ಮಾರಕಾಸ್ತ್ರ ಹಿಡಿದು ಓಡಾಡಿದರೆ ರೌಡಿಶೀಟರ್ ಕೇಸ್ ಫಿಕ್ಸ್: ಇನ್ಮುಂದೆ ನಗರದಲ್ಲಿ ಯಾರಾದರೂ ಈ ರೀತಿ ಓಡಾಡಿದರೆ ಅಂಥವರ ವಿರುದ್ಧ ರೌಡಿಶೀಟರ್ ಪ್ರಕರಣ ದಾಖಲಿಸಲಾಗುವುದು. ಬೆಳಗಾವಿ ಪೊಲೀಸ್ ಕಮಿಷನರ್ ಎಚ್ಚರಿಕೆ

ಬೆಳಗಾವಿ: ಇತ್ತೀಚೆಗೆ ಕೆಲ ಕಿಡಿಗೇಡಿಗಳು ಮಾರಕಾಸ್ತ್ರ ಹಿಡಿದು ತಿರುಗಾಡುತ್ತಿರುವುದು ಕಂಡುಬಂದಿದೆ. ಇನ್ಮುಂದೆ ನಗರದಲ್ಲಿ ಯಾರಾದರೂ ಈ ರೀತಿ ಓಡಾಡಿದರೆ ಅಂಥವರ ವಿರುದ್ಧ ರೌಡಿಶೀಟರ್ ಪ್ರಕರಣ ದಾಖಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬ್ ರಾವ್ ಬೊರಸೆ ಎಚ್ಚರಿಕೆ ನೀಡಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕೆಲವು ಪ್ರಕರಣಗಳಲ್ಲಿ ಅಪ್ರಾಪ್ತರು ಕೂಡ ಮಾರಕಾಸ್ತ್ರ ಇಟ್ಟುಕೊಂಡು ತಿರುಗಾಡುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ನಾಳೆಯಿಂದಲೇ(ಗುರುವಾರದಿಂದ) ಕಾರ್ಯಾಚರಣೆಗೆ ಇಳಿಯಲಿದೆ ಎಂದರು.
ಈ ತಂಡದಲ್ಲಿ ಐದಾರು ಸಿಬ್ಬಂದಿ ಇದ್ದು, ಒಂದು ವಾಹನದಲ್ಲಿ ತೆರಳಿ ಯಾರ ಮೇಲೆ ಸಂಶಯ ಮೂಡುತ್ತದೋ ಅಂಥವರನ್ನು ತಪಾಸಣೆ ಮಾಡುತ್ತಾರೆ. ಚಾಕು, ತಲವಾರ್ ಸೇರಿ ಮಾರಕಾಸ್ತ್ರಗಳು ಪತ್ತೆಯಾದರೆ ನೇರವಾಗಿ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್ ದಾಖಲಿಸಲಾಗುತ್ತದೆ. ರೌಡಿಶೀಟ್ ಕೂಡಾ ತೆರೆಯುತ್ತೇವೆ. ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಠಾಣೆಗೆ ಬಂದು ಹಾಜರಿ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇಂದು(ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ನಲ್ಲಿ ಯುವಕನ ಮೇಲೆ ಚಾಕು ಇರಿತ ಪ್ರಕರಣದಲ್ಲಿ ಅಪ್ರಾಪ್ತರು ಪಾಲ್ಗೊಂಡಿರುವುದು ಗೊತ್ತಾಗಿದೆ. ಈ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಒಳಪಟ್ಟ ಇಬ್ಬರನ್ನು ಬಂಧಿಸಲಾಗಿದೆ.
ಆರೋಪಿಗಳು ಮೊದಲಿಗೆ ಸಂತ್ರಸ್ತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಧಮ್ಕಿ ಹಾಕಿ, ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಪ್ರಕರಣದ ಮಾಹಿತಿ ಸಿಕ್ಕ ತಕ್ಷಣ ಕಾರ್ಯಪ್ರವೃತ್ತರಾದ ನಮ್ಮ ಪೊಲೀಸರು ಡಿಸಿಪಿ ರೋಹನ್ ಜಗದೀಶ್ ಅವರ ನೇತೃತ್ವದಲ್ಲಿ ಘಟನೆ ನಡೆದ 10 ಗಂಟೆಯೊಳಗೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕಾನೂನು ಸಂಘರ್ಷಕ್ಕೆ ಒಳಪಟ್ಟ ಹಿನ್ನೆಲೆಯಲ್ಲಿ ಆ ಪ್ರಕಾರ ಕಾನೂನುಕ್ರಮ ವಹಿಸಿದ್ದೇವೆ. ಅದೇ ರೀತಿ ವೈಜ್ಞಾನಿಕವಾಗಿ ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಹೆಚ್ಚಿನ ಶಿಕ್ಷೆಗೆ ಗುರಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.


