
ಬೆಳಗಾವಿ : ಕಳೆದ ಏಪ್ರಿಲ್ 28 ರಂದು ಕಾಂಗ್ರೆಸ್ ಸಮಾವೇಶದ ವೇಳೆ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಅಧಿಕಾರದ ದರ್ಪ ಹಾಗೂ ವೇದಿಕೆಯಲ್ಲೇ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಾಗಿದೆ.
ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಸಮಾವೇಶದ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ ಅವರನ್ನು ಹೊಡೆಯಲೆಂದು ಕೈ ಎತ್ತಿದ್ದರು.

ಈ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಘಟನೆಗೆ ಸಂಬಂಧಪಟ್ಟಂತೆ ಆರ್ ಟಿ ಐ ಕಾರ್ಯಕರ್ತ ಭೀಮಪ್ಪ ಗಡಾ ಅವರು ದೂರು ದಾಖಲಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ನಾರಾಯಣ ಭರಮನಿ ಅವರ ಮೇಲೆ ದರ್ಪ ತೋರುವ ಮೂಲಕ ಕರ್ತವ್ಯನಿರತ ಅಧಿಕಾರಿಗೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿ ಭೀಮಪ್ಪ ಗಡಾ ಅವರು ಬೆಳಗಾವಿ ನಗರದ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾನೂನು ಸಚಿವೆ ಹಾಗೂ ಇನ್ನಿತರ ಸಚಿವರ ಎದುರೇ ಸಿಎಂ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗೆ ಕೀಳು ಪದ ಬಳಸಿ ಹೊಡೆಯಲೆಂದು ಕೈ ಎತ್ತಿದ್ದು, ಸದ್ಯ ಸಿಎಂ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023 – 132ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತೆ 2023 – 132ರ ಕರ್ತವ್ಯದಲ್ಲಿ ನಿರತರಾಗಿದ್ದ ಯಾವುದೇ ಅಧಿಕಾರಿಯ ಮೇಲೆ ಹಲ್ಲೆ ಅಥವಾ ಬಲ ಪ್ರಯೋಗ ಮಾಡುವ ಯಾವುದೇ ವ್ಯಕ್ತಿಗೆ ಎರಡು ವರ್ಷದ ವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.


