ಇಂದು RCB ತಂಡದಿಂದ ವಿಜಯೋತ್ಸವ ಮೆರವಣಿಗೆ: ಎಲ್ಲಿಂದ, ಎಲ್ಲಿಗೆ? ಯಾವಾಗ? ಇಲ್ಲಿದೆ ಮಾಹಿತಿ.

RCB IPL 2025 victory parade: ಕಾದು ತಿಂದಷ್ಟು ಹಣ್ಣು ರುಚಿ ಎನ್ನುವಂತೆ 18 ವರ್ಷಗಳ ಬಳಿಕ ಸಿಕ್ಕಿರುವ ಮೊದಲ ಐಪಿಎಲ್ ಟ್ರೋಫಿಯು ಅಭಿಮಾನಿಗಳಲ್ಲಿ ಸಂಭ್ರಮ ಹೆಚ್ಚಿಸಿದೆ. ಸುದೀರ್ಘ ಕಾಯುವಿಕೆ ನಂತರ ದೊರೆತಿರುವ ಈ ಗೆಲುವನ್ನು ಅಭಿಮಾನಿಗಳ ಜತೆಯಲ್ಲಿ ಸಂಭ್ರಮಿಸಲು ಆರ್ಸಿಬಿ ತಂಡ ಇಂದು (ಜೂನ್ 04) ವಿಜಯದ ಮೆರವಣಿಗೆಯನ್ನು ನಡೆಸಲಿದೆ.
ತಮ್ಮ ನಿಷ್ಠಾವಂತ ಅಭಿಮಾನಿಗಳೊಂದಿಗೆ ತಮ್ಮ ವೈಭವವನ್ನು ಆಚರಿಸಲು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿಜಯೋತ್ಸವದ ಮೆರವಣಿಗೆಯನ್ನು ಘೋಷಿಸಿದೆ. ಜೂನ್ 4 ರಂದು ಮಧ್ಯಾಹ್ನ 3.30ಕ್ಕೆ ಮೆರವಣಿಗೆ ಆರಂಭವಾಗಲಿದೆ. ವಿಧಾನಸೌಧದಿಂದ ಆರಂಭವಾಗಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೆರವಣಿಗೆ ಮುಕ್ತಾಯವಾಗಲಿದೆ. ಈ ಐತಿಹಾಸಿಕ ದಿನವನ್ನು ಆಚರಿಸಲು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದ್ದು, ಬೆಂಗಳೂರು ಕೆಂಪು ಬಣ್ಣಕ್ಕೆ ತಿರುಗಲಿದೆ.
ಪಂದ್ಯದ ವಿಚಾರಕ್ಕೆ ಬಂದರೆ, ಪಂಜಾಬ್ ಕಿಂಗ್ಸ್ ವಿರುದ್ಧ ಮಂಗಳವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ಆರ್ಸಿಬಿ ತಂಡ ಅಮೋಘ ಬೌಲಿಂಗ್ ನಿರ್ವಹಣೆ ತೋರುವ ಮೂಲಕ 6 ರನ್ಗಳಿಂದ ಗೆದ್ದು ಹೊಸ ಇತಿಹಾಸ ಬರೆಯಿತು. ರಜತ್ ಪಾಟೀದಾರ್ ಆರ್ಸಿಬಿಗೆ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟ ಮೊದಲ ನಾಯಕ ಎನಿಸಿದರು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿಗಳಾದ ಕೈಲ್ ಜೇಮಿಸನ್ (48ಕ್ಕೆ 3) ಹಾಗೂ ಅರ್ಷದೀಪ್ ಸಿಂಗ್ (40ಕ್ಕೆ 3) ಬಿಗಿ ದಾಳಿಯ ನಡುವೆಯೂ ಅನುಭವಿ ವಿರಾಟ್ ಕೊಹ್ಲಿ (43 ರನ್, 35 ಎಸೆತ, 3 ಬೌಂಡರಿ) ಸಹಿತ ಇತರ ಬ್ಯಾಟರ್ಗಳ ಕೊಡುಗೆಯಿಂದ 9 ವಿಕೆಟ್ಗೆ 190 ರನ್ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಶಶಾಂಕ್ ಸಿಂಗ್ (61*ರನ್, 30 ಎಸೆತ, 3 ಬೌಂಡರಿ, 6 ಸಿಕ್ಸರ್) ಹೋರಾಟದ ನಡುವೆಯೂ ಪಂಜಾಬ್ ಕಿಂಗ್ಸ್ 7 ವಿಕೆಟ್ಗೆ 184 ರನ್ಗಳಿಸಲಷ್ಟೇ ಶಕ್ತಗೊಂಡಿತು.
