ಬೆಳಗಾವಿಯಲ್ಲಿ ಸಂಚರಿಸುತ್ತಿವೆ ʻನಂಬರ್ ಪ್ಲೇಟ್ʼ ಇಲ್ಲದ ವಾಹನಗಳು.! ನಿಯಮ ಉಲ್ಲಂಘಿಸುವವರಿಗೆ ರಹದಾರಿ-ಸಂಚಾರಿ ಪೊಲೀಸ್, ಆರ್‌ಟಿಒ ಇಲಾಖೆ ʻಜಾಣ ಮೌನʼ

ಬೆಳಗಾವಿ: ಎರಡನೇಯ ರಾಜಧಾನಿ ಎಂಬ ಹೆಗ್ಗಳಿಕೆ ಪಾತ್ರವಾದ ಕುಂದಾನಗರಿಯಲ್ಲಿ ನಂಬರ್ ಪ್ಲೇಟ್ ಇಲ್ಲದ ವಾಹನಗಳು ರಾಜಾರೋಷವಾಗಿ ಸಂಚರಿಸುತ್ತಿವೆ.
ಹೌದು…ಬೆಳಗಾವಿ ನಗರದಲ್ಲಿ ನಂಬರ್ ಪ್ಲೇಟ್ ಇಲ್ಲದೇ ವಾಹನ ಚಾಲನೆ ಮಾಡುವವರ ಸಂಖ್ಯೆ ಹೆಚ್ಚಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರು ಮತ್ತು ಪ್ರಾದೇಶಿಕ ಸಾರಿಗೆ ಕಚೇರಿ ನಿಷ್ಕ್ರಿಯವಾದಂತಿದೆ ಎಂಬ ಆರೋಪಗಳು ಎಲ್ಲಡೆ ಕೇಳಿ ಬರುತ್ತಿವೆ.
ಪೊಲೀಸರಿಗೆ ಕಾಣುತ್ತಿಲ್ಲ ನಂಬರ್ ಪ್ಲೇಟ್ ಇಲ್ಲದ ಬೈಕಗಳು: ಬೈಕ್ ಸವಾರರಿಂದ ಆರಂಭಗೊಂಡ ದೊಡ್ಡ ವಾಹನವರೆಗೂ ಹಲವು ವಾಹನಗಳು ನಂಬರ್ ಪ್ಲೇಟ್ ಇಲ್ಲದೆಯೇ ನಗರಾದ್ಯಂತ ಓಡಾಟ ನಡೆಸುತ್ತಿವೆ. ಈ ಬಗ್ಗೆ ಸಾರಿಗೆ ಇಲಾಖೆ ಆಗಲಿ, ಸಂಚಾರಿ ಪೊಲೀಸರಾಗಲಿ ಪ್ರಶ್ನೆ ಮಾಡದೇ ಇರುವುದು ಇಂತಹ ನಿಯಮ ಉಲ್ಲಂಘನೆ ಮಾಡುವವರಿಗೆ ಅನುಕೂಲವಾಗಿದೆ. ಬೆಳಗಾವಿ ಸಂಚಾರ ಪೊಲೀಸರು ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವತ್ತ ಸಾಗಿದ್ದಾರೇ ಹೊರತು ನಂಬರ್ ಪ್ಲೇಟ್‌ಗಳಿಲ್ಲದೆ ನಿತ್ಯ ರಸ್ತೆ ಮೇಲೆ ಸಂಚರಿಸುವ ವಾಹನಗಳತ್ತ ಗಮನ ಹರಿಸದಿರುವುದು ಬೇಸರದ ಸಂಗತಿಯಾಗಿದೆ.
