
ಬೆಳಗಾವಿ: ಪ್ರಸಿದ್ಧ ಕರದಂಟು ನಾಡಿನಲ್ಲಿ ನಡೆಯುತ್ತಿರುವ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಪುತ್ರ ರಾಹುಲ್ ಜಾರಕಿಹೊಳಿ ಭಾಗಿಯಾಗಿ ದೇವಿಯರ ದರ್ಶನ ಪಡೆದರು.
ಇಂದು ದ್ಯಾಮವ್ವನ ದೇವಸ್ಥಾನದಿಂದ ಚೌದರಿ ಕೂಟದವರೆಗೆ ರಥೋತ್ಸವ ನಡೆದಿದ್ದು, ಎಲ್ಲಿ ನೋಡಿದ್ರು ಜನವೋ ಜನ. ಎತ್ತ ನೋಡಿದ್ರು ಅತ್ತ ಜನಸಾಗರ. ತೇರು ಬೀದಿಯಲ್ಲಿ ಸಾಗರೋಪಾದಿಯಲ್ಲಿ ಸೇರಿದ ಭಕ್ತ ಸಮೂಹ. ಗೋಕಾಕನಲ್ಲಿ ಕಣ್ಣು ಹಾಯಿಸಿದಷ್ಟು ದೂರಕ್ಕೆ ಭಕ್ತ ಸಾಗರವೇ ಹರಿದು ಬಂದಿತು. ಈ ಜಾತ್ರೆಯಲ್ಲಿ ಅತಿ ಮುಖ್ಯವಾಗಿ ಜಾರಕಿಹೊಳಿ ಕುಟುಂಬದ ಹುಟ್ಟೂರಿನ ಜಾತ್ರೆಯಲ್ಲಿ ಇಡಿ ಜಾರಕಿಹೊಳಿ ಕುಟುಂಬ ರಥೋತ್ಸವದಲ್ಲಿ ಭಾಗಿಯಾಗಿರುವುದು ಎಲ್ಲರ ಗಮನ ಸೆಳೆಯಿತು.
ಹುಟ್ಟೂರಿನ ಜಾತ್ರೆಯಲ್ಲಿ ಭಾಗಿಯಾದ ಸಚಿವ: ತಮ್ಮ ಹುಟ್ಟೂರಿನ ಜಾತ್ರೆಯಲ್ಲಿ ಭಾಗಿಯಾಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಗುರುವಾರ ತಮ್ಮ ಸ್ನೇಹಿತರು ಸೇರಿದಂತೆ ಗ್ರಾಮದ ಮುಖಂಡರ ಜೊತೆ ಸೇರಿ ಈ ಜಾತ್ರಾ ಮಹೋತ್ಸವದಲ್ಲಿ ಭಾಗೀಯಾಗಿ ಪರಸ್ಪರ ಖುಷಿ ಹಂಚಿಕೊಂಡರು.
ಜಾತ್ರೆಗೆ ಲಕ್ಷಾಂತರ ಭಕ್ತರ ಆಗಮನ: ಸರ್ವಧರ್ಮೀಯರು ಶ್ರದ್ಧಾಭಕ್ತಿಯಿಂದ ಪೂಜಿಸುವ ಲಕ್ಷ್ಮೀ ದೇವಿ ಜಾತ್ರೆಯ ಸೊಬಗನ್ನು ಕಣ್ತುಂಬಿಕೊಳ್ಳಲು ಜಾತ್ರೆಯ 4ನೇ ದಿನವಾದ ಇಂದು ಲಕ್ಷಾಂತರ ಭಕ್ತರು ಆಗಮಿಸಿ ದೇವಿಯರ ದರ್ಶನ ಪಡೆದು ಪುನೀತರಾದರು.
ಭಂಡಾರದಲ್ಲಿ ಮಿಂದೆದ್ದ ಭಕ್ತರು: ಇಲ್ಲಿ ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣವಿದ್ದು, ರಥೋತ್ಸವದ 2ನೇ ದಿನವಾದ ಇಂದು ಭಕ್ತರು ಫುಲ್ ಕುಣಿದು ಕುಪ್ಪಳಿಸಿದರು. ಇನ್ನೂ ಲಕ್ಷ್ಮೀ ದೇವಿಯ ಮೂರ್ತಿಯನ್ನ ತೇರಿನಲ್ಲಿ ಕೂರಿಸಿ ದ್ಯಾಮವ್ವನ ದೇವಸ್ಥಾನದಿಂದ ಚೌದರಿ ಕೂಟದವರೆಗೆ ರಥೋತ್ಸವವನ್ನು ಗ್ರಾಮಸ್ಥರೆಲ್ಲರೂ ಎಳೆದು
ಈ ಸಂಭ್ರಮದ ಭಂಡಾರದಲ್ಲಿ ಲಕ್ಷಾಂತರ ಭಕ್ತರು ಮಿಂದೆದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಚಂದ್ರಶೇಖರ ಕೊಣ್ಣೂರು, ಶೀವು ಪಾಟೀಲ್ ಸೇರಿದಂತೆ ಅಪಾರ ಸಂಖ್ಯೆಯ ಮುಖಂಡರು,ದೇವಿ ಭಕ್ತರು ಪಾಲ್ಗೊಂಡಿದ್ದರು.