ವಿಜಯಪುರ: RTO ಕಚೇರಿ ಮೇಲೆ ಲೋಕಾಯುಕ್ತ ದಾಳಿ, 24 ಎಜೆಂಟರು ವಶಕ್ಕೆ; 1.50 ಲಕ್ಷ ರೂ. ಜಪ್ತಿ

ವಿಜಯಪುರ: ನಗರದ ಪ್ರಾದೇಶಿಕ ಸಾರಿಗೆ (ಆರ್‌ಟಿಒ) ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ದಿಢೀರ್ ದಾಳಿ ನಡೆಸಿ, ಅಲ್ಲಿನ ಅಧಿಕಾರಿಗಳು ಮತ್ತು ಖಾಸಗಿ ಎಜೆಂಟ್‌ಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಆರ್‌ಟಿಒ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಹಾಗೂ ಏಜೆಂಟರ ಮೂಲಕ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್‌ಪಿ ಟಿ.ಮಲ್ಲೇಶ ನೇತೃತ್ವದಲ್ಲಿ ಅಧಿಕಾರಿಗಳು ಏಕಾಏಕಿ ದಾಳಿ ಮಾಡಿ ತಪಾಸಣೆ ನಡೆಸಿದರು.
ಆರ್‌ಟಿಒ ವಾಸೀಂ ಬಾಬಾ ಹಾಗೂ ಇತರ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿ, ಕಚೇರಿಯಲ್ಲಿ ದಾಖಲಾತಿಗಳ ಪರಿಶೀಲನೆ ಮಾಡಿದರು. ಇದೇ ವೇಳೆ, 24 ಎಜೆಂಟರನ್ನು ವಶಕ್ಕೆ ಪಡೆದ ಅಧಿಕಾರಿಗಳು, ಎಜೆಂಟರ ಬಳಿಯಿದ್ದ ಅನಧೀಕೃತ 1.50 ಲಕ್ಷ ರೂ. ನಗದು ಹಣ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಲೈಸನ್ಸ್, ದಾಖಲಾತಿ ವರ್ಗಾವಣೆ ಹಾಗೂ ಇತರ ಕೆಲಸ-ಕಾರ್ಯಗಳಿಗಾಗಿ ಗ್ರಾಹಕರಿಂದ ಎಜೆಂಟರು ಹಣ ಸಂಗ್ರಹ ಮಾಡಿದ್ದರು ಎಂದು ತಿಳಿದು ಬಂದಿದೆ.
ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸರ್ಕಾರದ ಸಾರ್ವಜನಿಕ ಸೌಲಭ್ಯಗಳ ಬಗ್ಗೆ ದ್ವಂದ್ವ ನೀತಿ ಹಾಗೂ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳು ಬಂದಿದ್ದವು. ಜತೆಗೆ ಏಜೆಂಟರ ಮೂಲಕ ಹಣ ಸಂಗ್ರಹ ಮಾಡುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಸಲ್ಲಿಕೆಯಾಗಿದ್ದವು. ಈ ದೂರುಗಳ ಆಧಾರದ ಮೇಲೆ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ಲೋಕಾಯುಕ್ತ ಎಸ್‌ಪಿ ಟಿ.ಮಲ್ಲೇಶ ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿಗಳಾದ ಸುರೇಶ ರೆಡ್ಡಿ, ಸಿದ್ದೇಶ್ವರ, ಸಿಪಿಐ ಆನಂದ ಠಕ್ಕಣ್ಣನವರ ಹಾಗೂ ಲೋಕಾಯುಕ್ತ ಸಿಬ್ಬಂದಿ ಪಾಲ್ಗೊಂಡಿದ್ದರು.