ಕೃನಾಲ್ ಸ್ಪಿನ್ ಕಡಿವಾಣ
ಸವಾಲಿನ ಮೊತ್ತದ ಚೇಸಿಂಗ್ಗೆ ಇಳಿದ ಪಂಜಾಬ್ಗೆ ಪ್ರಿಯಾಂಶ್ (24)-ಪ್ರಭ್ಸಿಮ್ರನ್ ಸಿಂಗ್ (26) ಮೊದಲ ವಿಕೆಟ್ಗೆ 30 ಎಸೆತಗಳಲ್ಲಿ 43 ರನ್ಗಳಿಸಿ ಉತ್ತಮ ಆರಂಭ ಒದಗಿಸಿದರು. ನಂತರ ಜೋಶ್ ಇಂಗ್ಲಿಸ್ (39) ಚೇಸಿಂಗ್ಗೆ ಬಲ ತುಂಬಿದರು. ಇಂಗ್ಲಿಸ್ ವಿಕೆಟ್ ಪಡೆದ ಕೃನಾಲ್ (17ಕ್ಕೆ 2) ಪಂದ್ಯದ ಗತಿ ಬದಲಾಯಿಸಿದರು. 10ನೇ ಓವರ್ನಲ್ಲಿ ರೊಮಾರಿಯೊ ಶೆಫರ್ಡ್, ನಾಯಕ ಶ್ರೇಯಸ್ ಅಯ್ಯರ್ (1) ವಿಕೆಟ್ ಪಡೆದ ಬಳಿಕ ಪಂದ್ಯ ತಿರುವು ಪಡೆಯಿತು. ಅನುಭವಿ ಭುವನೇಶ್ವರ್ (38ಕ್ಕೆ 2) 17ನೇ ಓವರ್ನಲ್ಲಿ ವಧೇರ (15), ಸ್ಟೋಯಿನಿಸ್ (6) ವಿಕೆಟ್ ಪಡೆದು ಆರ್ಸಿಬಿ ಹಾದಿ ಸುಗಮಗೊಳಿಸಿದರು.
ಬೆಂಗಳೂರು ನನ್ನ ಆತ್ಮ
ಪಂದ್ಯದ ನಂತರ ಆಸ್ಟ್ರೇಲಿಯಾ ದಿಗ್ಗಜ ಮ್ಯಾಥ್ಯೂ ಹೇಡನ್ ಜೊತೆ ಮಾತನಾಡಿದ ಕೊಹ್ಲಿ, ನನ್ನ ಯೌವನ, ನನ್ನ ಶ್ರೇಷ್ಠತೆ ಮತ್ತು ನನ್ನ ಅನುಭವ ಎಲ್ಲವನ್ನು ಈ ತಂಡಕ್ಕೆ ನೀಡಿದ್ದೇನೆ. ಇದು ನನಗೆ ತುಂಬಾ ಅರ್ಥಪೂರ್ಣವಾಗಿದೆ. ನಾನು ಹೇಳಿದಂತೆ, ನನ್ನ ಪ್ರತಿಯೊಂದು ಶಕ್ತಿಯನ್ನು ಈ ತಂಡಕ್ಕೆ ನೀಡಿದ್ದೇನೆ ಮತ್ತು ಅಂತಿಮವಾಗಿ ನಾವು ಐಪಿಎಲ್ ಗೆದ್ದಿದ್ದೇವೆ. ಇದು ಅದ್ಭುತ ಭಾವನೆ ಎಂದು ಕೊಹ್ಲಿ ಹೇಳಿದರು.
ಭಾರತೀಯ ತಂಡದೊಂದಿಗೆ ಗೆದ್ದ ಟ್ರೋಫಿಗಳೊಂದಿಗೆ ಐಪಿಎಲ್ ಟ್ರೋಫಿ ಗೆಲುವಿನ ಅನುಭವವನ್ನು ಹೋಲಿಸಲು ಕೇಳಿದಾಗ, 18 ವರ್ಷಗಳಿಂದ ನಾನು ಈ ತಂಡಕ್ಕೆ ಎಲ್ಲವನ್ನೂ ನೀಡಿದ್ದೇನೆ. ಏನೇ ಇರಲಿ, ನಾನು ಈ ತಂಡಕ್ಕೆ ನಿಷ್ಠನಾಗಿದ್ದೇನೆ. ನಾನು ಅವರೊಂದಿಗೆ (ಅಭಿಮಾನಿಗಳು ಮತ್ತು ತಂಡ) ನಿಂತಿದ್ದೆ. ಅವರು ನನ್ನ ಬೆನ್ನಿಗೆ ನಿಂತರು. ನಾನು ಯಾವಾಗಲೂ ಅವರೊಂದಿಗೆ ಈ ಕಪ್ ಗೆಲ್ಲುವ ಕನಸು ಕಂಡಿದ್ದೆ. ಬೇರೆಯವರೊಂದಿಗೆ ಗೆಲ್ಲುವುದಕ್ಕಿಂತ ಇದು ತುಂಬಾ ವಿಶೇಷವಾಗಿದೆ. ಏಕೆಂದರೆ ನನ್ನ ಹೃದಯ ಬೆಂಗಳೂರಿನೊಂದಿಗಿದೆ. ನನ್ನ ಆತ್ಮ ಬೆಂಗಳೂರಿನೊಂದಿಗಿದೆ ಮತ್ತು ನಾನು ಹೇಳಿದಂತೆ, ನಾನು ಐಪಿಎಲ್ ಆಡುವ ಕೊನೆಯ ದಿನದವರೆಗೂ ಆಡಲಿರುವ ತಂಡ ಇದು ಎಂದು ಕೊಹ್ಲಿ ಉತ್ತರಿಸಿದರು.
