Ricky Rai : ಭೂಗತ ಲೋಕದ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆದುಷ್ಕರ್ಮಿಗಳಿಂದ ಫೈರಿಂಗ್

ರಾಮನಗರ,ಏ.19– ಭೂಗತ ಲೋಕದ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡ ರಾತ್ರಿ ನಡೆದಿದೆ.
ಗುಂಡಿನ ದಾಳಿಯಿಂದ ರಿಕ್ಕಿ ರೈ ಅವರ ಕೈ ಹಾಗೂ ಮೂಗಿಗೆ ಗಂಭೀರ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ತಡರಾತ್ರಿ 12 ಗಂಟೆ ಸುಮಾರಿನಲ್ಲಿ ಬಿಡದಿಯ ಮನೆಯಿಂದ ಕಾರಿನಲ್ಲಿ ಬೆಂಗಳೂರಿಗೆ ಚಾಲಕ ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ರಿಕ್ಕಿ ರೈ ಹಿಂಬಂದಿ ಸೀಟಿನಲ್ಲಿ ಕುಳಿತು ತೆರಳುತ್ತಿದ್ದಾಗ ಮನೆಯ ಕೂಗಳತೆಯ ದೂರದಲ್ಲಿಯೇ ಹೊಂಚುಹಾಕಿ ಕುಳಿತಿದ್ದ ದುಷ್ಕರ್ಮಿಗಳು ಏಕಾಏಕಿ ಕಾರಿನ ಮೇಲೆ ಎರಡು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಏನಾಗುತ್ತಿದೆ ಎಂದು ನೂಡುವಷ್ಟರಲ್ಲಿ ಕಾರಿನ ಗಾಜು ಸೀಳಿಕೊಂಡು ಗುಂಡುಗಳು ರಿಕ್ಕಿ ರೈ ಅವರ ಮೂಗು ಹಾಗೂ ಕೈಗೆ ತಾಗಿ ಗಾಯಗಳಾಗಿವೆ. ತಕ್ಷಣವೇ ಅವರನ್ನು ಬಿಡದಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಬಿಡದಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.ರಿಕ್ಕಿ ರೈ ಅವರು ಎರಡು ದಿನಗಳ ಹಿಂದೆಯಷ್ಟೇ ರಷ್ಯಾದಿಂದ ವಾಪಾಸ್ ಆಗಿದ್ದರು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ನಿರತರಾಗಿದ್ದರು.
ರಾತ್ರಿ ರಾಮನಗರ ತಾಲೂಕಿನ ಬಿಡದಿ ಮನೆಯಿಂದ ತಡರಾತ್ರಿ ತಮ್ಮ ಫಾರ್ಚೂನರ್ ಕಾರಿನಲ್ಲಿ ಬೆಂಗಳೂರಿಗೆ ಹೋಗಲು ಮನೆಯಿಂದ ಹೊರ ಬರುತ್ತಿದ್ದಂತೆ ಕಾಂಪೌಂಡ್ ಬಳಿಯೇ ಹೊಂಚು ಹಾಕಿ ಕುಳಿತ್ತಿದ್ದ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿ ಹತ್ಯೆಗೆ ವಿಫಲ ಯತ್ನ ನಡೆಸಿದ್ದಾರೆ.
ಚಾಲಕನಿಂದ ಕಾರು ಚಾಲನೆ: ಪ್ರತಿ ಬಾರಿಯೂ ರಿಕ್ಕಿ ರೈ ಅವರೇ ಕಾರನ್ನು ಚಾಲನೆ ಮಾಡುತ್ತಿದ್ದರು. ಹಾಗಾಗಿ ಚಾಲಕನ ಸೀಟ್ ಟಾರ್ಗೆಟ್ ಮಾಡಿಯೇ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಆದರೆ ಅವರ ಅದೃಷ್ಟವೇನೂ ಗೊತ್ತಿಲ್ಲ.
ರಾತ್ರಿ ಡೈವರ್‌ಗೆ ಕಾರು ಚಲಾಯಿಸಲು ಹೇಳಿ ಹಿಂಬದಿ ಸೀಟಿನಲ್ಲಿ ಭದ್ರತಾ ಸಿಬ್ಬಂದಿ ಜೊತೆ ಕುಳಿತ್ತಿದ್ದರಿಂದ ಫೈರಿಂಗ್ ಆಗುತ್ತಿದ್ದಂತೆ ಕಾರು ಚಾಲಕ ಬಸವರಾಜು ಬಗ್ಗಿದ್ದು, ಕೂದಳೆಲೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಕಾರು ಚಾಲಕ ಬಿಡದಿ ಪೊಲೀಸ್ ಠಾಣೆಗೆ ಮೂವರ ವಿರುದ್ದ ದೂರು ನೀಡಿದ್ದಾರೆ.



