DK Shivakumar : ‘ಗೃಹಲಕ್ಷ್ಮಿ’ ಮಾದರಿಯಲ್ಲಿ ‘ಪ್ಯಾರಿ ದೀದಿ ಯೋಜನೆ’; ಮಹಿಳೆಯರಿಗೆ ತಿಂಗಳಿಗೆ 2500: ಕಾಂಗ್ರೆಸ್ ಗ್ಯಾರಂಟಿ ಘೋಷಿಸಿದ ಡಿ ಕೆ ಶಿವಕುಮಾರ್

ನವದೆಹಲಿ, ಜನವರಿ 06: 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಐದು ಗ್ಯಾರಂಟಿಗಳನ್ನ ಘೋಷಿಸುವ ಮೂಲಕ ರಾಜ್ಯದಲ್ಲಿಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಇದೀಗ ದೆಹಲಿ ವಿಧಾನಸಭಾ ಚುನಾವಣೆಯಲ್ಲೂ ಕರ್ನಾಟಕ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಹಿಳೆಯರಿಗಾಗಿ ಭರ್ಜರಿ ಗ್ಯಾರಂಟಿ ಘೋಷಿಸಿದ್ದಾರೆ.
ಫೆಬ್ರವರಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಹಿಳೆಯರಿನ್ನ ಸೆಳೆಯುವ ನಿಟ್ಟಿನಲ್ಲಿ ದೆಹಲಿ ಕಾಂಗ್ರೆಸ್ ಭರ್ಜರಿ ಗ್ಯಾರಂಟಿಯನ್ನ ನೀಡಿದೆ. ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಪ್ಯಾರಿ ದೀದಿ’ ಯೋಜನೆ ಜಾರಿ ಮಾಡಲಿದ್ದೇವೆ. ಇದರ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2500 ನೀಡುತ್ತೇವೆ. ಪಕ್ಷ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ಮಾಡಿದ ಹಾಗೆ ಮೊದಲ ಸಚಿವ ಸಂಪುಟದ ಸಭೆಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಡಿ ಕೆ ಶಿವಕುಮಾರ್ ಹೇಳಿದರು.
ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವ ವಿಶ್ವಾಸವಿದೆ ಮತ್ತು ಹೊಸ ಸಚಿವ ಸಂಪುಟದ ಮೊದಲ ದಿನದಲ್ಲಿಯೇ ನಾವು ರಾಜಧಾನಿಯಲ್ಲಿರುವ ಪ್ರತಿ ಮಹಿಳೆಗೆ ತಿಂಗಳಿಗೆ 2,500 ರೂ. ಆರ್ಥಿಕ ನೆರವನ್ನು ನೀಡುವ ಯೋಜನೆಯನ್ನು ನಾವು ಜಾರಿಗೆ ತರುತ್ತೇವೆ. ಇಂದು ನಾನು ಪ್ಯಾರಿ ದೀದಿ ಯೋಜನೆಗೆ ಚಾಲನೆ ನೀಡಲು ಇಲ್ಲಿಗೆ ಬಂದಿದ್ದೇನೆ ಎಂದು ಕರ್ನಾಟಕ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿಯಲ್ಲಿ ಚುನಾವಣೆ ನಡೆಯಲಿದೆ. ಎಎಪಿ ಮತ್ತು ಕಾಂಗ್ರೆಸ್ ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದರೂ, ದೆಹಲಿಯ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಇಲ್ಲ ಎಂದು ಈಗಾಗಲೇ ಎಎಪಿ ನಾಯಕ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.
ಚುನಾವಣೆಯಲ್ಲಿ ಸತತ ನಾಲ್ಕನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವ ಎಎಪಿ, ಹಲವು ವಿಶೇಷ ಯೋಜನೆಗಳನ್ನು ಈಗಾಗಲೇ ಘೋಷಿಸಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಕೂಡ ಮಹಿಳೆಯರಿಗಾಗಿ 2500 ರೂಪಾಯಿ ನೀಡುವ ಯೋಜನೆಯನ್ನ ಘೋಷಣೆ ಮಾಡಿದೆ.
ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಕರ್ನಾಟಕದಲ್ಲಿ ನಾವು ಜಾರಿಗೆ ತಂದ ಅದೇ ಮಾದರಿಯಲ್ಲಿ ಕ್ಯಾಬಿನೆಟ್‌ನ ಮೊದಲ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶಿವಕುಮಾರ್ ಹೇಳಿದರು.
ಎಎಪಿ ಮಹಿಳಾ ಸಮ್ಮಾನ್ ಯೋಜನೆ
ರಾಷ್ಟ್ರ ರಾಜಧಾನಿಯಲ್ಲಿ ಮಹಿಳಾ ಮತದಾರರನ್ನು ಓಲೈಸಲು ಆಡಳಿತಾರೂಢ ಎಎಪಿ ಇದೇ ರೀತಿಯ ಯೋಜನೆಯನ್ನು ಘೋಷಿಸಿದ ಬಳಿಕ ಕಾಂಗ್ರೆಸ್ ಮಹಿಳೆಯರ ಓಲೈಕೆಗಾಗಿ 2500 ರೂಪಾಯಿಯನ್ನ ನೀಡಲು ಮುಂದಾಗಿದೆ. ಮಹಿಳಾ ಸಮ್ಮಾನ್ ಯೋಜನೆಯಡಿ, ದೆಹಲಿಯಲ್ಲಿ ನೋಂದಾಯಿತ ಮಹಿಳಾ ಮತದಾರರಿಗೆ ಮಾಸಿಕ 2,100 ರೂಪಾಯಿಗಳ ಸಹಾಯವನ್ನು ಒದಗಿಸುವುದಾಗಿ ಎಎಪಿ ಭರವಸೆ ನೀಡಿದೆ. AAP ಕೂಡ ಸಂಜೀವನಿ ಯೋಜನೆಯನ್ನು ಘೋಷಿಸಿತು, ಇದು ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯದ ಭರವಸೆ ನೀಡುತ್ತದೆ.
ಪ್ರಸ್ತುತ, ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ, ರಾಷ್ಟ್ರ ರಾಜಧಾನಿಯ ಮಹಿಳೆಯರು 1,000 ರೂಪಾಯಿ ಪಡೆಯಲು ಅರ್ಹರಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ಈ ಮೊತ್ತವನ್ನು 2,100 ರೂ.ಗೆ ಏರಿಸುವುದಾಗಿ ಎಎಪಿ ಭರವಸೆಯನ್ನ ನೀಡಿದೆ.



