IndiaState

ಬೆಳಗಾವಿಯ COIN TEMPLE ಸುಳೇಭಾವಿ ಗ್ರಾಮದಲ್ಲಿ ನಾಣ್ಯಗಳ ದೇವಸ್ಥಾನ: ಈ ದೇವಸ್ಥಾನದ ಕಟ್ಟಿಗೆ ಕಂಬ ಮತ್ತು ತೊಲೆಗಳ ತುಂಬಾ ಭಕ್ತರು ನಾಣ್ಯಗಳನ್ನೇ ಹೊಡೆದಿರುವುದು ವಿಶೇಷ.

ಈ ದೇವಸ್ಥಾನದ ಕಟ್ಟಿಗೆ ಕಂಬ ಮತ್ತು ತೊಲೆಗಳ ತುಂಬಾ ಭಕ್ತರು ನಾಣ್ಯಗಳನ್ನೇ ಹೊಡೆದಿರುವುದು ವಿಶೇಷ. ಹಾಗಾಗಿ, ನಾಣ್ಯಗಳ ದೇವಸ್ಥಾನ ಅಂತಾನೇ ಭಕ್ತರು ಕರೆಯುವುದು ರೂಢಿ.

ಬೆಳಗಾವಿಯ ಈ ಊರಲ್ಲಿದೆ ನಾಣ್ಯಗಳ ದೇವಸ್ಥಾನ : ಹರಕೆ ರೂಪದಲ್ಲಿ ನಾಣ್ಯ ಹೊಡೆಯುವುದು ಇಲ್ಲಿನ ಸಂಪ್ರದಾಯ – COIN TEMPLE

ಬೆಳಗಾವಿ: ಈ ಊರಿನಲ್ಲಿದೆ ನಾಣ್ಯಗಳ ದೇವಸ್ಥಾನ. ದೇವಿ ಬೇಡಿಕೆ ಈಡೇರಿಸಿದ ನಂತರ ಭಕ್ತರು ದೇವಸ್ಥಾನದ ಕಂಬಗಳಿಗೆ ಮೊಳೆಯಿಂದ ನಾಣ್ಯ ಬಡಿಯುವುದು ಇಲ್ಲಿನ ಸಂಪ್ರದಾಯ. ಆಯಾ ಕಾಲದ ಚಾಲ್ತಿಯಲ್ಲಿದ್ದ ಲಕ್ಷ ಲಕ್ಷ ನಾಣ್ಯಗಳು ಈ ಜಾಗೃತ ದೇವಿಯ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿವೆ. ಇದು ದೇಶದಲ್ಲೇ ಅಪರೂಪದ ನಾಣ್ಯಗಳ ದೇವಸ್ಥಾನ ಅಂತಾನೇ ಪ್ರಖ್ಯಾತಿ ಪಡೆದಿದೆ. ಈ ಕುರಿತ ವಿಶೇಷ ವರದಿ ಇಲ್ಲಿದೆ.

ಭಕ್ತರು ತಮ್ಮ ಇಷ್ಟಾರ್ಥ ಈಡೇರಿದ ಬಳಿಕ ದೇಣಿಗೆ ರೂಪದಲ್ಲಿ ಹಣ, ಚಿನ್ನ, ಬೆಳ್ಳಿ ಸೇರಿ ಅಧಿಕ ಮೌಲ್ಯದ ವಸ್ತುಗಳನ್ನು ದೇವರಿಗೆ ಸಮರ್ಪಿಸುವುದು ಸಾಮಾನ್ಯ. ಅಲ್ಲದೇ ದೇಶಾದ್ಯಂತ ಬಂಗಾರ ಮತ್ತು ಬೆಳ್ಳಿ ಲೇಪನದ ಅನೇಕ ದೇವಸ್ಥಾನಗಳು ಕಾಣಸಿಗುತ್ತವೆ. ಆದರೆ, ಈ ದೇವಸ್ಥಾನದ ಕಟ್ಟಿಗೆ ಕಂಬ ಮತ್ತು ತೊಲೆಗಳ ತುಂಬಾ ಭಕ್ತರು ನಾಣ್ಯಗಳನ್ನೇ ಹೊಡೆದಿರುವುದು ವಿಶೇಷ. ಹಾಗಾಗಿ, ನಾಣ್ಯಗಳ ದೇವಸ್ಥಾನ ಅಂತಾನೇ ಭಕ್ತರು ಕರೆಯುವುದು ರೂಢಿ.

