ಮುಸ್ಲಿಂ ಯುವತಿ – ಹಿಂದೂ ಯುವಕನ ಮೇಲೆ ನೈತಿಕ ಪೊಲೀಸ್‌ಗಿರಿ: ಅಪ್ರಾಪ್ತ ಸೇರಿ ಐವರನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ದ್ವಿಚಕ್ರವಾಹನದಲ್ಲಿ ಕುಳಿತಿದ್ದ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿಯ ಮೇಲೆ ನೈತಿಕ ಪೊಲೀಸ್‌ಗಿರಿ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ ಅಪ್ರಾಪ್ತ ಸೇರಿ ಐವರನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಗೊಳಗಾದ ಯುವತಿ ನೀಡಿದ ದೂರಿನ ಆಧಾರದಲ್ಲಿ ಚಂದ್ರಾಲೇಔಟ್‌ನ ಮಹೀಮ್, ಮನ್ಸೂರ್, ಅಫ್ರಿದಿ ಪಾಷಾ, ವಾಸೀಂ ಖಾನ್ ಅವರನ್ನು ಬಂಧಿಸಲಾಗಿದೆ.
ಅಪ್ರಾಪ್ತ ಬಾಲಕನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ.
ಕಳೆದ ಮೂರು ದಿನಗಳ ಹಿಂದೆ ಚಂದ್ರಾಲೇಔಟ್ ಪಾರ್ಕ್‌ವೊಂದರ ಬಳಿ ಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕ ಸ್ಕೂಟರ್‌ನಲ್ಲಿ ಕುಳಿತು ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಆರೋಪಿಗಳು ಇಬ್ಬರ ಬಳಿ ಈ ಬಗ್ಗೆ ಪ್ರಶ್ನಿಸಿದ್ದರು. ನಾವಿಬ್ಬರು ಸ್ನೇಹಿತರೆಂದು ಸಮಜಾಯಿಷಿ ನೀಡಿದರೂ ಮಾತು ಕೇಳದ ಆರೋಪಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಹಿಂದೂ ಯುವಕನ ಜೊತೆಗೆ ಏಕೆ ಕುಳಿತುಕೊಂಢಿದ್ದೀಯಾ ? ಮನೇಲಿ ಹೇಳಿ ಬಂದಿದ್ದೀಯಾ ಎಂದು ಯುವತಿಯನ್ನ ಪ್ರಶ್ನಿಸಿದ್ದರು. ಸಾಲದ್ದಕ್ಕೆ ನಿಮ್ಮ ಮನೆಯವರ ಮೊಬೈಲ್ ನಂಬರ್ ಕೊಡುವಂತೆ ಪುಂಡರು ಕ್ಯಾತೆ ತೆಗೆದಿದ್ದರು. ನಾವಿಬ್ಬರೂ ತರಗತಿಯಲ್ಲಿ ಸಹಪಾಠಿಗಳಾಗಿದ್ದು, ನಮ್ಮ ಮನೆಯವರ ನಂಬರ್ ನಿಮಗೆ ಏಕೆ ಕೊಡಬೇಕು ಎಂದು ಯುವತಿ ಪ್ರಶ್ನಿಸಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿಗಳು ಯುವತಿ ಜೊತೆಗಿದ್ದ ಯುವಕನಿಗೆ ಹಲ್ಲೆ ನಡೆಸಲು ಯತ್ನಿಸಿದ್ದರು. ಜೊತೆಗೆ ಯುವತಿ- ಯುವಕನ ಜೊತೆಗೆ ದ್ವಿಚಕ್ರವಾಹನದಲ್ಲಿ ಕುಳಿತು ಮಾತನಾಡುತ್ತಿದ್ದ ವಿಡಿಯೋ ಸೆರೆಹಿಡಿದು ಅದನ್ನು ವೈರಲ್ ಮಾಡಿದ್ದರು ಎಂದು ತಿಳಿದು ಬಂದಿದೆ.
ಆರೋಪಿಗಳು ಈ ಮೂಲಕ ಧರ್ಮ ರಕ್ಷಣೆ ಸೋಗಿನಲ್ಲಿ ನೈತಿಕ ಪೊಲೀಸ್ ಗಿರಿ ಮೆರೆದಿದ್ದರು. ಈ ಸಂಬಂಧ ಯುವತಿ ನೀಡಿದ ದೂರು ಆಧರಿಸಿ ಆರೋಪಿತರನ್ನ ಬಂಧಿಸಲಾಗಿದೆ. ಆರೋಪಿಗಳು ವೆಲ್ಡಿಂಗ್ ಹಾಗೂ ಸ್ಕ್ರಾಪ್ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.