ನಂಬರ್ ಪ್ಲೇಟ್ ಇಲ್ಲದ ವಾಹನ ಸೀಜ್ ಮಾಡಲು ಒತ್ತಾಯ: ನಂಬರ್ ಪ್ಲೇಟ್ ಇಲ್ಲದ ವಾಹನಗಳಿಂದ ಯಾವುದೇ ಅಪಘಾತ ಸಂಭವಿಸಿದರೆ ಯಾರು ಹೊಣೆ ಎನ್ನುವ ಪ್ರಶ್ನೆಯೂ ನಗರದಲ್ಲಿ ಹುಟ್ಟಿಕೊಂಡಿದೆ. ನಗರ ಪ್ರದೇಶದ ಚಿಕ್ಕ ಚಿಕ್ಕ ಜಾಗದಲ್ಲಿಯೇ ಬೈಕಗಳು ಸಂಚಾರ ಮಾಡುತ್ತಿವೆ. ಬೈಕಗಳು ವೇಗವಾಗಿ ಸಂಚರಿಸುವಾಗ ಅಪಘಾತಗಳು ಸಂಭವಿಸಿದರೆ ಯಾರನ್ನು ಹೊಣೆ ಮಾಡಬೇಕು ಎನ್ನುವುದಕ್ಕೆ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಉತ್ತರ ನೀಡಬೇಕಿದೆ. ಬೈಕ್ ಸವಾರರು ಅಪಘಾತ ಮಾಡಿ ನಿಲ್ಲಿಸದೇ ಹೋಗಿರುವ ಸಾಕಷ್ಟು ಉದಾಹಣೆಗಳು ಬೆಳಗಾವಿ ನಗರದಲ್ಲಿವೆ. ಶೀಘ್ರವೇ ಸಂಚಾರಿ ಪೊಲೀಸರು ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ಸೀಜ್ ಮಾಡಲು ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಹಿರಿಯ ಪ್ರಜ್ಞಾವಂತರೂ ಒತ್ತಾಯಿಸಿದ್ದಾರೆ.
ನೋ ನಂಬರ್ ಪ್ಲೇಟ್ ಫೈನ್ ಎಂದರೇನು?: ನಂಬರ್ ಪ್ಲೇಟ್ ಇಲ್ಲದ ದಂಡ” ಎಂದರೆ ಭಾರತದಲ್ಲಿ ಸರಿಯಾದ ನೋಂದಣಿ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಲಾಯಿಸುವ ಚಾಲಕರಿಗೆ ವಿಧಿಸಲಾಗುವ ದಂಡ. 4-ಚಕ್ರ ವಾಹನಗಳು, 3-ಚಕ್ರ ವಾಹನಗಳು ಮತ್ತು 2-ಚಕ್ರ ವಾಹನಗಳು ಸೇರಿದಂತೆ ಎಲ್ಲಾ ರೀತಿಯ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸಲಾಗುತ್ತದೆ. 1988 ರ ಮೋಟಾರು ವಾಹನ ಕಾಯ್ದೆಯ ಪ್ರಕಾರ, ಸಾರ್ವಜನಿಕ ರಸ್ತೆಗಳಲ್ಲಿ ಚಲಿಸುವ ಪ್ರತಿಯೊಂದು ವಾಹನವು ಮಾನ್ಯವಾದ ನಂಬರ್ ಪ್ಲೇಟ್ ಅನ್ನು ಪ್ರದರ್ಶಿಸಬೇಕು. ಈ ಪ್ಲೇಟ್ ಸ್ಪಷ್ಟವಾಗಿ ಗೋಚರಿಸಬೇಕು ಮತ್ತು ಗಾತ್ರ, ಫಾಂಟ್ ಮತ್ತು ನಿಯೋಜನೆಗೆ ಸಂಬಂಧಿಸಿದ ನಿರ್ದಿಷ್ಟ ಮಾನದಂಡಗಳನ್ನು ಪೂರೈಸಬೇಕೆಂಬ ನಿಯಮವಿದೆ.
ಕಳ್ಳರ ಬೈಕ್‌ಗೂ ನಂಬರ್ ಇಲ್ಲ: ಸದ್ಯ ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ನಾಗರಿಕರಲ್ಲಿ ಭಯ,ಭೀತಿ ಉಂಟು ಮಾಡಿದೆ. ನಗರದಲ್ಲಿ ದಿನ ಕಳೆದಂತೆ ಅಪರಾಧ ಸಂಖ್ಯೆಗಳು ಹೆಚ್ಚುತ್ತಾ ಸಾಗಿದ್ದು, ನಗರದಲ್ಲಿ ನಡೆಯುತ್ತಿರುವ ಕಳ್ಳತನ, ಸುಲಿಗೆ, ದರೋಡೆ ಮತ್ತು ದರೋಡೆ ಸೇರಿದಂತೆ ಅಪರಾಧ ಕೃತ್ಯಗಳಿಗೆ ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ಬಳಿಸಲಾಗುತ್ತಿದೆ ಎನ್ನುವುದು ಅಚ್ಚರಿಯ ಸಂಗತಿಯಾಗಿದೆ.
