Local NewsState
ಬೆಳಗಾವಿ ರಾಣಿ ಚೆನ್ನಮ್ಮ ಕೆಸರುಮಯವಾದ ರಸ್ತೆಒಂದೂವರೆ ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಎಲ್ ಆಂಡ್ ಟಿ ಗೆ ಹಿಡಿಶಾಪ ಹಾಕಿದ ಜನ!!

ಆಮೆಗತಿಯ ಅಭಿವೃದ್ಧಿ ಕಾಮಗಾರಿಗೆ ಬೆಳಗಾವಿಯ ರಾಣಿ ಚೆನ್ನಮ್ಮ ನಗರದ ಜನರು ಪ್ರತಿದಿನ ಇನ್ನಿಲ್ಲದ ಸಮಸ್ಯೆಯನ್ನು ಎದುರಿಸುತ್ತಿದ್ದು, ಎಲ್ ಆಂಡ್ ಟಿ ಕಂಪನಿಯ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಅಭಿವೃದ್ಧಿ ಕಾಮಗಾರಿಗಾಗಿ ಬೆಳಗಾವಿ ರಾಣಿ ಚೆನ್ನಮ್ಮ ನಗರದ ಫಸ್ಟ್ ಸ್ಟೇಜ್ ರಾಣಾ ಪ್ರತಾಪ್ ಕ್ರಾಸ್ ಬಳಿಯ ಪ್ರಮುಖ ರಸ್ತೆಯನ್ನು ಅಗೆದು ಸುಮಾರು ಒಂದೂವರೆ ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಮಳೆಗಾಲದಲ್ಲಿ ಮಣ್ಣಿನ ರಾಶಿ ನೀರಿನಲ್ಲಿ ನೆನೆದು ರಸ್ತೆಯೆಲ್ಲ ಕೆಸರುಮಯವಾಗಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ಓಡಾಡಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಗಾವಿ ರಾಣಿ ಚೆನ್ನಮ್ಮ ನಗರದ ಫಸ್ಟ್ ಸ್ಟೇಜ್’ನ ಪ್ರಮುಖ ಮಾರ್ಗದಲ್ಲಿ ಎಲ್. ಆಂಡ್ ಟಿ ಕಂಪನಿಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೇ, ಅಭಿವೃದ್ಧಿಯ ವೇಳೆ ಉಂಟಾದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಎಲ್ ಆಂಡ್ ಟಿ ನಿರ್ಲಕ್ಷ್ಯವನ್ನು ತೋರಿದೆ. ಮಳೆಗಾಲದಲ್ಲಿ ರಸ್ತೆಗಳು ಕೆಸರು ಗದ್ದೆಗಳಾಗಿದ್ದು ಬಿದ್ದು ಜನರು ಗಾಯಗೊಳ್ಳುತ್ತಿದ್ದಾರೆ.
ಕಾಮಗಾರಿ ಆರಂಭಗೊಂಡ ಮತ್ತು ಪರ್ಯಾಯ ರಸ್ತೆಯ ಯಾವುದೇ ಫಲಕವನ್ನು ಗುತ್ತಿಗೆದಾರ ಅಳವಡಿಸಿಲ್ಲ. ಎಲ್.ಆಂಡ್ ಟಿ ಸಂಬಂಧಿಸಿದ ಗುತ್ತಿಗೆದಾರರಿಗೆ ಸಮಯ ಮೀತಿಯೊಳಗೆ ಕಾರ್ಯವನ್ನು ಪೂರ್ಣಗೊಳಿಸಿ ರಿಸ್ಟೋರೆಷನ್ ಮಾಡಲು ಕಟ್ಟುನಿಟ್ಟಿನ ಆದೇಶವನ್ನು ನೀಡಬೇಕು. ಜನಪ್ರತಿನಿಧಿಗಳು ಇಲ್ಲಿ ಉಂಟಾದ ಸಮಸ್ಯೆಯನ್ನು ಅರಿತು ಪರಿಹರಿಸಬೇಕೆಂದು ಸ್ಥಳೀಯ ನಿವಾಸಿ ಪ್ರಮೋದ ಗುಂಜೀಕರ ಅವರು ಆಗ್ರಹಿಸಿದರು.
ರಾಣಾಪ್ರತಾಪ ಕ್ರಾಸ್’ಯಲ್ಲಿನ ರಸ್ತೆಗಳೆಲ್ಲ ಕೆಸರುಮಯವಾಗಿದ್ದು, ವೃದ್ಧರು, ಮಹಿಳೆಯರು ಚಿಕ್ಕಮಕ್ಕಳು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಇಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಶೀಘ್ರದಲ್ಲೇ ಮುಗಿಸಿ, ರಸ್ತೆಯನ್ನು ಅಭಿವೃದ್ಧಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇನ್ನು ವೃದ್ಧರಂತೂ ಮನೆ ಬಿಟ್ಟು ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಸರುಮಯ ರಸ್ತೆಯಲ್ಲಿ ಹೇಗೆ ಓಡಾಡುವುದು ಎಂಬ ಪ್ರಶ್ನೆ ಮೂಡ ತೊಡಗಿದೆ. ಶೀಘ್ರದಲ್ಲೇ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಜನಹಿತವನ್ನು ಕಾಪಾಡಬೇಕೆಂಬುದು ಹಿರಿಯರೊಬ್ಬರು ಹೇಳಿದರು.
ಕಳೆದ ಎರಡು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ಇಲ್ಲಿನ ಜನರು ಪ್ರತಿನಿತ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಸ್ತೆ ಮಧ್ಯದ ಮಣ್ಣಿನ ಬೃಹತ್ ರಾಶಿ ಮಳೆಗೆ ಕೆಸರಾಗಿ ಪರಿಣಮಿಸಿದೆ. ಮಳೆಗಾಲದಲ್ಲಂತೂ ಇಲ್ಲಿನ ಸಮಸ್ಯೆ ಹೇಳತೀರದಾಗಿದೆ ಎಂದು ಯುವಕರೊಬ್ಬರು ಹೇಳಿದರು.
ಸಂಬಂಧಿಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಿ ದೊಡ್ಡ ಅನಾಹುತಗಳು ಸಂಭವಿಸುವ ಮೊದಲೇ ಶೀಘ್ರದಲ್ಲೇ ಎಚ್ಚೆತ್ತುಕೊಂಡು ಸಮಸ್ಯೆಯನ್ನು ಬಗೆಹರಿಸಲು ಒತ್ತಾಯಿಸಲಾಗುತ್ತಿದೆ.


