
ಎಸ್ಸೆಸ್ಸೆಲ್ಸಿಯಲ್ಲಿ ಶೇ. 97ರಷ್ಟು ಅಂಕ ಪಡೆದು ಉತ್ತೀರ್ಣಳಾದ ಬೆಳಗಾವಿ ಸರ್ದಾರ್ಸ್ ಶಾಲೆಯ ವಿದ್ಯಾರ್ಥಿನಿ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಬಳಿಕ ವೈದ್ಯಕೀಯ ಶಿಕ್ಷಣದ ಶುಲ್ಕ ಭರಿಸುವುದರೊಂದಿಗೆ ಮುಂದಿನ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಶೇ. 95ಕ್ಕಿಂತ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ 25 ಸಾವಿರ ರೂಪಾಯಿಗಳ ವಿದ್ಯಾರ್ಥಿವೇತನವನ್ನು ನೀಡಲಾಗುವುದೆಂದು ಉತ್ತರ ಶಾಸಕ ಆಸೀಫ್ ಸೇಠ್ ಅವರು ಹೇಳಿದರು.
ಬೆಳಗಾವಿ ಸರ್ಕಾರಿ ಸರದಾರ್ಸ್ ಪ್ರೌಢ ಶಾಲೆಯಲ್ಲಿಂದು 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮಸ್ಥಾನ ಪಡೆದ ವಿದ್ಯಾರ್ಥಿನಿಯ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಉತ್ತರ ಶಾಸಕ ಆಸೀಫ್ ಸೇಠ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಿಡಿಪಿಐ ಲೀಲಾವತಿ ಹಿರೇಮಠ, ಗೌರವ ಅತಿಥಿಗಳಾಗಿ ಬಿಇಓ ವೈ ಜೆ. ಭಜಂತ್ರಿ, ಅತಿಥಿಗಳಾಗಿ ಬಿ.ಆರ್.ಸಿ ಐ.ಡಿ. ಹಿರೇಮಠ ಇನ್ನುಳಿದವರು ಉಪಸ್ಥಿತರಿದ್ಧರು. ಗಣ್ಯರ ಹಸ್ತದಿಂದ ಎಸ್ಸೆಸ್ಸೆಲ್ಸಿಯಲ್ಲಿ ಶೇ.97 ರಷ್ಟು ಅಂಕ ಪಡೆದು ಉತ್ತೀರ್ಣಳಾದ ವಿದ್ಯಾರ್ಥಿನಿಯನ್ನು ಸತ್ಕರಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಆಸೀಫ್ ಸೇಠ್ ಅವರು, ಶೇ.97 ರಷ್ಟು ಅಂಕಗಳನ್ನು ಪಡೆದು ಇಲ್ಲಿನ ವಿದ್ಯಾರ್ಥಿನಿ ಸಹನಾ ಮುರುಗೋಡ ಉತ್ತೀರ್ಣಳಾಗಲು ಆಕೆಗೆ ಶಿಕ್ಷಕರ ಮತ್ತು ಪಾಲಕರ ಮಾರ್ಗದರ್ಶನವೇ ಕಾರಣ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದೊಂದಿಗೆ ಏಕಾಗ್ರತೆಯಿಂದ ಓದಬೇಕು. ಸಾಧಿಸಿ ತೋರಿಸುವ ದೃಢ ನಿಶ್ಚಯವನ್ನು ಮಾಡಬೇಕು. ಪ್ರೌಢ ಶಾಲೆಯ ವಯಸ್ಸು ಮೋಜು ಮಸ್ತಿಯದ್ದಾಗಿದ್ದರೂ ಆಟದೊಂದಿಗೆ ಪಾಠ ಅತಿ ಮುಖ್ಯ. ಈ ಬಾರಿ ತಮ್ಮೆ ಕ್ಷೇತ್ರದ ಎಲ್ಲ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಶೇ.95 ರಷ್ಟು ಅಂಕ ಗಳಿಸಿ ಉತ್ತೀರ್ಣರಾಗುವವರಿಗೆ 25 ಸಾವಿರ ರೂಪಾಯಿ ವಿದ್ಯಾರ್ಥಿ ವೇತನವನ್ನು ನೀಡಲಾಗುವುದೆಂದು ಅವರು ಘೋಷಿಸಿದರು. ಎಲ್ಲರೂ ವಿದ್ಯಾರ್ಥಿ ವೇತನವನ್ನು ಪಡೆಯಲು ಪ್ರಯತ್ನಿಸಬೇಕು. ಅಲ್ಲದೇ ಶೇ. 97 ರಷ್ಟು ಅಂಕಗಳಿಸಿ ವೈದ್ಯಕೀಯ ಅಧ್ಯಯನ ಮಾಡಲು ಇಚ್ಛಿಸಿದ ವಿದ್ಯಾರ್ಥಿನಿಯ ನೀಟ್ ಪರೀಕ್ಷೆಯ ಫಲಿತಾಂಶ ಜಾರಿಯಾದ ಬಳಿಕ ವೈದ್ಯಕೀಯ ಶಿಕ್ಷಣದ ಶುಲ್ಕವನ್ನು ತಾವು ಭರಿಸುವುದಾಗಿ ತಿಳಿಸಿದರು.
ಇನ್ನು ಶಾಸಕ ಆಸೀಫ್ ಸೇಠ್ ಅವರು ಶಾಸಕರಾದ ಬಳಿಕ ಸರ್ಕಾರಿ ಸರ್ದಾರ್ ಪ್ರೌಢ ಶಾಲೆಯಲ್ಲಿ ಅಭಿವೃದ್ಧಿ ಪರ್ವವನ್ನು ಆರಂಭಿಸಿದ್ದು, ಶಾಲೆಯೂ ಕಾಯಾಪಲ್ಲಟವಾಗಿದ್ದನ್ನು ಕಾಣಬಹುದಾಗಿದೆ. ಮಕ್ಕಳಿಗೆ ಆರೋಗ್ಯ ಮತ್ತು ಶಿಕ್ಷಣವನ್ನು ಸರಿಯಾಗಿ ನೀಡಿದ್ದೇ ಆದಲ್ಲಿ ದೇಶವನ್ನು ಗಟ್ಟಿಮುಟ್ಟಿ ಕಟ್ಟಬಹುದಾಗಿದೆ. ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಿಂತಲೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇನ್ನು ವಿದ್ಯಾರ್ಥಿನಿ ಸಹನಾ ಮುರಗೋಡ ತನ್ನ ಈ ಸಾಧನೆಗೆ ಇಲ್ಲಿನ ಶಿಕ್ಷಕರು ಮತ್ತು ಪ್ರಾಂಶುಪಾಲರ ಮಾರ್ಗದರ್ಶನವೇ ಕಾರಣ. ಇಲ್ಲಿ ನೈಟ್ ಕ್ಲಾಸ್’ಗಳನ್ನು ನಡೆಸಲು ಶಾಸಕರು ಸಹಕರಿಸಿದ್ದು, ಪ್ರತಿಯೊಂದು ವಿದ್ಯಾರ್ಥಿಗಳಿಗೆ ಅವರು ಪ್ರೇರಣೆಯನ್ನು ನೀಡಿದ್ದಾರೆ. ವಿದ್ಯಾರ್ಥಿಗಳಿಂದ ಮಾಹಿತಿಯನ್ನು ಪಡೆದು ಅವರ ಸಮಸ್ಯೆಗಳನ್ನು ಬಗೆಹರಿಸಿದ ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ವೇಳೆ ಸರ್ಕಾರಿ ಸರದಾರ್ಸ್ ಪ್ರೌಢ ಶಾಲೆಯ ಪ್ರಾಚಾರ್ಯರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.