ಪತ್ರಕರ್ತನ ಮೇಲೆ ಹಲ್ಲೆ; ಅರಣ್ಯ ಇಲಾಖೆಯ ಅಧಿಕಾರಿ ಸೇರಿದಂತೆ ನಾಲ್ವರನ್ನು ಬಂಧಿಸಿ, ಲಸದಿಂದ ವಜಾಗೊಳಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಗ್ರಹ

ಬೀದರ್: ಪತ್ರಕರ್ತ ರವಿ ಭೂಸಂಡೆ ಅವರ ಮೇಲೆ ಹಲ್ಲೆ ನಡೆಸಿರುವ ಅರಣ್ಯ ಇಲಾಖೆಯ ಅಧಿಕಾರಿ ಸೇರಿದಂತೆ ನಾಲ್ವರನ್ನು ಬಂಧಿಸಿ, ಅವರನ್ನು ಕೆಲಸದಿಂದ ವಜಾಗೊಳಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಗ್ರಹಿಸಿದೆ.
ಈ ಸಂಬಂಧ ಸಂಘದ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿ ಒತ್ತಾಯಿಸಿದರು.
ಏ. 15ರಂದು ರಾತ್ರಿ 9ರ ಸುಮಾರಿಗೆ ರವಿ ಭೂಸಂಡೆ ಅವರು ಚಿದ್ರಿ ಮಾರ್ಗವಾಗಿ ಹೋಗುವಾಗ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಯೊಂದಿಗೆ ಸಾರ್ವಜನಿಕರ ವಾಗ್ವಾದ ನಡೆದಿತ್ತು. ಏನಾಗುತ್ತಿದೆ ಎಂದು ನೋಡಲು ಹೋಗಿದ್ದ ರವಿ ಅವರ ಮೇಲೆ ಅರಣ್ಯ ಇಲಾಖೆಯ ದಸ್ತಗೀರ್, ಶಾಂತಕುಮಾರ, ಗಜಾನಂದ ಹಾಗೂ ಸಂಗಮೇಶ ಎಂಬುವರು ಹಲ್ಲೆ ನಡೆಸಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಇದಕ್ಕೂ ಮುನ್ನ ನಗರದ ಪತ್ರಿಕಾ ಭವನದಲ್ಲಿ ಸಂಘದ ಪದಾಧಿಕಾರಿಗಳು ಸಭೆ ನಡೆಸಿ, ಖಂಡನಾ ನಿರ್ಣಯ ಕೈಗೊಂಡರು. ‘ಪತ್ರಕರ್ತನ ಕೆಲಸಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿರುವುದು ಅಕ್ಷಮ್ಯ ಅಪರಾಧ. ಇದು ಬಹಳ ಹೀನವಾದ ಕೃತ್ಯ. ಘಟನೆಗೆ ಕಾರಣರಾದವರನ್ನು ಶೀಘ್ರ ಬಂಧಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯ ಪತ್ರಕರ್ತರಿಂದ ಪ್ರತಿಭಟನೆ ನಡೆಸಲಾಗುವುದು. ಈ ರೀತಿಯ ಘಟನೆಗಳು ಆಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಬಳಿಕ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾಧ್ಯಕ್ಷ ಡಿ.ಕೆ. ಗಣಪತಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಪತ್ರಕರ್ತರಾದ ಬಾಬುವಾಲಿ, ಆನಂದ ದೇವಪ್ಪ, ಸಿದ್ರಾಮಯ್ಯ ಸ್ವಾಮಿ, ಅಪ್ಪಾರಾವ್ ಸೌದಿ, ಶಶಿ, ವಿಜಯಕುಮಾರ ಬೆಲ್ದೆ, ಚಿತ್ರಸೇನ್, ಪೃಥ್ವಿರಾಜ್, ರವಿ ಸ್ವಾಮಿ, ವಿಜಯಕುಮಾರ ಸೋನಾರೆ, ಸುನೀಲ ಭಾವಿಕಟ್ಟಿ, ಎಂ.ಪಿ. ಮುದಾಳೆ, ನಾಗಶೆಟ್ಟಿ ಧರಂಪೂರ, ಸಂತೋಷಕುಮಾರ, ಜೈಕುಮಾರ ಸೇರಿದಂತೆ ಮತ್ತಿತರರು ಹಾಜರಿದ್ದರು.


