
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮೀಣ ಪ್ರದೇಶಗಳ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳನ್ನು ವಿಶೇಷ ಚೇತನರ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ರಾಜ್ಯದ ಆಯ್ದ 200 ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಿಗೆ ‘ಅಲೆಕ್ಸಾ’ ಸಹಾಯಕ ಸಾಧನವನ್ನು ವಿತರಿಸುವ ‘ತರಂಗಿಣಿ’ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದರು.
ಸ್ಟೇಟ್ ಸ್ಟ್ರೀಟ್ ಕಂಪನಿಯ ಸಿ.ಎಸ್.ಆರ್ ಅನುದಾನದೊಂದಿಗೆ ಯುನೈಟೆಡ್ ವೇ ಬೆಂಗಳೂರು (ಯುಡಬ್ಲ್ಯೂಬಿಇ) ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ವಿಶೇಷವಾಗಿ ದೃಷ್ಟಿ ಸವಾಲಿರುವವರಿಗೆ ಕೇಳುವಿಕೆಯೇ ಕಲಿಕೆಯ ವಿಧಾನವಾಗಿದೆ. ಹೀಗಾಗಿ, ʼಅಲೆಕ್ಸಾʼ ಸಾಧನವು ಗ್ರಾಮೀಣ ಅರಿವು ಕೇಂದ್ರಗಳಲ್ಲಿ ಪ್ರಸ್ತುತ ಲಭ್ಯವಿರುವ ಸೌಲಭ್ಯಗಳ ಪಟ್ಟಿಗೆ ಒಂದು ಅತ್ಯುತ್ತಮ ಸೇರ್ಪಡೆಯಾಗಿದ್ದು, ಗ್ರಂಥಾಲಯ ಮೇಲ್ವಿಚಾರಕರು ಸಮುದಾಯದ ಎಲ್ಲಾ ವರ್ಗದ ಜನರೊಂದಿಗೆ ತೊಡಗಿಸಿಕೊಳ್ಳಲು ಸದರಿ ಸಾಧನವು ಸಹಾಯಕವಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
200 ಗ್ರಾಮ ಪಂಚಾಯತಿಗಳ ಆಯ್ಕೆ: ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಯ ಆಯ್ದ 200 ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಿಗೆ “ತರಂಗಿಣಿ” ಕಾರ್ಯಕ್ರಮದಡಿ ಅಲೆಕ್ಸಾ ಸಹಾಯಕ ಸಾಧನಗಳನ್ನು ವಿತರಿಸಲಾಗುತ್ತಿದೆ ಎಂದೂ ಸಚಿವರು ಹೇಳಿದರು.
ಏನಿದು ತರಂಗಿಣಿ ಕಾರ್ಯಕ್ರಮ? ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈಗಾಗಲೇ ಅರಿವು ಕೇಂದ್ರಗಳನ್ನು ವಿಶೇಷಚೇತನ ಸ್ನೇಹಿಯಾಗಿಸಲು ‘ದರ್ಶಿನಿ’ ಕಾರ್ಯಕ್ರಮವನ್ನು ಚಾಲನೆಗೊಳಿಸಿದ್ದು ಎಂಟು ಸಹಾಯಕ ಸಾಧನಗಳನ್ನು ಅರಿವು ಕೇಂದ್ರಗಳಲ್ಲಿ ವಿತರಿಸಲಾಗಿದೆ. ‘ತರಂಗಿಣಿ’ ಹೆಮ್ಮೆಯ ಗರಿಯಾಗಿ ಅರಿವು ಕೇಂದ್ರಗಳಿಗೆ ಸೇರ್ಪಡೆಯಾಗುತ್ತಿದೆ. ಬಳಕೆದಾರ ಸ್ನೇಹಿಯಾದ ಅಲೆಕ್ಸಾ ಸಾಧನವು ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು, ಹಿರಿಯ ನಾಗರಿಕರು ಸೇರಿದಂತೆ ವಿಶೇಷಚೇತನ ವ್ಯಕ್ತಿಗಳು ಬಳಸಲು ಅನುಕೂಲಕರವಾಗಿದ್ದು, ತಮ್ಮ ಧ್ವನಿಯನ್ನು ಬಳಸಿ ತಂತ್ರಜ್ಞಾನದೊಂದಿಗೆ ಸಂವಾದ ನಡೆಸಬಹುದು. ಇದು ಮಾಹಿತಿಗೆ ಸುಲಭ ಪ್ರವೇಶ ಒದಗಿಸುವುದರ ಮೂಲಕ ಕಲಿಕೆಯನ್ನು ಸಧೃಢಗೊಳಿಸುತ್ತದೆ ಹಾಗೂ ಸಮಯವನ್ನು ಉಳಿಸುತ್ತದೆ. ಅಲೆಕ್ಸಾದೊಂದಿಗೆ ವಿದ್ಯಾರ್ಥಿಗಳು ತಮ್ಮ ಕ್ಯಾಲೆಂಡರ್‌ನಲ್ಲಿ ಮುಂಬರುವ ಕಾರ್ಯಕ್ರಮಗಳನ್ನು ಟ್ರ್ಯಾಕ್ ಮಾಡಬಹುದು, ಅಧ್ಯಯನ ಸಂಪನ್ಮೂಲಗಳನ್ನು ಪಡೆಯಬಹುದಲ್ಲದೆ ಮಾರ್ಗದರ್ಶನ, ಸಲಹೆಗಾರರ ಭೇಟಿಗೆ ಸಮಯ ಪಡೆಯಬಹುದು ಎಂದು ಸಚಿವರು ಮಾಹಿತಿ ನೀಡಿದರು. ಕಂಪ್ಯೂಟರ್ ತೆರೆಯದೆ ಇಷ್ಟೆಲ್ಲ ಮಾಡುವ ಅವಕಾಶವನ್ನು ಅಲೆಕ್ಸಾ ಕಲ್ಪಿಸಲಿದೆ. ಶಿಕ್ಷಕರು ಮುಂಬರುವ ಪಾಠಗಳಿಗೆ ತಯಾರಿ ನಡೆಸಲು ಸಹ ಇದು ಅನುಕೂಲಕರವಾಗಿದೆ.