ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್, ಕಾಮೆಂಟ್ ಮಾಡುವವರಿಗೆ ವಿರುದ್ಧ ಇನ್ನುಮುಂದೆ ನಿರ್ದಾಕ್ಷಿಣ್ಯ ಕ್ರಮ ರಾಜ್ಯ ಪೊಲೀಸರ ಎಚ್ಚರಿಕೆ

ಬೆಂಗಳೂರು: ಸೋಶಿಯಲ್ ಮೀಡಿಯಾಗಳಲ್ಲಿ ಮನಸೋ ಇಚ್ಚೆ ಪೋಸ್ಟ್, ಕಾಮೆಂಟ್ ಮಾಡುವುದನ್ನು ಕರ್ನಾಟಕ ರಾಜ್ಯ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಪೋಸ್ಟ್, ಕಾಮೆಂಟ್ ಪ್ರಕಟಿಸುವವರ ವಿರುದ್ಧ ಇನ್ನುಮುಂದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಕಠಿಣ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಿಂದ ಸಂದೇಶ ನೀಡಿರುವ ಪೊಲೀಸರು, ಇನ್ನುಮುಂದೆ ಯಾವುದೇ ವ್ಯಕ್ತಿ, ಸಂಘಟನೆ ಅಥವಾ ಸಂಸ್ಥೆಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಅಥವಾ ಕಾಮೆಂಟ್ ಮಡುವ ಮೂಲಕ ಸಾರ್ವಜನಿಕ ಶಾಂತಿಭಂಗ, ಕಾನೂನು ಸುವ್ಯವಸ್ಥೆಗೆ ತೊಡಕುಂಟು ಮಾಡಿದರೆ ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ ಯಾವುದೇ ಬಳಕೆದಾರರಿಂದ ಅಂಥಹ ಚಟುವಟಿಕೆಗಳು ಪುನರಾವರ್ತನೆಯಾದರೆ ಕಠಿಣ ಕ್ರಮಕ್ಕೆ ದಾರಿಯಾಗಬಹುದು. ಜಾಗರೂಕರಾಗಿರಿ ಎಂದು ಎಚ್ಚರಿಕೆ ನೀಡಿರುವ ಪೊಲೀಸರು, ಕರ್ನಾಟಕ ರಾಜ್ಯ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿರುತ್ತಾರೆ ಎಂದು ತಿಳಿಸಿದ್ದಾರೆ.
ಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಅರ್ಚಕನ ಬಂಧನ: ಇತ್ತೀಚೆಗೆ, ಮೈಸೂರು ದಸರಾ ಉದ್ಘಾಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ಪೋಸ್ಟ್ ಮಾಡಿದ್ದ ಆರೋಪದ ಮೇಲೆ ಅರ್ಚಕನನ್ನು ಪೊಲೀಸರು ಬಂಧಿಸಿದ್ದರು.
ಕೆಂಗೇರಿ ನಿವಾಸಿ ಗುರುರಾಜ್ ಆಚಾರ್ಯ (50) ಬಂಧಿತ ಆರೋಪಿ. ನಾಡಹಬ್ಬ ಉದ್ಘಾಟನೆಗೆ ಬುಕ್ಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಸ್ತಾಕ್ ಅವರನ್ನು ಆಹ್ವಾನಿಸಿರುವ ಕುರಿತು ಅಶ್ಲೀಲ ಪದ ಬಳಕೆ ಬಳಸಿ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದರು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಕೆಂಗೇರಿ ಠಾಣೆ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡು, ಆರೋಪಿ ಅರ್ಚಕನನ್ನು ಬಂಧಿಸಿ ಕ್ರಮ ಕೈಗೊಂಡಿದ್ದರು.
ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲು: ಸಿಎಂ ವಿರುದ್ಧ ಅವಹೇಳನಕಾರಿ ಹೇಳಿಕೆ ಪೋಸ್ಟ್ ಮಾಡಿದ್ದ ಅರ್ಚಕನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ಹಾಗೂ ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಕುಶಾಲ್ ಹರುವೇಗೌಡ ಎಂಬವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದ್ದರು.
ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ವಿರುದ್ಧ ಅವಹೇಳನಕಾರಿ ಹಾಗೂ ಅಶ್ಲೀಲ ಸಂದೇಶ ರವಾನಿಸುತ್ತಿದ್ದ ಕಿಡಿಗೇಡಿಗಳ ವಿರುದ್ಧ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ದನಿಯೆತ್ತಿದ್ದರು. ಖುದ್ದು ರಮ್ಯಾ ಅವರೇ ನೀಡಿದ್ದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಬೆಂಗಳೂರು ಸಿಸಿಬಿ ಸೈಬರ್ ಕ್ರೈಮ್ ವಿಭಾಗದ ಪೊಲೀಸರು 9 ಜನ ಆರೋಪಿಗಳನ್ನು ಬಂಧಿಸಿದ್ದರು.