ಬೆಳಗಾವಿ: ಚನ್ನಮ್ಮ ವೃತ್ತದಲ್ಲಿ ಸೇರಿದ ಸಾವಿರಾರು ಮುಸ್ಲಿಂ ಬಾಂಧವರು- ಪ್ರತಿಭಟನೆ
ಸಂತಿಬಸ್ತವಾಡದಲ್ಲಿ ಧರ್ಮಗ್ರಂಥ ಸುಟ್ಟ ಪ್ರಕರಣ; ಕಿಡಿಗೇಡಿಗಳ ಬಂಧನಕ್ಕೆ ನೀಡಿದ 3 ದಿನಗಳ ಗಡುವು ಮುಕ್ತಾಯ…

ಬೆಳಗಾವಿ: ತಾಲ್ಲೂಕಿನ ಸಂತಿ ಬಸ್ತವಾಡ ಗ್ರಾಮದ ಮಸೀದಿಯಲ್ಲಿದ್ದ ಇಸ್ಲಾಂ ಧರ್ಮಗ್ರಂಥ ಕುರಾನ್ ಮತ್ತು ಹದೀಸ್‌ಅನ್ನು ಸುಟ್ಟ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಮುಸ್ಲಿಂ ಸಮುದಾಯವದರು ಬೆಳಗಾವಿ ಚನ್ನಮ್ಮನ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.



ಇದಕ್ಕೂ ಮೊದಲು ಮಧ್ಯಾಹ್ನದ ನಮಾಜ್ ಮುಗಿಸಿದ ಬಳಿಕ ಮಸೀದಿ, ದರ್ಗಾಗಳಿಂದಲೇ ಜನ ನೇರವಾಗಿ ರಾಣಿ ಚನ್ನಮ್ಮ ವೃತ್ತಕ್ಕೆ ಬಂದು ಸೇರಿದರು. ಅಲ್ಲದೇ ಇಲ್ಲಿನ ಕೋರ್ಟ್ ಆವರಣ ಪಕ್ಕದಲ್ಲಿರುವ ಅಂಜುಮನ್ ಸಂಸ್ಥೆಯ ಆವರಣದಲ್ಲಿ ಸೇರಿದ ಅಪಾರ ಸಂಖ್ಯೆಯ ಜನ, ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡರು. ನಂತರ ಎಲ್ಲರೂ ಸೇರಿ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಲ್ಲದೇ ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ‘ನಾರಾ ತಕ್ದೀರ್, ಅಲ್ಲಾಹು ಅಕ್ಬರ್’, ಹಿಂದಸ್ತಾನ್ ಜಿಂದಾಬಾದ್ ಎಂದು ನಿರಂತರ ಘೋಷಣೆ ಮೊಳಗಿಸಿದರು. ಮುಸ್ಲಿಂ ಧರ್ಮದ ಧ್ವಜಗಳನ್ನು ಎಲ್ಲೆಡೆ ಹಾರಾಡಿಸಿದರು. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿನ ಮಸೀದಿನಿಂದ ಧರ್ಮಗ್ರಂಥಗಳನ್ನು ಹೊರತಂದು ಸುಟ್ಟ ಪ್ರಕರಣವನ್ನು ಖಂಡಿಸಿ ಮುಸ್ಲಿಂ ಸಮಾಜದಿಂದ ಘಟನೆಯಾದ ದಿನವೇ ಉಗ್ರ ಪ್ರತಿಭಟನೆಯನ್ನು ನಡೆಸಲಾಗಿತ್ತು. ಈ ವೇಳೆ ನಗರ ಪೊಲೀಸ್ ಆಯುಕ್ತರು 3 ದಿನದೊಳಗೆ ಕಿಡಿಗೇಡಿಗಳನ್ನು ಬಂಧಿಸುವ ಭರವಸೆಯನ್ನು ನೀಡಲಾಗಿತ್ತು. ಆದರೇ ಇಂದಿಗೆ ಮೂರು ದಿನದ ಗಡುವು ಮುಗಿದ ಹಿನ್ನೆಲೆ ಇಂದು ಮತ್ತೇ ಮುಸ್ಲಿಂ ಸಮಾಜದವರು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ಘೋಷಣೆಗಳನ್ನು ಕೂಗಿ ಪ್ರತಿಭಟನೆಯನ್ನು ನಡೆಸಿದರು.


