ನರೇಗಾ ಕೆಲಸದಲ್ಲಿ ಶೇ.30 ರಷ್ಟು ರಿಯಾಯಿತಿ: ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ

ಬೆಳಗಾವಿ, ಏಪ್ರಿಲ್ 18: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಮೂಲಕ ಉದ್ಯೋಗ ಕ್ರಾಂತಿ ನಡೆಸಲು ಮುಂದಾಗಿರುವ ಸರ್ಕಾರ ನರೇಗಾ ಕೂಲಿ ಕಾರ್ಮಿಕರಿಗೆ ಒಂದಾದ ಮೇಲೊಂದು ಗುಡ್ ನ್ಯೂಸ್ ಕೊಡುತ್ತಿದೆ. ಈ ಹಿಂದೆ ದಿನದ ಕೂಲಿ ಹೆಚ್ಚಿಸಿದ್ದ ಸರ್ಕಾರ ಇದೀಗ ಕೆಲಸದ ಸಮಯದಲ್ಲಿ ರಿಯಾಯಿತಿ ನೀಡುತ್ತಿದೆ.
ಇದರಿಂದ ನರೇಗಾ ಕೂಲಿ ಕಾರ್ಮಿಕರಿಗೆ ಸಂತೋಷವಾಗಿದ್ದು, ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲಿನ ತಾಪಮಾನ ಇರುವ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿಕಾರರಿಗೆ ಶೇ.30 ರಷ್ಟು ಕೆಲಸದಲ್ಲಿ ರಿಯಾಯಿತಿ ನೀಡಲಾಗಿದ್ದು, ಇದರ ಸದುಪಯೋಗವನ್ನು ಕೂಲಿಕಾರರು ಪಡೆದುಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ತಿಳಿಸಿದ್ದಾರೆ.

ಬೇಸಿಗೆ ಬಿಸಿಲಿನ ಪ್ರಮಾಣ ತೀವ್ರವಾಗಿರುವ ಹಿನ್ನೆಲೆಯಲ್ಲಿ ಈ ಎರಡು ತಿಂಗಳ ಮನರೇಗಾ ಯೋಜನೆಯ ಕೂಲಿಕಾರರಿಗೆ ಸಮಸ್ಯೆ ಆಗದಂತೆ ನಿಗಾವಹಿಸುವ ನಿಟ್ಟಿನಲ್ಲಿ ಕೆಲಸ ಪ್ರಮಾಣ ಶೇ.30 ರಷ್ಟು ಕಡಿಮೆ ಮಾಡಲಾಗಿದೆ. ಅದೇ ರೀತಿ ವಿಶೇಷ ಚೇತನರಿಗೆ ಹಾಗೂ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಶೇ.50 ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗಿದೆ.
ಅಲ್ಲದೇ ಕೆಲಸದ ಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ನೆರಳಿನ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಗ್ರಾಮೀಣ ಪ್ರದೇಶದ ಎಲ್ಲ ಕೂಲಿಕಾರರು ಇದರಂತೆ ಕೆಲಸ ಮಾಡಿಕೊಂಡು ಆರೋಗ್ಯದ ಕಡೆಗೂ ಗಮನಹರಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ತಿಳಿಸಿದ್ದಾರೆ.
ಬಿಸಿಲಿನಿಂದ ತಪ್ಪಿಸಿಕೊಳ್ಳಲು ಕೂಲಿಕಾರರು ಆದಷ್ಟು ಬೆಳಿಗ್ಗಿನ ಸಮಯದಲ್ಲಿ ಕೆಲಸಕ್ಕೆ ಹೋಗಿ ನಿಗದಿಪಡಿಸಿದ ಕೆಲಸ ಪೂರ್ಣಗೊಳಿಸಿ ಮನೆಗೆ ತೆರಳಹುದಾಗಿರುವುದರಿಂದ ಕೂಲಿಕಾರರ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಈ ಸೌಲಭ್ಯವನ್ನು ಕೂಲಿಕಾರರು ಪಡೆದುಕೊಳ್ಳಬೇಕು ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕೂಲಿ ಹೆಚ್ಚಳ
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಮೂಲಕ ಉದ್ಯೋಗ ಕ್ರಾಂತಿ ನಡೆಸಲು ಮುಂದಾಗಿರುವ ಸರ್ಕಾರ ಮುಂದಿನ ದಿನಗಳಲ್ಲಿ ಶೇ.100ರಷ್ಟು ಗುರಿ ಸಾಧಿಸುವ ಮಹಾತ್ವಾಕಾಂಕ್ಷೆ ಹೊಂದಿದೆ. ಈ ಹಿನ್ನಲೆಯಲ್ಲಿ ರಸ್ತೆ ಕಾಮಗಾರಿ, ಚರಂಡಿ ಹಾಗೂ ಇನ್ನಿತರ ಸಮುದಾಯ ಮತ್ತು ವೈಯುಕ್ತಿಕ ಕಾಮಗಾರಿಗಳನ್ನು ಸೇರಿಸಲಾಗಿದೆ. ಇದರಿಂದ ಜನರಿಗೆ, ರೈತರಿಗೆ ಹಾಗೂ ಕೆಲಸ ಮಾಡುವವರಿಗೆ ಪ್ರಯೋಜನ ಸಿಗುತ್ತಿದೆ. ಈ ಯೋಜನೆಯಡಿ ಆಯಾ ರಾಜ್ಯಗಳಿಗೆ ಅನುಗುಣವಾಗಿ ಕೂಲಿಯನ್ನು ನಿಗದಿ ಮಾಡಲಾಗಿದೆ. ಇದೀಗ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಮ-ನರೇಗಾ ಯೋಜನೆ ಕೂಲಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದರನ್ವಯ ಕರ್ನಾಟಕದಲ್ಲಿ 2024-25 ನೇ ಸಾಲಿನಲ್ಲಿ 349 ರೂ. ಗಳಿಂದ ಕೂಲಿಯನ್ನು 2025-26 ನೇ ಸಾಲಿನಲ್ಲಿ 370 ರೂ.ಗಳಿಗೆ ಕೂಲಿ ಹೆಚ್ಚಳ ಮಾಡಿದೆ. ಏಪ್ರಿಲ್ 1, 2025 ರಿಂದ 370 ರೂ.ಗಳ ಕೂಲಿ ಜಾರಿಯಲ್ಲಿದೆ.


