ಜೀತಕ್ಕೆ ದುಡಿಯುತ್ತಿದ್ದ ಐವರು ಬಾಲ ಕಾರ್ಮಿಕರು ಸೇರಿದಂತೆ ಒಡಿಶಾ ಮೂಲದ ಒಟ್ಟು 24 ಮಂದಿಯನ್ನು ರಕ್ಷಣೆ ಮಾಡಿರುವ ಘಟನೆ
ಜೀತಕ್ಕೆ ದುಡಿಯುತ್ತಿದ್ದ ಐವರು ಬಾಲ ಕಾರ್ಮಿಕರು ಸೇರಿ 24 ಕಾರ್ಮಿಕರ ರಕ್ಷಣೆ

ಜೀತಕ್ಕೆ ದುಡಿಯುತ್ತಿದ್ದ ಐವರು ಬಾಲ ಕಾರ್ಮಿಕರು ಸೇರಿದಂತೆ ಒಡಿಶಾ ಮೂಲದ ಒಟ್ಟು 24 ಮಂದಿಯನ್ನು ರಕ್ಷಣೆ ಮಾಡಿರುವ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಸಂಕ್ಲಾಪುರ ಗ್ರಾಮದ ಇಟ್ಟಿಗೆ ಭಟ್ಟಿಯ ಮೇಲೆ ಇಳಕಲ್ ತಹಶೀಲ್ದಾರ್, ಕಾರ್ಮಿಕ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.
ಈರಪ್ಪ ಕುಂಬಾರ ಎಂಬುವರ ಇಟ್ಟಿಗೆ ಭಟ್ಟಿಯಲ್ಲಿ ಇವರು ಕೆಲಸ ಮಾಡುತ್ತಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ. ಬಾಲ ಕಾರ್ಮಿಕ ನಿಷೇಧ ಮತ್ತು ಜೀತ ಪದ್ಧತಿ ನಿಷೇಧ ಕಾಯ್ದೆಯಡಿ ಇಳಕಲ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.
ಇಟ್ಟಿಗೆ ಭಟ್ಟಿಯಲ್ಲಿ ಜೀತದಾಳುಗಳಾಗಿ ಹಲವರು ದುಡಿಯುತ್ತಿದ್ದಾರೆ ಎಂಬ ಬಗ್ಗೆ ಜಿಲ್ಲಾ ಆಡಳಿತಕ್ಕೆ ದೂರು ಬಂದಿದ್ದ ಹಿನ್ನೆಲೆ, ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಒತ್ತೆಯಾಳು ಕಾರ್ಮಿಕರ ರಕ್ಷಣೆ ಮಾಡಿ, ಅವರನ್ನು ಮರಳಿ ಒಡಿಶಾಗೆ ಕಳುಹಿಸಲು ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.
ಮಾಹಿತಿಯ ಪ್ರಕಾರ ರಕ್ಷಿಸಲ್ಪಟ್ಟ ಕಾರ್ಮಿಕರು ಒಂಭತ್ತು ಕುಟುಂಬಗಳಿಗೆ ಸೇರಿದವರು ಎನ್ನಲಾಗಿದ್ದು, ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡಿದ ಪ್ರತೀ ಕುಟುಂಬಕ್ಕೂ ವಾರಕ್ಕೆ ಕೇವಲ 800 ರೂ. ವೇತನ ನೀಡಲಾಗುತ್ತಿತ್ತು. ವಾರದಲ್ಲಿ ಒಬ್ಬ ಕುಟುಂಬ ಸದಸ್ಯನಿಗಷ್ಟೇ ಮಾರುಕಟ್ಟೆಗೆ ಹೋಗಲು ಅನುಮತಿ ಇತ್ತು ಎನ್ನಲಾಗಿದೆ.


