ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ-ಬೆಳಗಾವಿ ಅಧಿಕಾರಿಗಳಿಗೆ ಚಾಟಿ ಬಿಸಿದ ಸಚಿವ ಕೃಷ್ಣಬೈರೇಗೌಡ ಗುಡುಗಿಗೆ ಗಡ ಗಡ ನಡುಗಿದ ಬೆಳಗಾವಿ ತಹಶೀಲ್ದಾರ್

ಬೆಳಗಾವಿ: ಮಳೆಗಾಲದಲ್ಲಿ ಬೆಳಗಾವಿಯಲ್ಲಿ ಏನೇನು ಸಮಸ್ಯೆಯಾಗಿದೆ. ಹಾನಿ ತಡೆಗೆ ಏನೇನು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಳಗಾವಿ ತಹಶೀಲ್ದಾರ್ ಬಸವರಾಜ ನಾಗರಾಳ ಅವರನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಡಿಸಿ ಎದುರೆ ಚಳಿಬಿಡಿಸಿದರು.
ಸುವರ್ಣ ವಿಧಾನಸೌಧದಲ್ಲಿ ಜರುಗಿದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿ, ಮಳೆಗಾಲ ಆರಂಭವಾಗುವ ಮುನ್ನವೇ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಕುಂಭಕರ್ಣ ನಿದ್ರೆ ಮಾಡುತ್ತೀರಿ. ಕುಂಭಕರ್ಣನನ್ನೂ ಎಬ್ಬಿಸಬಹುದು. ಆದರೆ, ನಿದ್ರೆಯಲ್ಲಿದ್ದಂತೆ ನಟಿಸುವ ನಿಮಗೇನು ಮಾಡಬೇಕು ಏಂದು ತಹಶೀಲ್ದಾರ್ ಬಸವರಾಜ ನಾಗರಾಳ ಅವರನ್ನು ತರಾಟೆಗೆ ತೆಗೆದುಕೊಂಡರು.
ಉತ್ತರಿಸಲು ತಡವರಿಸಿದ ತಹಶೀಲ್ದಾರ್, “ಇಲ್ಲಿ ಏನೂ ಸಮಸ್ಯೆ ಇಲ್ಲ. ಹೆಚ್ಚು ಮಳೆಯಾದರಷ್ಟೇ ಪ್ರವಾಹ ಬರಲಿದೆ,’ ಎಂದು ಉತ್ತರಿಸಿದರು. ಆಗ ಸಚಿವರು, ‘ಮಳೆಗಾಲದ ಸಮಸ್ಯೆ ಎದುರಿಸಲು ಕೈಗೊಂಡಿರುವ ಕ್ರಮಗಳೇನು?,’ ಎಂದು ಮತ್ತೆ ಎರಡು ಬಾರಿ ಕೇಳಿದರು. ಆಗಲೂ ಹಾರಿಕೆ ಉತ್ತರ ನೀಡಲು ಪ್ರಯತ್ನಿಸಿದಾಗ, “ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಯಾರೂ ಸ್ಪಂದಿಸುತ್ತಿಲ್ಲ, ಬರೀ ಕಾರಣ ಹೇಳುತ್ತಿದ್ದೀರಿ,”ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕರಿಗೆ ತೊಂದರೆಯಾದ ಬಳಿಕ ಪರಿಹಾರ ವಿತರಿಸಿ ಬರುವುದು ಅಧಿಕಾರಿಗಳ ಕೆಲಸವಲ್ಲ, ಗ್ರಾಪಂ ಮಟ್ಟದಲ್ಲಿ ಟಾಸ್ಕ್ಫೋರ್ಸ್‌ಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದಲ್ಲಿ ಸಂಭವನೀಯ ಹಾನಿ ತಡೆಗಟ್ಟಬಹುದು. ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ವಹಿಸಬೇಕು. ಈ ಕಾರ್ಯದಲ್ಲಿ ಅಗತ್ಯ ಬಿದ್ದರೆ ಪೊಲೀಸ್ ಸಿಬ್ಬಂದಿ ಸಹಾಯ ಪಡೆದುಕೊಳ್ಳುವಂತೆ.’ ಸೂಚಿಸಿದರು.
ತ್ವರಿತ ಪರಿಹಾರ ಒದಗಿಸಿ: ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ನಿರೀಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಮನೆ, ಶಾಲಾ ಹಾಗೂ ಅಂಗನವಾಡಿ ಕಟ್ಟಡ ಗುರುತಿಸಿ, ಬಳಕೆ ನಿಷೇಧಿ ಸಬೇಕು. ತುಂಬಿ ಹರಿಯುವ ಹಳ್ಳ, ನದಿಗಳ ಹತ್ತಿರ ಜನ-ಜಾನುವಾರು ಸಂಚಾರ ನಿರ್ಬಂಧಿಸಬೇಕು. ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಸಂಭವನೀಯ ಅನಾಹುತ ತಪ್ಪಿಸಲು ಶ್ರಮಿಸಬೇಕು. ಹಾನಿಗೀಡಾದವರಿಗೆ ತ್ವರಿತ ಪರಿಹಾರ ಒದಗಿಸಬೇಕು,” ಎಂದು ಸೂಚಿಸಿದರು.
ಪೋಡಿಮುಕ್ತ ಗ್ರಾಮ ಅಭಿಯಾನ ನಡೆಸಿ: ಜಿಲ್ಲೆಯಲ್ಲಿ ಪೋಡಿಮುಕ್ತ ಗ್ರಾಮ ಅಭಿಯಾನ ಹಮ್ಮಿಕೊಳ್ಳಬೇಕು. ತಹಸಿಲ್ದಾರ್, ಉಪವಿಭಾಗಾಧಿಕಾರಿಗಳ ಹಂತದಲ್ಲಿನ ಕೋರ್ಟ್ ಕೇಸಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಸಾಮಾಜಿಕ ಭದ್ರತೆ ಯೋಜನೆಯಡಿ ಅನರ್ಹರಿಗೆ ಪಿಂಚಣಿ ನೀಡಲಾಗುತ್ತಿರುವ ಕುರಿತು ದೂರುಗಳಿದ್ದು, ಪರಿಶೀಲಿಸಿ ವರದಿ ನೀಡಬೇಕು. ಸಾರ್ವಜನಿಕರ ಕಚೇರಿ ಅಲೇದಾಟ ತಪ್ಪಿಸಬಬೇಕು. ಕಂದಾಯ ಗ್ರಾಮದಡಿ ಗಕ್ಕುಪತ್ರ ವಿತರಣೆಗೆ ಕ್ರಮವಹಿಸಬೇಕು ಎಂದು ತಿಳಿಸಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಕಂದಾಯ ಇಲಾಖೆ ಆಯುಕ್ತ ಪಿ.ಸುನೀಲಕುಮಾರ, ಪ್ರೊಬೆಷನರಿ ಐಎಎಸ್ ಅಧಿಕಾರಿ ಅಭಿನವ ಜೈನ್, ಎಡಿಸಿ ವಿಜಯಕುಮಾರ ಹೊನಕೇರಿ ಇತರರಿದ್ದರು.