ವಿರಾಟ್ ಕೊಹ್ಲಿಗೆ ವಿಶೇಷ
ತಮ್ಮ ನಾಯಕತ್ವದಲ್ಲಿ ಮೊದಲ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟೀದಾರ್ ಸಂತೋಷ ವ್ಯಕ್ತಪಡಿಸಿದರು. ಈ ಗೆಲುವು ನನಗೆ, ವಿರಾಟ್ ಕೊಹ್ಲಿಗೆ ಮತ್ತು 18 ವರ್ಷಗಳಿಂದ ತಂಡವನ್ನು ಬೆಂಬಲಿಸುತ್ತಿರುವ ಎಲ್ಲಾ ಅಭಿಮಾನಿಗಳಿಗೆ ತುಂಬಾ ವಿಶೇಷವಾಗಿದೆ. ಈ ಗೆಲುವಿನ ಶ್ರೇಯಸ್ಸು ಅಭಿಮಾನಿಗಳಿಗೆ ಸಲ್ಲುತ್ತದೆ. ಕ್ವಾಲಿಫೈಯರ್-1 ಗೆದ್ದ ನಂತರ, ನಾವು ಪ್ರಶಸ್ತಿ ಗೆಲ್ಲುತ್ತೇವೆ ಎಂಬ ವಿಶ್ವಾಸ ನಮಗಿತ್ತು. ಅಂತಿಮ ಪಂದ್ಯದಲ್ಲಿ 190 ರನ್‌ಗಳು ಉತ್ತಮ ಸ್ಕೋರ್ ಎಂದು ನಾವು ಭಾವಿಸಿದ್ದೆವು. ಏಕೆಂದರೆ ಈ ಪಿಚ್ ಸ್ವಲ್ಪ ನಿಧಾನವಾಗಿದೆ. ನಮ್ಮ ಬೌಲರ್‌ಗಳು ಯೋಜನೆಗಳ ಪ್ರಕಾರ ಬೌಲಿಂಗ್ ಮಾಡಿದರು ಮತ್ತು ಫಲಿತಾಂಶವನ್ನು ಪಡೆದರು. ಕೃನಾಲ್ ಪಾಂಡ್ಯ ವಿಕೆಟ್ ಟೇಕರ್ ಬೌಲರ್. ನಾನು ಒತ್ತಡದಲ್ಲಿದ್ದಾಗಲೆಲ್ಲಾ, ನಾನು ಅವರನ್ನು ಗೌರವಿಸುತ್ತೇನೆ ಎಂದು ರಜತ್ ಪಾಟೀದಾರ್ ಹೇಳಿದರು.
ಸ್ಪಿನ್ನರ್ ಸುಯಶ್ ಶರ್ಮ ಕೂಡ ಈ ಋತುವಿನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ್ದಾರೆ. ವೇಗಿಗಳಾದ ಭುವಿ, ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್ ಮತ್ತು ರೊಮಾರಿಯೊ ಅದ್ಭುತ ಬೌಲಿಂಗ್ ಮಾಡಿದ್ದಾರೆ. ರೊಮಾರಿಯೊ ಬ್ಯಾಟಿಂಗ್ ಜೊತೆಗೆ ಎರಡು ಅಥವಾ ಮೂರು ಓವರ್‌ಗಳನ್ನು ಬೌಲಿಂಗ್ ಮಾಡುವ ಮೂಲಕ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ವಿರಾಟ್ ಕೊಹ್ಲಿಯಂತಹ ದಂತಕಥೆಯ ಆಟಗಾರನ ಮೇಲ್ವಿಚಾರಣೆಯಲ್ಲಿ ಆರ್‌ಸಿಬಿಯನ್ನು ಮುನ್ನಡೆಸುವುದು ತಮಗೆ ದೊರೆತ ದೊಡ್ಡ ಗೌರವ ಎಂದು ರಜತ್ ಪಾಟೀದಾರ್ ಹೇಳಿದರು.
ನಾನು ನಾಯಕನಾಗಿ ಅವರಿಂದ ಬಹಳಷ್ಟು ಕಲಿತಿದ್ದೇನೆ. ಕೊಹ್ಲಿ, ಅಭಿಮಾನಿಗಳು, ನಿರ್ವಹಣೆ ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದಗಳು. ಈಗ ನಾನು ಅಭಿಮಾನಿಗಳಿಗೆ ಒಂದು ವಿಷಯ ಹೇಳಲು ಬಯಸುತ್ತೇನೆ.. ‘ಈ ಸಲ ಕಪ್ ನಮ್ದು’ ಎನ್ನುತ್ತಾ ರಜತ್ ಪಾಟೀದಾರ್ ಮಾತು ಮುಗಿಸಿದರು.