
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸಂಕಷ್ಟದಲ್ಲಿರುವ ಕನ್ನಡಿಗರಿಗೆ ನೆರವಾಗುವ ಮೂಲಕ ಆಪತ್ಬಾಂಧವರಾಗಿದ್ದಾರೆ. ಈ ಹಿಂದೆ ಉತ್ತರಾಖಂಡ್‌ನ ಮೇಘ ಸ್ಫೋಟ, ಒಡಿಶಾ ರೈಲು ದುರಂತ ಮತ್ತು ವಯನಾಡಿನ ಪ್ರವಾಹದ ಸಂದರ್ಭದಲ್ಲಿಯೂ ಅವರು ಕನ್ನಡಿಗರ ರಕ್ಷಣೆಗೆ ಧಾವಿಸಿದ್ದರು. ಇದೀಗ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೊಳಗಾದ ಕನ್ನಡಿಗರನ್ನು ಕರೆತರಲು ಸರ್ಕಾರದಿಂದ ನಿಯೋಜಿತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
- ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರನ್ನು ವಾಪಸ್ ಕರೆತರವಲ್ಲಿ ಸಚಿವ ಸಂತೋಷ್ ಲಾಡ್ ಶ್ರಮ.
- ಇತರ ಸಚಿವರು ಪಹಲ್ಗಾಮ್‌ಗೆ ಹೋಗಲು ನಿರಾಕರಿಸಿದ ಕಾರಣ, ಸಂತೋಷ್ ಲಾಡ್ ಅವರಿಗೆ ಮತ್ತೆ ಹೊಣೆಗಾರಿಕೆ.
- ಈ ಹಿಂದೆ ಉತ್ತರಖಂಡ್, ಒಡಿಶಾ, ವಯನಾಡ್‌ಗೆ ತೆರಳಿ ಕನ್ನಡಿಗರಿಗೆ ನೆರವಾಗಿದ್ದ ಲಾಡ್.
ಬೆಂಗಳೂರು: ಹೊರ ರಾಜ್ಯಗಳಿಗೆ ತೆರಳಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳ ಪಾಲಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಕ್ಷರಶಃ ಆಪತ್ಬಾಂಧವ ಎನಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಉತ್ತರಾಖಂಡ್‌ನಲ್ಲಿ ಮೇಘ ಸ್ಫೋಟದಿಂದ ದುರಂತ ಸಂಭವಿಸಿತ್ತು. ಆಗಲೂ ತಮ್ಮ ಸಂಪುಟದಲ್ಲಿ ಸದಸ್ಯರಾಗಿದ್ದ ಸಂತೋಷ್ ಲಾಡ್ ಅವರನ್ನು ಸಿದ್ದರಾಮಯ್ಯ ಕಳುಹಿಸಿ ಕೊಟ್ಟಿದ್ದರು.ಬಳಿಕ 2 ನೇ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಒಡಿಶಾದ ರೈಲು ದುರಂತದ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡಿಗರನ್ನು ಕರೆತರಲು ಸಂತೋಷ್ ಲಾಡ್ ತೆರಳಿದ್ದರು. ಕಳೆದ ವರ್ಷ ವಯನಾಡಿನಲ್ಲಿ ಪ್ರವಾಹವಾದ ಸಂದರ್ಭದಲ್ಲಿಯೂ ಸಂತೋಷ್ ಲಾಡ್ ಅವರೇ ಸ್ಥಳಕ್ಕೆ ತೆರಳಿ ಕನ್ನಡಿಗರಿಗೆ ನೆರವಾಗಿದ್ದರು. ಈ ಹಿಂದೆ 3 ಬಾರಿ ದುರಂತ ಸ್ಥಳಗಳಿಗೆ ಭೇಟಿ ನೀಡಿ ಕನ್ನಡಿಗರ ಹಿತರಕ್ಷಣೆಗೆ ಶ್ರಮಿಸಿದ್ದ ಸಂತೋಷ್ ಲಾಡ್ ಈಗ ಪಹಲ್ಗಾಮ್‌ಗೂ ತೆರಳುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಯೋಧನಂತೆ ಕೆಲಸ
ಅಂದು ಉತ್ತರಾಖಂಡ್‌ನಲ್ಲಿ ಪ್ರಕೃತಿ ವಿಕೋಪವಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡಿಗ ಯಾತ್ರಾರ್ಥಿಗಳ ರಕ್ಷಣೆಗೆ ಸಂತೋಷ್ ಲಾಡ್ ತೆರಳಿದ್ದರು. ಸ್ವತಃ ವಾಹನ ಚಲಾಯಿಸಿಕೊಂಡು ಯಾತ್ರಾರ್ಥಿಗಳನ್ನು ಸೇನಾ ಹೆಲಿಕಾಪ್ಟರ್ ಬಳಿ ತಂದು ಬಿಡುತ್ತಿದ್ದರು.
ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಸಿಎಂ ಆದ ಆರಂಭದಲ್ಲಿಅಂದರೆ ಕಳೆದ ವರ್ಷ ಉತ್ತರ ಭಾರತದಲ್ಲಿಉಂಟಾದ ಪ್ರವಾಹದಲ್ಲಿಕನ್ನಡಿಗರು ತೊಂದರೆಗೆ ಒಳಗಾಗಿದ್ದರು. ಆಗಲೂ ಮುಖ್ಯಮಂತ್ರಿಯವರು ಸಚಿವ ಸಂತೋಷ್ ಲಾಡ್ ಅವರನ್ನು ಸ್ಥಳಕ್ಕೆ ಕಳುಹಿಸಿ ಕೊಟ್ಟಿದ್ದರು. ಈ ಬಾರಿ ಉಗ್ರರ ದಾಳಿಯಿಂದ ನಲುಗಿರುವ ಪಹಲ್ಗಾಮ್‌ಗೆ ಹೋಗಿದ್ದ ಸಂತೋಷ್ ಲಾಡ್ ಅಲ್ಲಿದ್ದ ಕನ್ನಡಿಗರನ್ನು ವಾಪಸ್ ಕರೆತರಲು ಸರಕಾರದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ನಾನೊಲ್ಲೆ ನಾನೊಲ್ಲೆಎಂದಿದ್ದ ಸಚಿವರು
ಸರಕಾರದ ಉನ್ನತ ಮೂಲಗಳ ಪ್ರಕಾರ, ಈ ಬಾರಿ ಬೇರೆ ಸಚಿವರನ್ನು ಪಹಲ್ಗಾಮ್‌ಗೆ ಕಳುಹಿಸಲು ಸಿಎಂ ಬಯಸಿದ್ದರು. ಆದರೆ, ಯಾರೂ ಮನಸ್ಸು ಮಾಡದ್ದರಿಂದ ಮತ್ತೆ ಲಾಡ್ ಅವರಿಗೇ ಹೊಣೆಗಾರಿಕೆ ವಹಿಸಲಾಯಿತಂತೆ.
ಮಂಗಳವಾರ ಈ ದುರ್ಘಟನೆ ಸಂಭವಿಸುತ್ತಿದ್ದಂತೆ ಕನ್ನಡಿಗ ಪ್ರವಾಸಿಗರ ಹಿತದೃಷ್ಟಿಯಿಂದ ಸರಕಾರದ ಪ್ರತಿನಿಧಿಗಳನ್ನು ಕಳುಹಿಸಲು ಮುಂದಾದ ಸಿಎಂ ಸಿದ್ದರಾಮಯ್ಯ, ಈ ಸಂಬಂಧ ತಮ್ಮ ಸಂಪುಟದ 4-5 ಸಚಿವರಲ್ಲಿ ಪ್ರಸ್ತಾಪಿಸಿದರಂತೆ. ಆದರೆ, ಕೆಲವರು ಅನಾರೋಗ್ಯದ ಕಾರಣ ನೀಡಿದರೆ ಇನ್ನು ಕೆಲವರು ಪೂರ್ವ ನಿಯೋಜಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲೇಬೇಕಾದ ಒತ್ತಡವಿರುವ ಬಗ್ಗೆ ಹೇಳಿಕೊಂಡರು ಎನ್ನುತ್ತವೆ ಮೂಲಗಳು.
ಬಳಿಕ ಸಂತೋಷ್ ಲಾಡ್ ಅವರಿಗೇ ಸಿಎಂ ಕಡೆಯಿಂದ ಸೂಚನೆ ಹೋಯಿತು. ಸಿಎಂ ಸೂಚನೆ ಬರುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಸಂತೋಷ್ ಲಾಡ್, ಬುಧವಾರ ಬೆಳಗ್ಗೆ ಹುಬ್ಬಳ್ಳಿಯಿಂದ ವಿಶೇಷ ವಿಮಾನದ ಮೂಲಕ ಪ್ರಯಾಣ ಬೆಳೆಸಿದ್ದರು.