ಈ ರೀತಿ ಅಪರೂಪದ ದೇವಸ್ಥಾನ ಇರುವುದು ಬೆಳಗಾವಿಯಿಂದ 17 ಕಿ.ಮೀ. ಅಂತರದಲ್ಲಿರುವ ಸುಳೇಭಾವಿ ಗ್ರಾಮದಲ್ಲಿ. ಇಲ್ಲಿನ ಗ್ರಾಮದೇವಿ ಮಹಾಲಕ್ಷ್ಮಿಗೆ ಜಾಗೃತ ದೇವಿ ಅಂತಾನೇ ಪ್ರಖ್ಯಾತಿ ಇದೆ. ಸುಮಾರು 500 ವರ್ಷಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿದ್ದು, ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಲಕ್ಷಾಂತರ ಭಕ್ತರು ದೇವಿಗೆ ನಡೆದುಕೊಳ್ಳುತ್ತಾರೆ.

ಭಕ್ತರ ಪಾಲಿಗೆ ಕರುಣಾಮಯಿ : ದೇವಿ ಸನ್ನಿಧಿ ನಿತ್ಯವೂ ಜಾಗೃತ ಸ್ಥಳವಾಗಿದೆ. ಎರಡು ಪ್ರವೇಶದ್ವಾರಗಳು, ಐದು ತಲೆಗಳ ವಾಹನ, ನಾಣ್ಯಗಳಿಂದ ತುಂಬಿದ ಕಂಬಗಳು, ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ, ಮೈನವಿರೇಳಿಸುವ ಭಂಡಾರ ರಹಿತ ದೇವಿಯ ಹೊನ್ನಾಟ, ಕವಲು ಕೊಡುವ ಸಂಪ್ರದಾಯ, ಕಾಯಿ ಕಟ್ಟುವ ಪದ್ಧತಿ ಸೇರಿದಂತೆ ಹಲವು ವೈಶಿಷ್ಟ್ಯಗಳು ಇಲ್ಲಿವೆ. ಇಡೀ ಗ್ರಾಮದ ಆರಾಧ್ಯ ದೇವಿಯಾದ ಈಕೆ ಶ್ರೀಮನ್ನಾರಾಯಣನ ಒಡತಿ. ಕಡುಬಡವರನ್ನು ಶ್ರೀಮಂತನನ್ನಾಗಿಸುವ ಕಾಮಧೇನು. ಬೇಡಿದ್ದನ್ನು ಕರುಣಿಸುವ ಕರುಣಾಮಯಿ ಎಂಬುದು ಭಕ್ತರ ನಂಬಿಕೆಯಾಗಿದೆ.

ನಾಣ್ಯಗಳನ್ನು ಯಾಕೆ ಹೊಡೆಯುತ್ತಾರೆ ? ದೇವಿ ಮುಂದೆ ಬಂದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿದರೆ ಇಂತಿಷ್ಟು ನಾಣ್ಯಗಳನ್ನು ಕಂಬಕ್ಕೆ ಹೊಡೆಯುತ್ತೇವೆ ಅಂತಾ ಭಕ್ತರು ಹರಕೆ ಕಟ್ಟಿಕೊಳ್ಳುತ್ತಾರೆ. ಆ ಪ್ರಕಾರ ತಮ್ಮ ಬೇಡಿಕೆ ಈಡೇರಿದ ಬಳಿಕ ದೇವಸ್ಥಾನದ ಆವರಣದೊಳಗಿನ ಕಂಬ, ತೊಲೆಗಳಿಗೆ ಮೊಳೆಯಿಂದ ಆಯಾ ಕಾಲದಲ್ಲಿ ಚಾಲ್ತಿಯಲ್ಲಿದ್ದ ನಾಣ್ಯಗಳನ್ನು ಹೊಡೆದು ತಮ್ಮ ಹರಕೆ ತೀರಿಸಿದ್ದಾರೆ. ನೂರಾರು ವರ್ಷಗಳಿಂದ ಈ ಪದ್ಧತಿ ನಡೆದುಕೊಂಡಿದೆ. ಆದರೆ, ಇತ್ತೀಚೆಗೆ ನಾಣ್ಯಗಳನ್ನು ಹೊಡೆಯುವುದನ್ನು ದೇವಸ್ಥಾನ ಕಮಿಟಿಯವರು ಬಂದ್ ಮಾಡಿಸಿದ್ದಾರೆ. ಹಾಗಾಗಿ, ದೇಣಿಗೆ ಪೆಟ್ಟಿಗೆಯಲ್ಲಿ ಭಕ್ತರು ತಮ್ಮ ಕಾಣಿಕೆ ಸಮರ್ಪಿಸುತ್ತಿದ್ದಾರೆ.

