ಲೋಕಾಯುಕ್ತ ಅಧಿಕಾರಿಗಳ ಭರ್ಜರಿ ಬೇಟೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ, ಉಪಾಧ್ಯಕ್ಷ, ಮೂವರು ಸದಸ್ಯರು

ಹಾವೇರಿ: ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಇ-ಸ್ವತ್ತು ಉತಾರ ಪೂರೈಸಲು ಲಂಚ ಸ್ವೀಕಾರ ಮಾಡುತ್ತಿದ್ದ ಗ್ರಾಮ ಪಂಚಾಯತ್ ಪಿಡಿಒ ಸಹಿತ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಗೂ ಗ್ರಾಮ ಪಂಚಾಯತ್ನ ಮೂವರು ಸದಸ್ಯರನ್ನು ಬಂಧಿಸಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮ ಪಂಚಾಯತ್ ಪಿಡಿಒ, ಉಪಾಧ್ಯಕ್ಷ ಹಾಗೂ ಗ್ರಾಮ ಪಂಚಾಯತ್ನ ಮೂವರು ಸದಸ್ಯರು ಲೋಕಾಯುಕ್ತದಿಂದ ಬಂಧಿತರಾದ ಆರೋಪಿಗಳು.
ಪಿಡಿಒ ಕೆ.ಮಂಜುನಾಥ, ಉಪಾಧ್ಯಕ್ಷ ಮಲ್ಲಪ್ಪ ಬೂದಿಹಾಳ, ಗ್ರಾಮ ಪಂಚಾಯತ್ ಸದಸ್ಯರಾದ ಸೋಮಶೇಖರ್, ಪ್ರಸನ್ನ ಮತ್ತು ಸೈಯದ್ ರೆಹಮಾನ್ ಬಂಧಿತರು.
ನವೀನ್ ಅಂದನೂರು ಲೇಔಟ್ ಮಾಲೀಕನಿಗೆ ಆರೋಪಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನವೀನ್ ಅವರಿಂದ ಲಂಚ ಪಡೆಯುತ್ತಿದ್ದ ವೇಳೆ ಆರೋಪಿಗಳು ಲೋಕಾಯುಕ್ತ ಬಲೆಗ ಬಿದ್ದಿದ್ದಾರೆ. 60 ಪ್ಲಾಟ್ ಗಳ ಎನ್.ಎ ಇ-ಸ್ವತ್ತು ಉತಾರ ಪೂರೈಸಲು 4 ಲಕ್ಷದ 50 ಸಾವಿರ ರೂಪಾಯಿ ಲಂಚಕ್ಕೆ ಆರೋಪಿಗಳು ಬೇಡಿಕೆ ಇಟ್ಟಿದ್ದರು ಎಂದು ವರದಿಯಾಗಿದೆ.
4 ಲಕ್ಷ ರೂಪಾಯಿ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿಎಸ್ಪಿ ಮಧುಸೂದನ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.ಬಂಧಿತ ಆರೋಪಿಗಳನ್ನು ಲೋಕಾಯುಕ್ತ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇತ್ತೀಚಿಗೆ ಲೋಕಾ ಬಲೆಗೆ ಬಿದ್ದಿದ್ದ ಬಿಇಒ : ಶಿಕ್ಷಕರೊಬ್ಬರ ಬಾಕಿ ವೇತನ ಸಂದಾಯ ಮಾಡಲು 30 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಹಾವೇರಿ ಬಿಇಒ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿ.
ಬಸವೇಶ್ವರ ನಗರದ 13ನೇ ಕ್ರಾಸ್ ನಲ್ಲಿರುವ ಮನೆಯಲ್ಲಿ 15 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಶಿಕ್ಷಕ ಪ್ರತಾಪ್ ಬಾರ್ಕಿ ಎಂಬುವರಿಂದ ಲಂಚ ಪಡೆಯುತ್ತಿದ್ದ ವೇಳೆ ಬಿಇಒ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು.