ಈ ವೇಳೆ ಮುಸ್ಲಿಂ ಮುಖಂಡರು ಮಾತನಾಡಿ, ಮೇ 11ರಂದು ಬೆಳಗಾವಿ ತಾಲ್ಲೂಕಿನ ಸಂತಿ ಬಸ್ತವಾಡ ಗ್ರಾಮದ ಮಸೀದಿಯಲ್ಲಿದ್ದ ಇಸ್ಲಾಂ ಧರ್ಮಗ್ರಂಥ ಕುರಾನ್ ಮತ್ತು ಹದೀಸ್‌ನ್ನು ಸೋಮವಾರ ಕಿಡಿಗೇಡಿಗಳು ಸುಟ್ಟು ಹಾಕಿದ್ದಾರೆ. ಕೂಡಲೇ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಕಠಿಣ ಶಿಕ್ಷೆ ವಿಧಿಸಿಲು ಬೆಳಗಾವಿ ಪೊಲೀಸರು ಮುಂದಾಗಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಎಲ್ಲಿಯೂ ಈ ತರದ ಘಟನೆ ನಡೆದಿಲ್ಲ. ಈ ಘಟನೆ ಹಿಂದೆ ಕಾಣದ ಕೈಗಳ ಕೈವಾಡ ಅಡಗಿದೆ. ಈ ಘಟನೆ ಯಾರು ಮಾಡಿದ್ದಾರೆ? ಅವರಿಗೆ ಕುಮ್ಮಕ್ಕು ಕೊಟ್ಟವರು ಯಾರು? ಎಂಬುದನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.

ಇತ್ತೀಚೆಗೆ ರಾಜ್ಯದಲ್ಲಿ ಕೆಲವೊಬ್ಬ ರಾಜಕಾರಣಿಗಳು ಹಾಗೂ ಬಿಜೆಪಿ ಸಂಘ ಪರಿವಾರವೂ ಕೋಮು ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಕೆಲಸ ಮಾಡ್ತಾ ಇದ್ದಾರೆ. ಇದರ ಪ್ರೇರಣೆಯಿಂದ ಇಂತಹ ಘಟನೆಗಳು ನಡೆಯುತ್ತಿವೆ. ರಾಜಕಾರಣಿಗಳ ಸ್ವಾರ್ಥಕ್ಕಾಗಿ ಅಮಾಯಕ ಜನರು ಬಲಿಯಾಗ್ತಾ ಇದ್ದಾರೆ. ಕೋಮುವಾದಕ್ಕೆ ಪ್ರಚೋದನೆ ನೀಡುತ್ತಿರುವ ವ್ಯಕ್ತಿಗಳ ವಿರುದ್ಧ ರಾಜ್ಯ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸರು ತಪ್ಪಿತಸ್ಥ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಅವರ ವಿರುದ್ದ ಕೋಮು ಪ್ರಚೋದನೆ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಉತ್ತರ ಶಾಸಕ ಆಸೀಫ್ ಸೇಠ್ ಅವರು ಸಂತಿಬಸ್ತವಾಡದಲ್ಲಿ ಧರ್ಮಗ್ರಂಥವನ್ನು ಸುಟ್ಟ ಘಟನೆ ಅಕ್ಷಮ್ಯ. ಬೆಳಗಾವಿ ಪೊಲೀಸ್ ಆಯುಕ್ತರು 7 ದಿನದೊಳಗೆ ಕಿಡಿಗೇಡಿಗಳನ್ನು ಬಂಧಿಸುವುದಾಗಿ ಭರವಸೆಯನ್ನು ನೀಡಿದೆ. ಮೊದಲೂ ಕಮಿಷ್ನರ್ ಮೂರು ದಿನದೊಳಗೆ ಕಿಡಿಗೇಡಿಗಳನ್ನು ಬಂಧಿಸುವುದಾಗಿ ತಿಳಿಸಿದ್ದರು. ಆದರೇ ಈ ಮೊದಲೂ ಸಂತಿಬಸ್ತವಾಡ ಗ್ರಾಮದಲ್ಲಿ ಈದ್ಗಾ ಗೋಡೆಯನ್ನು ಉರುಳಿಸಿದ ಆರೋಪಿಗಳನ್ನು ಬಂಧಿಸಿ ಕೋರ್ಟ್’ಗೆ ಹಾಜರುಪಡಿಸುವ ಕಾರ್ಯಾಚರಣೆಯಲ್ಲಿ ಅವರು ವ್ಯಸ್ಥವಾಗಿದ್ದರು. ಈಗಲೂ ಧರ್ಮಗ್ರಂಥವನ್ನು ಸುಟ್ಟ ಕಿಡಿಗೇಡಿಗಳ ಬಂಧನಕ್ಕೆ ಕಾರ್ಯಾಚರಣೆ ಜಾರಿಯಲ್ಲಿದೆ. ಈಗಾಗಲೇ ಕರ್ತವ್ಯಲೋಪವೆಸಗಿದೆ ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡಿದ್ದಾರೆ. ಶಾಂತಿಯುತವಾಗಿದ್ದು, ಪೊಲೀಸ್ ತನಿಖೆಗೆ ಸಹಕರಿಸಬೇಕೆಂದರು.