ದೇವಿಯ ಗರ್ಭಗುಡಿ ಬಾಗಿಲಿನ ಚೌಕಟ್ಟು, 20ಕ್ಕೂ ಅಧಿಕ ಕಂಬಗಳ ಹಾಗೂ ತೊಲೆಗಳ ಪೂರ್ತಿ ನಾಣ್ಯಗಳೇ ಕಾಣಸಿಗುತ್ತವೆ. ವಿಕ್ಟೋರಿಯಾ ರಾಣಿ ಭಾವಚಿತ್ರದ ನಾಣ್ಯ, ಭಾರತ ಸ್ವಾತಂತ್ರ್ಯ ಸಿಕ್ಕ ಬಳಿಕ ಬಿಡುಗಡೆಯಾದ 1 ರೂ‌., 50 ಪೈಸೆ, 25 ಪೈಸೆ, 10 ಪೈಸೆ ಅದೇ ರೀತಿ ಬೆಳ್ಳಿ ನಾಣ್ಯಗಳನ್ನು ಭಕ್ತರು ಹೊಡೆದಿದ್ದಾರೆ. ನಾಣ್ಯಗಳು ಗುರುತು ಹಿಡಿಯದಷ್ಟು ಹಳೆಯದಾಗಿವೆ. ಕಂಬಗಳು ಪೂರ್ತಿ ನಾಣ್ಯಗಳಿಂದಲೇ ತುಂಬಿವೆ. ಹಾಗಾಗಿ, ನಾಣ್ಯಗಳ ದೇವಸ್ಥಾನ ಅಂತಾ ಕರೆಯುತ್ತೇವೆ ಎಂಬುದು ಭಕ್ತರ ಅಭಿಪ್ರಾಯ.

ಮಹಾಲಕ್ಷ್ಮೀ ದೇವಿಯ ಅರ್ಚಕ ರಮೇಶ ಪೂಜಾರಿ ಮಾತನಾಡಿ, “ಭಕ್ತರು ತಮ್ಮ ಬೇಡಿಕೆ ಪೂರ್ಣಗೊಂಡ ಬಳಿಕ ದೇವಸ್ಥಾನದ ಕಂಬಕ್ಕೆ ನಾಣ್ಯ ಹೊಡೆಯುವ ಸಂಪ್ರದಾಯ ಸುಮಾರು 300 ವರ್ಷಗಳಿಂದ ನಡೆದುಕೊಂಡು ಬಂದಿದೆ. 2 ಲಕ್ಷಕ್ಕೂ ಅಧಿಕ ನಾಣ್ಯಗಳನ್ನು ಭಕ್ತರು ಈವರೆಗೆ ಹೊಡೆದಿದ್ದಾರೆ. ದೇವಸ್ಥಾನ ಜೀರ್ಣೋದ್ಧಾರ ಸಮಯದಲ್ಲಿ ನಾಣ್ಯಗಳನ್ನು ಹೊಡೆದಿದ್ದ ಬಹಳಷ್ಟು ಕಂಬಗಳನ್ನು ತೆಗೆದಿದ್ದೇವೆ. ಈಗ ಉಳಿದಿರುವುದೇ ಲಕ್ಷಾಂತರ ನಾಣ್ಯಗಳು” ಎಂದು ವಿವರಿಸಿದರು‌.

