
ಹುಬ್ಬಳ್ಳಿ : ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾರಿಜಾತ ರೆಸಿಡೆನ್ಸಿಯಲ್ಲಿ ನಡೆಯುತ್ತಿದ್ದ ಬೃಹತ್ ವೇಶ್ಯಾವಾಟಿಕೆ ಜಾಲವನ್ನು ಸಿಸಿಬಿ ಪೊಲೀಸರು, ಮೈಸೂರಿನ ಒಡನಾಡಿ ಸಂಸ್ಥೆಯ ಸಹಯೋಗದೊಂದಿಗೆ ಭೇದಿಸಿದ್ದಾರೆ. ಈ ದಾಳಿಯಲ್ಲಿ 10ಕ್ಕೂ ಹೆಚ್ಚು ಮಹಿಳೆಯರನ್ನು ರಕ್ಷಿಸಲಾಗಿದ್ದು, 7 ವಿಟ ಪುರುಷರನ್ನು ಬಂಧಿಸಲಾಗಿದೆ.
ಲಾಡ್ಜ್ ಮಾಲೀಕ ಪರಾರಿಯಾಗಿದ್ದು, ಮ್ಯಾನೇಜರ್ ಮತ್ತು ಸಿಬ್ಬಂದಿಯನ್ನ ಬಂಧಿಸಿದ್ದಾರೆ.
ಕಾಲೇಜು ಪಕ್ಕದಲ್ಲೇ ದಂಧೆ!
ಈ ಕಾನೂನುಬಾಹಿರ ದಂಧೆಯು ಕಾಲೇಜುಗಳ ಸಮೀಪದಲ್ಲೇ ರಹಸ್ಯವಾಗಿ ನಡೆಯುತ್ತಿತ್ತು ಎಂಬುದು ತಿಳಿದು ಸ್ಥಳೀಯರೇ ಶಾಕ್ ಆಗಿದ್ದಾರೆ. ದಾಳಿಯ ಸಂದರ್ಭದಲ್ಲಿ, ಮಹಿಳೆಯರನ್ನು ಲಾಡ್ಜ್‌ನ ಬಾತ್‌ರೂಮ್‌ನಿಂದ ರಹಸ್ಯ ಕೋಣೆಗೆ ಕೊಂಡೊಯ್ಯಲಾಗಿತ್ತು. ಆದರೆ, ಸಿಸಿಬಿ ಪೊಲೀಸರು ರಹಸ್ಯ ಕೋಣೆಯ ಪ್ರವೇಶ ದ್ವಾರವನ್ನು ತೆರೆದು ಮಹಿಳೆಯರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಈ ಜಾಲವು ಸಂಘಟಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರ ಹಿಂದೆ ದೊಡ್ಡ ಮಾಫಿಯಾ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
‘ನೆಲಮಹಡಿ ಮತ್ತು ಮೊದಲನೇ ಮಹಡಿ ಗ್ರಾಹಕರಿಗೆ ಮೀಸಲಿಟ್ಟಿದ್ದು, ಎರಡನೇ ಮಹಡಿಯಲ್ಲಿನ ಕೊಠಡಿಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ತಮಿಳುನಾಡಿನ ಆರೋಗ್ಯ ಇಲಾಖೆಯಿಂದ ವಿತರಿಸುವ ಸಾವಿರಾರು ಕಾಂಡೋಮ್‌ಗಳು ಕೊಠಡಿಯಲ್ಲಿ ಕಂಡುಬಂದಿವೆ. ತಪ್ಪಿಸಿಕೊಳ್ಳಲು ಶೌಚಾಲಯದ ಒಳಗೆ ಸುರಂಗ ಮಾರ್ಗದ ಅಡಗುತಾಣ ಪತ್ತೆಯಾಗಿದೆ. ದಾಳಿ ವೇಳೆ, ಗ್ರಾಹಕರೊಬ್ಬರು ಅದರಲ್ಲಿ ಅಡಗಿಕೊಂಡಿದ್ದರು’ ಎಂದು ಒಡನಾಡಿ ಸಂಸ್ಥೆ ಸಂಸ್ಥಾಪಕ ಸ್ಟ್ಯಾನಿ ತಿಳಿಸಿದರು.
‘ಶಾಲೆ, ಆಸ್ಪತ್ರೆ ಸಮೀಪವೇ ವೇಶ್ಯಾವಾಟಿಕೆ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರಿಗೆ ತಿಳಿಸಲಾಗಿದೆ. ಮಕ್ಕಳ ಹಕ್ಕು ಆಯೋಗದ ಜಿಲ್ಲಾ ಅಧಿಕಾರಿಗಳಿಗೂ ದೂರು ನೀಡಿದ್ದೇವೆ’ ಎಂದು ಹೇಳಿದ್ದಾರೆ