ಪೊಲೀಸ್-ಆರ್‌ಟಿಒ ಅಧಿಕಾರಿಗಳ ವಿರುದ್ಧ ಆಕ್ರೋಶ: ನಗರದ ಪ್ರಮುಖ ವೃತ್ತಗಳ ಬಳಿ ಹಾಗೂ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಬಹುತೇಕ ಸಮಯದಲ್ಲಿ ಪೊಲೀಸರು, ಸಂಚಾರ ಪೊಲೀಸರು ಇರುವುದಿಲ್ಲ. ಸಂಚಾರ ನಿಯಮ ಉಲ್ಲಂಘನೆಯ ಕ್ಯಾಮೆರಾ ದೃಶ್ಯಾವಳಿಯನ್ನು ಆಧರಿಸಿ ದಂಡದ ರಶೀದಿಯನ್ನು ವಾಹನ ಮಾಲೀಕರ ವಿಳಾಸಕ್ಕೆ ಕಳಿಸುವ ವ್ಯವಸ್ಥೆಯನ್ನು ಕೆಲವು ಸಿಗ್ನಲ್‌ಗಳಲ್ಲಿ ಪಾಲಿಸಲಾಗುತ್ತಿದೆ. ಈ ಕಾರಣಕ್ಕೆ ಸಿಗ್ನಲ್‌ಗಳಲ್ಲಿ ಪೊಲೀಸರು ಇರುವುದಿಲ್ಲ. ಆದರೆ, ಈ ಬಗ್ಗೆ ವಾಹನಗಳ ಸವಾರರು ಕೇರ್ ಮಾಡುವುದಿಲ್ಲ. ಪೊಲೀಸರು ಕಾಣದಿದ್ದರೆ ಜನರು ರಾಜಾರೋಷವಾಗಿಯೇ ಸಾಗುತ್ತಿದ್ದಾರೆ. ಸದ್ಯ ಬೆಳಗಾವಿ ನಗರದಲ್ಲಿ ನಂಬರ್ ಪ್ಲೆಟ್ ಇಲ್ಲದ ವಾಹನಗಳಿಗೆ ಬ್ರೇಕ್ ಹಾಕುವ ಕೆಲಸಗಳು ಸಂಚಾರಿ ಪೊಲೀಸರು ಹಾಗೂ ಆರ್‌ಟಿಒದಿಂದ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ನಂಬರ್ ಪ್ಲೇಟ್‌ಗಳನ್ನೇ ಕಳಚಿಟ್ಟು ಬೈಕ್ ಸಂಚಾರ: ಲಭ್ಯ ಮಾಹಿತಿ ಪ್ರಕಾರ ಬೈಕ್ ಸೇರಿ ಇತರ ವಾಹನಗಳ ನಂಬರ್ ಪ್ಲೇಟ್ ಇಲ್ಲದೆ ಸಂಚಾರ ಮಾಡುವ ಹಿಂದಿನ ಗುಟ್ಟು ಬ್ಯಾಂಕ್‌ಗಳು. ವಾಹನ ಖರೀದಿಗೆ ಸಾಲ ನೀಡುವ ಬ್ಯಾಂಕ್‌ಗಳು ನಂತರ ಸರಿಯಾದ ಸಮಯಕ್ಕೆ ಇಎಂಐ ಕಟ್ಟದಿದ್ದರೆ, ಹಣ ವಸೂಲಿಗೆ ಹಿಂದೆ ಬೀಳುತ್ತವೆ. ನಂಬರ್ ಪ್ಲೇಟ್ ಇದ್ದರೆ ಸಾಲ ವಸೂಲಿ ತಂಡಕ್ಕೆ ಸಿಕ್ಕಿ ಬೀಳುವ ಆತಂಕದಲ್ಲಿ ವಾಹನ ಸವಾರರು ನಂಬರ್ ಪ್ಲೇಟ್‌ಗಳನ್ನೇ ಕಳಚಿಟ್ಟು ವರ್ಷಗಟ್ಟಲೆ ವಾಹನಗಳನ್ನು ಓಡಿಸುತ್ತಿದ್ದಾರೆ. ಇದು ಮತ್ತೊಂದು ರೀತಿಯ ಅಪಾಯ ತಂದೊಡ್ಡಿದೆ.