ಮಹಾಲಕ್ಷ್ಮೀಗೆ ಜನಪದರು ‘ದ್ಯಾಮವ್ವ’ ಎಂದೇ ಕರೆಯುತ್ತಾರೆ. ತಲೆತಲಾಂತರಗಳಿಂದ ಪೂಜೆಲ್ಪಡುತ್ತಿರುವ ಈ ಕ್ಷೇತ್ರದಲ್ಲಿ, ಯಾವಾಗ ಮೂಲ ಮಂದಿರ ನಿರ್ಮಾಣವಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಸುಮಾರು 350 ವರ್ಷಗಳ ಹಿಂದೆ ಹೆಂಚಿನ ಗುಡಿಯನ್ನು ಇಲ್ಲಿ ಕಟ್ಟಲಾಗಿತ್ತು. 1940ರಲ್ಲಿ ಮಲ್ಲಿಕಾರ್ಜುನ ಕೋರಿಶೆಟ್ಟಿ ಎಂಬ ಭಕ್ತರು ಸಂತಾನ ಕೊಡುವಂತೆ ದೇವಿ ಬಳಿ ಕೇಳಿಕೊಂಡಿದ್ದರು. ಅವರ ಬೇಡಿಕೆಯಂತೆ ಪುತ್ರಿ ಜನಿಸಿದ್ದರಿಂದ ಮಂದಿರ ಜೀರ್ಣೋದ್ಧಾರ ಮಾಡಿಸಿದರು. ನಂತರ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರವನ್ನು ಟ್ರಸ್ಟ್ ನವರು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಮಾಡುತ್ತ ಬಂದಿದ್ದಾರೆ.

ಭಂಡಾರ ರಹಿತ ಜಾತ್ರೆ : ದೇವಿಗೆ 5 ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಈ ಜಾತ್ರೆ 9 ದಿನಗಳ ಕಾಲ ನಡೆಯುತ್ತದೆ. ಜಾತ್ರೆಯಂದು ನಡೆಯುವ ದೇವಿಯ ಹೊನ್ನಾಟ ಕಣ್ತುಂಬಿಕೊಳ್ಳುವುದೇ ವಿಶೇಷ. ಅದರಲ್ಲಿ ಮತ್ತೊಂದು ವಿಶೇಷತೆ ಎಂದರೆ ಭಂಡಾರ ರಹಿತ ಹೊನ್ನಾಟ ಆಡುವುದು. ಮಾರ್ಚ್ 18ರಿಂದ 26ರ ವರೆಗೆ 9 ದಿನಗಳ ಕಾಲ ಅದ್ಧೂರಿ ಜಾತ್ರಾ ಮಹೋತ್ಸವ ನೆರವೇರಲಿದ್ದು, ಲಕ್ಷಾಂತರ ಭಕ್ತರು ಜಾತ್ರೆಗೆ ಸಾಕ್ಷಿಯಾಗಲಿದ್ದಾರೆ. ನಮ್ಮ ಪೂರ್ವಜರ ಕಾಲದಿಂದಲೂ ಜಾತ್ರೆಯಲ್ಲಿ ಭಂಡಾರ ಆಡುವುದಿಲ್ಲ. ಅದನ್ನೇ ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಹೊಸ ಹೊಸ ಬಟ್ಟೆ ಧರಿಸಿ ಜಾತ್ರೆಗೆ ಬರುವ ಭಕ್ತರು ಸಮೀಪದಿಂದ ದೇವಿ ಹೊನ್ನಾಟ ವೀಕ್ಷಿಸಿ ಪುನೀತರಾಗುತ್ತಾರೆ. ಅದೇ ರೀತಿ ರಾಜಕೀಯ ನಾಯಕರು ಮತ್ತು ಗ್ರಾಮಸ್ಥರ ವೈಯಕ್ತಿಕ ಬ್ಯಾನರ್​ಗಳಿಗೂ ನಿರ್ಬಂಧ ವಿಧಿಸಿದ್ದೇವೆ. ಶಾಂತಿಯುತವಾಗಿ ಜಾತ್ರೆ ನೆರವೇರಲಿ, ಭಕ್ತರು ತನ್ಮಯರಾಗಿ ಜಾತ್ರೆಯಲ್ಲಿ ಪಾಲ್ಗೊಳ್ಳಲಿ ಎಂಬ ಉದ್ದೇಶ ನಮ್ಮದಾಗಿದೆ. ಹಾಗಾಗಿ, ಸುತ್ತಲಿನ ಊರುಗಳಲ್ಲೆ ನಮ್ಮದು ಮಾದರಿ ಜಾತ್ರೆ ಎನ್ನುತ್ತಾರೆ ದೇವಸ್ಥಾನ ಟ್ರಸ್ಟ್ ಸದಸ್ಯರಾದ ಶಶಿಕಾಂತ ಸಂಗೊಳ್ಳಿ ಮತ್ತು ಮುರುಗೇಶ ಹಂಪಿಹೊಳಿ.