ಕೆಲ ಹೊತ್ತು ಸಂಚಾರ ಬಂದ್: ಚನ್ನಮ್ಮ ವೃತ್ತದಲ್ಲಿ ಅನೇಕ ಸಂಖ್ಯೆಯಲ್ಲಿ ಆಗಮಿಸಿದ ಮುಸ್ಲೀಂ ಸುಮುದಾಯದವರು ಪ್ರತಿಭಟನೆ ನಡೆಸಿದ್ದರಿಂದ ಚನ್ನಮ್ಮ ವೃತ್ತದ ನಾಲ್ಕೂ ದಿಕ್ಕಿನಲ್ಲಿ ರಸ್ತೆ ಸಂಚಾರ ಬಂದ್ ಆಯಿತು. ಅಲ್ಲದೇ ಮುಸ್ಲೀಂ ಸಮುದಾಯದ ಯುವಕರು ಕುರಾನ್ ಸುಟ್ಟ ಆರೋಪಿಗಳನ್ನು ಬಂಧಿಸುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದು ಘೋಷಣೆ ಮೊಳಗಿಸಿದರು. ಅಲ್ಲದೇ ಯುವಕರು ಕೆಲ ಹೊತ್ತು ಚನ್ನಮ್ಮ ವೃತ್ತದಲ್ಲಿ ಸಂಚಾರ ಬಂದ್ ಮಾಡಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಈ ಪತ್ರಿಭಟನೆ ಸುಮಾರು 3,000 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಬೆಳಿಗ್ಗೆಯೇ ಜಿಲ್ಲೆಯ ವಿವಿಧೆಡೆಯಿಂದ ಬಂದ ಪೊಲೀಸರು ರಾಣಿ ಚನ್ನಮ್ಮ ವೃತ್ತದಲ್ಲಿ ಡ್ರಿಲ್ ನಡೆಸಿದರು.
ನಿಷೇಧಾಜ್ಞೆ ಜಾರಿ: ಮುಂಜಾಗೃತಾ ಕ್ರಮವಾಗಿ ನಗರ ಪೊಲೀಸ್ ಕಮಿಷನರ್ ಅವರು ಸ್ಥಳದಲ್ಲಿ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಪ್ರತಿಭಟನೆಗೆ ಅವಕಾಶವಿಲ್ಲ; ಶಾಂತಿಯುತವಾಗಿ ಮೆರವಣಿಗೆ ಮಾಡಲು ತಿಳಿಸಿದ್ದರು. ಆದರೆ ಮುಸ್ಲಿಂ ಬಾಂಧವರು ನಡೆಸುತ್ತಿದ್ದ ಈ ಪ್ರತಿಭಟನೆಯಲ್ಲಿ ಕೆಲ ಕಿಡಿಗೇಡಗಳು ಹಲವು ಪೊಲೀಸರ ಮೇಲೆ ಚಪ್ಪಲಿಗಳನ್ನು ತುರಿದ್ದರಿಂದ ಕೆಲಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಆದರೆ ಅಲ್ಲೇ ಸ್ಥಳದಲ್ಲೇ ಇದ್ದ ಹಲವು ಪೊಲೀಸರು ವಾತಾವರಣ ತಿಳಿಗೊಳಿಸುವಲ್ಲಿ ನಿರತರಾದರು. ಇಂದು ನಡೆದ ಈ ಪ್ರತಿಭಟನೆಯಲ್ಲಿ ಶಾಸಕ ರಾಜು ಸೇಠ್ ಸೇರಿದಂತೆ ಸಾವಿರಾರೂ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಯುವಕರು ಭಾಗವಹಿಸಿದ್ದರು.