ಒಟ್ಟಾರೆ ನಂಬರ್ ಪ್ಲೇಟ್ ಇಲ್ಲದ ವಾಹನಗಳು ಎಂದಿಗೂ ಸಮಾಜಕ್ಕೆ ಕಂಟಕವಾಗಿಯೇ ಕಾಡುತ್ತವೆ. ಈ ಹಿನ್ನೆಲೆಯಲ್ಲಿ ಇವುಗಳನ್ನು ನಿಯಂತ್ರಿಸುವ ಕೆಲಸಕ್ಕೆ ಬೆಳಗಾವಿ ಸಂಚಾರಿ ಪೊಲೀಸರು ಹಾಗೂ ಸಾರಿಗೆ ಇಲಾಖೆ ಜಂಟಿ ಕಾರ್ಯಾಚರಣೆ ಮಾಡಬೇಕಿದೆ. ನಿತ್ಯ ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳುವ ಜತೆಗೆ ನಗರ ಪ್ರದೇಶದ ಇತರೆ ಭಾಗಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸುವ ಮೂಲಕ ನಂಬರ್ ಪ್ಲೇಟ್ ಇಲ್ಲದ ವಾಹನ ಸವಾರರಿಗೆ ಬಿಸಿ ಮುಟ್ಟಿಸಬೇಕಿದೆ.
ಬೆಳಗಾವಿ ನಗರದಲ್ಲಿ ನಂಬರ್ ಪೇಟ್ ಇಲ್ಲದ ವಾಹನಗಳು ಸಂಚರಿಸುತ್ತಿರುವ ಬಗ್ಗೆ ಈಗಾಗಲೇ ಸಾಕಷ್ಟು ದೂರುಗಳು ಬಂದಿವೆ. ನಾವು ಕೂಡಾ ಸಂಚಾರಿ ಪೊಲೀಸ್ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ತಿಳಿಸಿಲಾಗಿದೆ. ಅಲ್ಲದೇ ನಂಬರ್ ಪ್ಲೇಟ್‌ಗಳಿಲ್ಲದ ವಾಹನಗಳ ಸಮಸ್ಯೆಯನ್ನು ಪರಿಹರಿಸಲು ವಾರದಲ್ಲಿ ಒಂದು ದಿನ ನಮ್ಮ ಟ್ರಾಫೀಕ್ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.
-ಭೂಷಣ್ ಬೊರಸೆ , ಬೆಳಗಾವಿ ನಗರ ಪೊಲೀಸ್ ಆಯುಕ್ತ
ನಂಬರ್ ಪೇಟ್ ಇಲ್ಲದ ವಾಹನಗಳು ನಗರದಲ್ಲಿ ಸಂಚರಿಸುತ್ತಿರುವ ಬಗ್ಗೆ ನಮಗೂ ಕೂಡಾ ಸಾಕಷ್ಟು ದೂರು ಬಂದಿವೆ. ಶೀಘ್ರವೇ ನಂಬರ್ ಇಲ್ಲದ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು
-ಜೆ. ಆರ್. ನಿಕಂ, ಟ್ರಾಫಿಕ್ ಎಸಿಪಿ ಬೆಳಗಾವಿ
ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ಹಿಡಿದರೆ ರಾಜಕೀಯ ವ್ಯಕ್ತಿಗಳಿಂದ ಫೋನ್ ಮಾಡಿಸಿ ಬಿಡಿಸಿಕೊಂಡು ಹೋಗುತ್ತಿದ್ದಾರೆ. ಒತ್ತಡಕ್ಕೆ ಮಣಿದು ನಾವೂ ಸುಮ್ಮನೆ ಇರುವಂತೆ ಆಗಿದೆ.
-ಹೆಸರು ಹೇಳಲಿಚ್ಛಿಸದ ಪೊಲೀಸ್ ಸಿಬ್ಬಂದಿ.
ನಮ್ಮ ನಗರದ ನಿವಾಸಿಗಳ ಸುರಕ್ಷತೆ ಮತ್ತು ಭದ್ರತೆ ಅಧಿಕಾರಿಗಳಿಗೆ ಅತ್ಯಂತ ಕಾಳಜಿಯ ವಿಷಯವಾಗಿರಬೇಕು. ನಂಬರ್ ಪ್ಲೇಟ್‌ಗಳಿಲ್ಲದ ವಾಹನಗಳ ಸಮಸ್ಯೆಯನ್ನು ಪರಿಹರಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಆರ್‌ಟಿಒ ಮತ್ತು ಸಂವಾರಿ ಪೊಲೀಸರು ಕಾನೂನನ್ನು ಎತ್ತಿಹಿಡಿಯುವ ತಮ್ಮ ಬದ್ಧತೆಯನ್ನು ಪ್ರದರ್ಶಿಸಲಿ.
-ಬಸವರಾಜ ಕಟ್ಟಿಮನಿ, ಬೆಳಗಾವಿ ನಿವಾಸಿ