ಪಂಚಮುಖಿ ವಾಹನ ವಿಶೇಷ : ಪಂಚಮುಖಿ (ಐದು ತಲೆಗಳ ಪ್ರಾಣಿ) ಇದು. ಈಕೆ ನರಿ, ಹುಲಿ, ಗೂಬೆ ಸಿಂಹ, ನವಿಲು ಹೀಗೆ ಐದು ವಾಹನಗಳ ಮೇಲೆ ಕುಳಿತಿದ್ದಾಳೆ. ಹೀಗೆ ಹಲವು ಅವತಾರಗಳು ಹಾಗೂ 5 ವಾಹನಗಳ ಮೇಲೆ ಕುಳಿತಿರುವ ಮಹಾಲಕ್ಷ್ಮಿಯ ಮತ್ತೊಂದು ಮೂರ್ತಿ ಬೇರೆಲ್ಲೂ ಕಾಣಸಿಗುವುದಿಲ್ಲ. ದೊಡ್ಡ ಕಣ್ಣು, ಕೊಂಬು, ಕಿವಿ, ವಿಶಾಲ ಉದರ, ಬಾಲ ಹೀಗೆ ಬೇರೆಬೇರೆ ಪ್ರಾಣಿಗಳ ಸಯಾಮಿ ಮಿಶ್ರಣದಂತೆ ಕಾಣಿಸುತ್ತದೆ. ಹಾಗಾಗಿ, ನಿಖರವಾಗಿ ಇಂಥದ್ದೇ ಅವತಾರ ಎಂದು ಹೇಳಲು ಆಗದು ಎಂಬುದು ಗ್ರಾಮಸ್ಥರ ಅಭಿಪ್ರಾಯ.

Belagavi Coin Temple

5 ವಾರ ತೆಂಗಿನ ಕಾಯಿ ಕಟ್ಟುತ್ತಾರೆ : ಮಹಾಲಕ್ಷ್ಮೀ ದೇಗುಲವು ಪ್ರತಿನಿತ್ಯ ಮುಂಜಾನೆಯಲ್ಲಿ ಸೂರ್ಯ ರಶ್ಮಿಗಳು ಚುಂಬಿಸುತ್ತವೆ. ಇನ್ನು ಸಂಜೆಯಾಗುತ್ತಿದ್ದಂತೆ ಸೂರ್ಯದೇವ ದೇವಿಯ ಪಾದಗಳಿಗೆ ಸ್ಪರ್ಶಿಸುತ್ತಾನೆ. ಇಂತಹ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಒಂದು ವಿಶೇಷ ಅನುಭವ. ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆ ಮತ್ತು ಪೌರ್ಣಮಿಯ ದಿನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ ಮಹಿಳೆಯರು ಉಡಿ ತುಂಬಿ ಕುಂಕುಮಾರ್ಚನೆ ಮಾಡಿಸುತ್ತಾರೆ. ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಿ ಕುಟುಂಬದಲ್ಲಿ ಶಾಂತಿ, ನೆಮ್ಮದಿ ಕರುಣಿಸುವಂತೆ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಅದೇ ರೀತಿ ಕಂಕಣ ಬಲ, ಸಂತಾನ ಬಲ, ನೌಕರಿ, ವ್ಯಾಪಾರ ವೃದ್ಧಿ ಹೀಗೆ ವಿವಿಧ ಬೇಡಿಕೆಗಳ ಹರಕೆ ಹೊತ್ತು ಜನ ಇಲ್ಲಿ ತೆಂಗಿನಕಾಯಿ ಕಟ್ಟುವುದು ಇನ್ನೊಂದು ಸಂಪ್ರದಾಯ. ಐದು ವಾರಗಳ ಕಾಲ ದೇವಸ್ಥಾನದಲ್ಲಿ ತೆಂಗಿನಕಾಯಿ ಕಟ್ಟಿ ಹೋಗುತ್ತಾರೆ. ದೇವಿ ಬೇಡಿಕೆ ಈಡೇರಿಸಿದ ನಂತರವೇ ಮಂದಿರದ ಅರ್ಚಕರು ಕಾಯಿ ಬಿಚ್ಚಿ ಕೊಡುತ್ತಾರೆ. ಅಷ್ಟರಮಟ್ಟಿಗೆ ದೇವಿಯ ಮಹಿಮೆ ಬೆಳೆದಿದೆ ಎನ್ನುತ್ತದೆ ದೇವಸ್ಥಾನದ ಕಮಿಟಿ.

