
ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಾಳಘಟ್ಟ ಗ್ರಾಮದ ಬಳಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದು, ಒಂಭತ್ತು ಮಂದಿ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ತಾಲ್ಲೂಕಿನ ಬಸವನದುರ್ಗ ಗ್ರಾಮದ ರವಿ ಕುಮಾರ್, ಖಾಸಿಂಸಾಬ್, ಮಂಜುನಾಥ್, ವಜ್ರವೇಣಿ, ಸುಬ್ರಮಣ್ಯ, ಸುಬ್ರಮಣಿ, ಬಾಲರಾಜ್, ಆರ್ಮುಗಂ, ಶ್ರೀನಿವಾಸ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ಸದ್ಯ ಎಲ್ಲರೂ ತಲೆ ಮರೆಸಿಕೊಂಡಿದ್ದಾರೆ.
ಅವರಿಗೆ ಹುಡುಕಾಟ ನಡೆಯುತ್ತಿದೆ. ಕಲ್ಲು ತುಂಬಿದ್ದ ಒಂದು ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವಪ್ರಸಿದ್ಧ ಹಂಪಿಗೆ ಸಮೀಪದಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮಂಗಳವಾರ ಮಾಹಿತಿ ಲಭಿಸಿತ್ತು. ತಹಶೀಲ್ದಾರ್ ಶ್ರುತಿ ಎಂ.ಎಂ. ಅವರು ಸ್ಥಳಕ್ಕೆ ಭೇಟಿ ನೀಡಿ, ಅಕ್ರಮದಲ್ಲಿ ತೊಡಗಿದ್ದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರು.