ಬೆಳಗಾವಿ ಜಿಲ್ಲೆಯ ಪ್ರಸಿದ್ಧ ಸವದತ್ತಿ ಯಲ್ಲಮ್ಮ ದೇವಾಲಯ ಅಭಿವೃದ್ಧಿಗೆ ಕೇಂದ್ರದಿಂದ ಅನುದಾನ ಮಂಜೂರು; ಏನೆಲ್ಲಾ ಸೌಲಭ್ಯ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ನವದೆಹಲಿ: ಬೆಳಗಾವಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಸವದತ್ತಿಯಲ್ಲಿರುವ ಪ್ರಸಿದ್ಧ ರೇಣುಕಾ ಯಲ್ಲಮ್ಮ ದೇವಸ್ಥಾನವನ್ನು ತೀರ್ಥಯಾತ್ರೆ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ ಪರಂಪರೆ ವೃದ್ಧಿ ಡ್ರೈವ್(ಪ್ರಸಾದ್) ಯೋಜನೆಯಡಿ ಅಭಿವೃದ್ಧಿ ಮಾಡುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಘೋಷಿಸಿದೆ.
ಈ ಬಗ್ಗೆ ಕೇಂದ್ರ ಪ್ರವಾಸೋದ್ಯಮ ಇಲಾಖೆ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾಹಿತಿ ನೀಡಿದ್ದು, ಇಂದು ಕೇಂದ್ರ ಸರ್ಕಾರವು ಪ್ರಸಾದ್ ಯೋಜನೆಯಲ್ಲಿ 18.37 ಕೋಟಿ ರೂ. ಅನುದಾನವನ್ನು ಕರ್ನಾಟಕದ ಬೆಳಗಾವಿಯ ಸವದತ್ತಿ ದೇಗುಲಕ್ಕೆ ನೀಡಲು ಮಂಜೂರಾತಿ ಮಾಡಿದೆ ಎಂದು ಸಚಿವರು ತಿಳಿದ್ದಾರೆ.
ಏನೆಲ್ಲಾ ಸೌಲಭ್ಯ?
ಕೇಂದ್ರ ಸರ್ಕಾರದ 18.37 ಕೋಟಿ ರೂ. ಅನುದಾನದಲ್ಲಿ ದೇವಾಲಯಕ್ಕೆ ಭಕ್ತಾಧಿಗಳ ಆಗಮನ ಕೇಂದ್ರ, ಕೆಫೆಟೇರಿಯಾ, ಪ್ರಥಮ ಚಿಕಿತ್ಸಾ ಕೇಂದ್ರ ಮತ್ತು ಇತರ ಆಧುನಿಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದು ದೇವಾಲಯಕ್ಕೆ ಭೇಟಿ ನೀಡುವ ಹೆಚ್ಚಿನ ಸಂಖ್ಯೆಯ ಭಕ್ತರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಪ್ರವಾಸೋದ್ಯಮ ಸಚಿವಾಲಯವು ಪ್ರಸಾದ್ ಯೋಜನೆಯನ್ನು 2014-2015 ರಲ್ಲಿ ಪ್ರಾರಂಭಿಸಿದೆ. ಧಾರ್ಮಿಕ ಯಾತ್ರಾ ಸ್ಥಳ ಅಭಿವೃದ್ಧಿಪಡಿಸಲು ಈ ಯೋಜನೆಯಡಿ ಅನುದಾನ, ವಿಶೇಷ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಪ್ರಸಾದ್ ಯೋಜನೆಯಡಿಯಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಂಸ್ಕೃತಿ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಧನ್ಯವಾದಗಳು ಎಂದು ಹಾವೇರಿ ಕ್ಷೇತ್ರದ ಸಂಸದ ಬಸವರಾಜ್ ಬೊಮ್ಮಾಯಿ ಟ್ವೀಟ್ ಮಾಡಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇದಷ್ಟೇ ಅಲ್ಲದೇ ಸಂಸದ ಜಗದೀಶ್ ಶೆಟ್ಟರ್ ಅವರು ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದ್ದರಿಂದ ಇಲ್ಲಿಗೆ ರೈಲ್ವೆ ಸಂಪರ್ಕ ಕಲ್ಪಿಸಬೇಕು. ರೈಲು ಸಾರಿಗೆ ಒದಗಿಸುವ ಮೂಲಕ ಅನುಕೂಲ ಕಲ್ಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಕುರಿತು ಸಭೆ ನಡೆಸಿದ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇತ್ತ ಯಲ್ಲಮ್ಮ ದೇವಿ ಗುಡ್ಡದಲ್ಲಿ ರಾಜ್ಯ ಸರ್ಕಾರ ರೋಪ್ ವೇ ನಿರ್ಮಾಣ ಸೇರಿದಂತೆ ಕೆಲವು ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದೆ. ಸರ್ಕಾರಗಳು ಸಂಕಲ್ಪ ಮಾಡಿದ್ದೇ ಆದಲ್ಲಿ, ಎಲ್ಲವು ಅಂದುಕೊಂಡಂತಾದರೆ ಭವಿಷ್ಯದಲ್ಲಿ ಯಲ್ಲಮ್ಮ ದೇವಿ ಕ್ಷೇತ್ರವು ಹೊಸ ರೂಪ ಪಡೆಯುವ ನಿರೀಕ್ಷೆ ಇದೆ.