Belagavi Coin Temple

ಬ್ಯಾನರ್‌ಗೆ ನಿರ್ಬಂಧ : ಇನ್ನು ಈ ದೇವಿಯ ಜಾತ್ರೆಯ ಮತ್ತೊಂದು‌ ವಿಶೇಷ ಎಂದರೆ 9 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಎಲ್ಲಿಯೂ ಬ್ಯಾನರ್‌ಗಳನ್ನು ಅಳವಡಿಸಲು ಅವಕಾಶ ಇಲ್ಲ. ಬ್ಯಾನರ್, ಬಂಟಿಂಗ್ಸ್, ಕಟೌಟ್‌ಗಳಿಂದ ಗ್ರಾಮದ ಸೌಂದರ್ಯ ಹಾಳಾಗಬಾರದು, ಯಾರೂ ಪ್ರತಿಷ್ಠೆ ತೋರಿಸಬಾರದು ಎಂಬ ಕಾರಣಕ್ಕೆ ಹಲವಾರು ವರ್ಷಗಳಿಂದ ಬ್ಯಾನರ್ ಅಳವಡಿಕೆಗೆ ನಿರ್ಬಂಧ ಹೇರಲಾಗಿದೆ. ಜೊತೆಗೆ ಡಿಜೆ-ಡಾಲ್ಬಿಗಳನ್ನು ಹಚ್ಚಲು ಅವಕಾಶ ಇರುವುದಿಲ್ಲ. ದೇಸಿ ವಾದ್ಯ ಮೇಳದೊಂದಿಗೆ ಸಂಪ್ರದಾಯಬದ್ಧವಾಗಿ ಜಾತ್ರೆ ನೆರವೇರಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವಿಯ ಹೊನ್ನಾಟದ ವೈಭವ ನೋಡಬೇಕು ಎಂದು ದೇವಸ್ಥಾನ ಟ್ರಸ್ಟ್ ಕಮಿಟಿ ಕೋರಿದೆ.

Belagavi Coin Temple

ನಾವು ಮಹಾಲಕ್ಷ್ಮೀ ದೇವಸ್ಥಾನಕ್ಕೆ ಹೋದಾಗ ಆ ನಾಣ್ಯಗಳನ್ನು ಕುತೂಹಲದಿಂದ ಮುಟ್ಟಿ ನೋಡುತ್ತೇವೆ. ಯಾಕೆಂದರೆ ನಾವು ಅದೆಷ್ಟೋ ನಾಣ್ಯಗಳನ್ನು ನೋಡಿಯೇ ಇಲ್ಲ. ಹಾಗಾಗಿ, ಅವು ಯಾವ ಕಾಲದ್ದು ಅಂತಾ ತಿಳಿದುಕೊಳ್ಳುತ್ತೇವೆ. ದೇವಿ ದರ್ಶನ ಪಡೆದಾಗ ಮನಸ್ಸು ಉಲ್ಲಾಸಗೊಳ್ಳುತ್ತದೆ. ನಮ್ಮಲ್ಲಿನ ನೋವು-ಕಷ್ಟಗಳನ್ನು ದೇವಿ ಮುಂದೆ ಹೇಳಿಕೊಂಡಾಗ ಮನಸ್ಸು ಹಗುರವಾಗುತ್ತದೆ. ಇನ್ನು ಇಡೀ ದೇಶದಲ್ಲೇ ನಮ್ಮದು ಏಕೈಕ ನಾಣ್ಯಗಳ ದೇವಸ್ಥಾನ ಎನ್ನುವುದು ನಮಗೆ ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಸಂಗತಿಯಾಗಿದೆ ಎನ್ನುತ್ತಾರೆ ಭಕ್ತರಾದ ಶ್ರೀದೇವಿ ಕಾಂಬಳೆ ಮತ್ತು ಶಿಲ್ಪಾ ಕಾಂಬಳೆ.

Belagavi Coin Temple
Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button