡೆಯುತ್ತಿದೆ. ಅಲ್ಲಿಯೂ ಹೇಳಿಕೊಳ್ಳುವಂಥ ಮೂಲಸೌಕರ್ಯ ಇಲ್ಲದ್ದರಿಂದ ಜನ ತೊಂದರೆ ಅನುಭವಿಸುವಂತಾಗಿದೆ. ಪಟ್ಟಣದಲ್ಲಿ 3,200ಕ್ಕೂ ಅಧಿಕ ಆಸ್ತಿಗಳಿದ್ದು, ವಾರ್ಷಿಕ ₹40 ಲಕ್ಷ ತೆರಿಗೆ ವಸೂಲಾತಿ ಗುರಿ ಹಾಕಿಕೊಳ್ಳಲಾಗಿದೆ. ಸುಮಾರು ₹30 ಲಕ್ಷದವರೆಗೆ ತೆರಿಗೆ ಸಂಗ್ರಹವಾಗುತ್ತಿದೆ.
ಇಲ್ಲಿರುವ ಸರ್ಕಾರಿ ಶಾಲೆಗಳೂ ಸುಸ್ಥಿತಿಯಲ್ಲಿ ಇಲ್ಲ. ಜಾಗದ ಕೊರತೆಯಿಂದ ಹಲವು ವರ್ಷಗಳ ಹಿಂದೆ ಇಟಗಿ ಕ್ರಾಸ್‌ಗೆ ಸ್ಥಳಾಂತರವಾಗಿದ್ದ ಹೆಸ್ಕಾಂ ಉಪಕಚೇರಿ ಮರಳಿ ಇಲ್ಲಿಗೆ ಬಂದಿಲ್ಲ. ‘ಗಾಯರಾಣ ಜಾಗವಿಲ್ಲ’ ಎಂಬ ನೆಪಹೇಳಿ, ಸರ್ಕಾರಿ ಇಲಾಖೆ ಕಚೇರಿಗಳ ನಿರ್ಮಾಣಕ್ಕೆ ಹಿಂದೇಟು ಹಾಕಲಾಗುತ್ತಿದೆ. ಇದರಿಂದ ಅಭಿವೃದ್ಧಿಗೆ ಪೆಟ್ಟು ಬೀಳುತ್ತಿದೆ.
ನಿರ್ಮಾಣವಾಗಿ ವರ್ಷ ಕಳೆದರೂ ಆರಂಭಗೊಳ್ಳದ ಇಂದಿರಾ ಕ್ಯಾಂಟೀನ್
ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಟ್ಟಣ ಪಂಚಾಯಿತಿ ಕಟ್ಟಡ
ಬಸ್‌ಗಾಗಿ ಕಾಯುತ್ತ ತಗಡಿನ ಶೆಡ್ ಕೆಳಗೆ ಕುಳಿತಿರುವ ಪ್ರಯಾಣಿಕರು
ಸುಸಜ್ಜಿತ ಬಸ್ ತಂಗುದಾಣವಿಲ್ಲ ಸುತ್ತಲಿನ 20ಕ್ಕೂ ಅಧಿಕ ಹಳ್ಳಿಗಳಿಗೆ ಎಂ.ಕೆ.ಹುಬ್ಬಳ್ಳಿ ಕೇಂದ್ರಸ್ಥಾನ. ವಿವಿಧ ಗ್ರಾಮಗಳ ಜನರು ಈ ಪಟ್ಟಣದ ಮಾರ್ಗವಾಗಿಯೇ ಬೆಳಗಾವಿ ಧಾರವಾಡ ಮತ್ತಿತರ ಕಡೆ ತೆರಳುತ್ತಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಕ್ಸ್‌ಪ್ರೆಸ್ ಬಸ್‌ಗಳೂ ಇಲ್ಲಿ ನಿಲುಗಡೆ ಆಗುತ್ತವೆ. ಆದರೆ ಬಸ್‌ಗಾಗಿ ಕಾಯುತ್ತ ನಿಲ್ಲುವ ಪ್ರಯಾಣಿಕರಿಗಾಗಿ ಸುಸಜ್ಜಿತ ಬಸ್ ತಂಗುದಾಣವಿಲ್ಲ. ಸದ್ಯ ಇರುವ ತಂಗುದಾಣ ಶಿಥಿಲಾವಸ್ಥೆ ತಲುಪಿದ್ದು ಉಪಯೋಗಕ್ಕೆ ಬಾರದಂತಾಗಿದೆ. ಮಳೆಗಾಲದಲ್ಲಿ ಅದು ಕುಸಿಯುವ ಆತಂಕ ಪ್ರಯಾಣಿಕರನ್ನು ಕಾಡುತ್ತಿದೆ. ಮಳೆ ಇರಲಿ ಬಿಸಿಲು ಇರಲಿ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತ ರಸ್ತೆಬದಿಯೇ ನಿಲ್ಲುವುದು ಅನಿವಾರ್ಯವಾಗಿದೆ.
