BREAKING: ಬೆಳಗಾವಿಯಲ್ಲಿ ಹಳಿತಪ್ಪಿ ಪಲ್ಟಿಯಾದ ಗೂಡ್ಸ್ ರೈಲಿನ ಡಬ್ಬಿಗಳು, ತಪ್ಪಿದ ಬಾರಿ ಅನಾಹುತ!

ಬೆಳಗಾವಿ, ಏಪ್ರಿಲ್ 15: ಬೆಳಗಾವಿಯಿಂದ ಹುಬ್ಬಳ್ಳಿ ಕಡೆಗೆ ಚಲಿಸುತ್ತಿದ್ದ ಗೂಡ್ಸ್ ರೈಲಿನ ಮೂರು ಬೋಗಿಗಳು ಹಳಿ ತಪ್ಪಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಈ ಗೂಡ್ಸ್ ರೈಲಿನಲ್ಲಿ ಯಾವುದೇ ಸರಕು ಇರಲಿಲ್ಲ ಎಂದು ತಿಳಿದು ಬಂದಿದೆ. ಬೆಳಗಾವಿ ರೈಲ್ವೆ ನಿಲ್ದಾಣದಿಂದ ಸಂಚಾರ ಆರಂಭಿಸುತ್ತಿದ್ದಂತೆಯೇ ಕೆಲವೇ ನಿಮಿಷಗಳಲ್ಲಿ ಈ ಅವಘಡ ಸಂಭವಿಸಿದೆ.
ಸ್ಥಳಕ್ಕೆ ಕೂಡಲೇ ಪೊಲೀಸರು, ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬೆಳಗಾವಿ ರೈಲು ನಿಲ್ದಾಣದ ಬಳಿಯ ಮಿಲಿಟರಿ ಮಹಾದೇವ್ ಬಳಿ ಸರಕು ರೈಲಿನ ಖಾಲಿ ವ್ಯಾಗನ್ ಹಳಿ ತಪ್ಪಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಯಾಕೆ ಹೀಗಾಯ್ತು, ರೈಲಿನಲ್ಲಿ ಆದ ಸಮಸ್ಯೆ ಏನು? ಹಳಿಗಳ ಜೋಡಣೆಯಲ್ಲಿ ಏನಾದರೂ ಸಮಸ್ಯೆ ಆಗಿದೆಯಾ? ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ಬೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವವರಿಗೆ ಈ ಭಾಗದ ರೈಲು ಸಂಚಾರ ವ್ಯತ್ಯಯಗೊಳ್ಳುವ ಸಾಧ್ಯತೆ ಇದೆ. ಈ ಸಂಬಂಧ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ತಿಳಿಸಬೇಕಿದೆ.

ಬೆಂಗಳೂರಿನಿಂದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮಾರ್ಗವಾಗಿ ಹೋಗುವ ಬರುವ ರೈಲುಗಳ ಸಂಖ್ಯೆ ನಿತ್ಯವು ಹೆಚ್ಚಿರುತ್ತದೆ. ಸದ್ಯ ಘಟನೆ ನಡೆದ ಸ್ಥಳದಲ್ಲಿ ಬೋಗಿಗಳನ್ನು ಬೇರೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ. ಘಟನೆ ಕುರಿತು ರೈಲ್ವೆ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.