ಪ್ರತ್ಯೇಕ ಮಾರುಕಟ್ಟೆ ಬೇಕಿದೆ ಪಟ್ಟಣದಲ್ಲಿ ಪ್ರತಿ ಸೋಮವಾರ ಸಂತೆ ನಡೆಯುತ್ತದೆ. ಆದರೆ ಅದಕ್ಕೆ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಹಲವು ವರ್ಷಗಳಿಂದ ಪೇಟೆ ಓಣಿಯಲ್ಲಿ ನಡೆಯುತ್ತಿರುವ ಸಂತೆ ಕ್ರಮೇಣವಾಗಿ ಹೆದ್ದಾರಿ ಬಳಿಯ ಮುಖ್ಯರಸ್ತೆಯನ್ನೇ ಆವರಿಸಿಕೊಂಡಿದೆ. ಇದರಿಂದಾಗಿ ಸಂಚಾರ ಸಮಸ್ಯೆ ತಲೆದೋರಿ ಸವಾರರು ಹೈರಾಣಾಗುವಂತಾಗಿದೆ.
ಕೆಲಸಕ್ಕೆ ಬಿತ್ತು ಕತ್ತರಿ! ರೈತರು ಬಡವರೇ ಹೆಚ್ಚಿರುವ ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯಿತಿಯಾದ ನಂತರ ನರೇಗಾ ಯೋಜನೆಯಡಿ ಸಿಗುತ್ತಿದ್ದ ಕೆಲಸಕ್ಕೆ ಕತ್ತರಿ ಬಿದ್ದಿದೆ. ಗ್ರಾಮ ಪಂಚಾಯಿತಿಯಿಂದ ರೈತರಿಗೆ ಸಿಗುತ್ತಿದ್ದ ವಿವಿಧ ಸಬ್ಸಿಡಿ ಸೌಕರ್ಯಗಳೂ ದೂರವಾಗಿವೆ.
ಜನ ಏನಂತಾರೆ?
ಪಟ್ಟಣ ಪಂಚಾಯಿತಿಯಾದ ನಂತರ ಎಂ.ಕೆ.ಹುಬ್ಬಳ್ಳಿಯಲ್ಲಿ ಹೇಳಿಕೊಳ್ಳುವಂಥ ಅಭಿವೃದ್ಧಿ ಕೆಲಸಗಳೇ ನಡೆದಿಲ್ಲ. ನಗರೋತ್ಥಾನ ಯೋಜನೆಯಡಿ ಕೈಗೊಂಡಿದ್ದ ನೀರಿನ ಪೈಪ್‌ಲೈನ್ ಕಾಮಗಾರಿ ಉಪಯೋಗಕ್ಕೆ ಬರಲಿಲ್ಲ. ಈಗ ಅದೇ ಸ್ಥಳದಲ್ಲಿ ಮತ್ತೆ ಪೈಪ್‌ಲೈನ್ ಅಳವಡಿಸುವುದು ಸರಿಯೇ?
-ಸಂತೋಷ ಸಂಬಣ್ಣವರ ಸ್ಥಳೀಯ
ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಿ ವರ್ಷ ಕಳೆದರೂ ಆರಂಭಗೊಂಡಿಲ್ಲ. ಹೆಚ್ಚಿನ ತೆರಿಗೆ ಸಂಗ್ರಹಕ್ಕಷ್ಟೇ ಪ.ಪಂ ಸೀಮಿತವಾಗಿದೆ.
-ರಾಜು ಬೆಂಡಿಗೇರಿ ಸ್ಥಳೀಯ
ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಹೆದ್ದಾರಿ ಪಕ್ಕದಲ್ಲಿ ಶೀಘ್ರವೇ ವಾಣಿಜ್ಯ ಮಳಿಗೆ ನಿರ್ಮಿಸಲಿದ್ದೇವೆ. ಜನರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಕ್ರಮ ವಹಿಸುತ್ತೇವೆ.
-ರವಿಶಂಕರ ಮಾಸ್ತಿಹೊಳಿಮಠ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ


