ಗೋವಾದಲ್ಲಿ (Goa) ಕನ್ನಡಿಗರ (Kannadiga) ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ.
GOA : ಗೋವಾದಲ್ಲಿ ಕನ್ನಡಿಗರಿಗಿಲ್ಲ ರಕ್ಷಣೆ - ಹಾಡಹಗಲೇ ಲಾರಿ ಚಾಲಕನ ಮೇಲೆ ಹಲ್ಲೆ.!

ಗೋವಾದಲ್ಲಿ (Goa) ಕನ್ನಡಿಗರ (Kannadiga) ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ. ಜೀವನ ಕಟ್ಟಿಕೊಳ್ಳಲು ಕರ್ನಾಟಕ (Karnataka) ಬಿಟ್ಟು ಗೋವಾಕ್ಕೆ ಹೋಗಿದ್ದ ಕನ್ನಡಿಗರ ಮೇಲೆ ಗ್ಯಾಂಗ್ ವೊಂದು ಹಲ್ಲೆ (Assault) ನಡೆಸಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ವಿಜಯಪುರ ಜಿಲ್ಲೆಯ ಕಲಕೇರಿ ಗ್ರಾಮದ ನಿವಾಸಿ ಅನಿಲ್ ರಾಠೋಡ್ ಎಂದು ಗುರುತಿಸಲಾಗಿದೆ. ಕನ್ನಡಿಗ ಅನಿಲ್ ಬದುಕು ಕಟ್ಟಿಕೊಳ್ಳಲು ಗೋವಾಗೆ ತೆರಳಿ ಅಲ್ಲಿ ಲಾರಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದರು.
ಹೀಗೆ ಕಳೆದ ಎರಡು ದಿನದ ಹಿಂದೆ ಮಹಾರಾಷ್ಟ್ರದಿಂದ ಗೋವಾಕ್ಕೆ ಕಲ್ಲು ಸಾಗಿಸುತ್ತಿದ್ದ ವೇಳೆ ಗೋವಾದ ಪ್ರೆಡ್ನೆ ಬಳಿಯ ರಸ್ತೆಯಲ್ಲಿ ಕಾರು, ಜೀಪ್ನಲ್ಲಿ ಬಂದ ಆರರಿಂದ ಏಳು ಜನ ಕಿಡಿಗೇಡಿಗಳು ಲಾರಿಯನ್ನು ಅಡ್ಡ ಹಾಕಿದ್ದಾರೆ. ಅಲ್ಲದೇ ಅಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಓಮ್ನಿ ಕಾರಿನಲ್ಲಿ ಬಂದು ಏಕಾಏಕಿ ಅಡ್ಡ ಬಂದು ಲಾರಿಯನ್ನು ನಿಲ್ಲಿಸಿದ್ದಾರೆ. ಬಳಿಕ ಚಾಲಕನ ಬಳಿ ಬಂದು ಲಾರಿಯ ಡೋರ್ ಓಪನ್ ಮಾಡಿ ಅವ್ಯಾಚ್ಯ ಪದಗಳಿಂದ ನಿಂದಿಸಿದ್ದಾರೆ. ಜೊತೆಗೆ ಹಲ್ಲೆ ಕೂಡ ನಡೆಸಿದ್ದಾರೆ. ದುಷ್ಕರ್ಮಿಗಳ ಅಟ್ಟಹಾಸದ ವಿಡಿಯೋವನ್ನು ಅನಿಲ್ ರೆಕಾರ್ಡ್ ಮಾಡಿದ್ದಾರೆ.
ಬಳಿಕ ಅವರು ಅಲ್ಲಿಂದ ಹೋಗುತ್ತಿದ್ದಂತೆ ನೇರವಾಗಿ ಪ್ರೆಡ್ನೆ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಜೊತೆಗೆ ಹಲ್ಲೆ ನಡೆಸುವ ವಿಡಿಯೋವನ್ನು ನೀಡಿದ್ದಾರೆ. ಆದರೂ ಕೂಡ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಎಂದು ಅನಿಲ್ ರಾಥೋಡ್ ಗಂಭೀರವಾಗಿ ಆರೋಪಿಸಿದ್ದಾರೆ.
ಸದ್ಯ ಗೋವಾದಲ್ಲಿ ಕನ್ನಡಿಗರ ಮೇಲೆ ಆಗುತ್ತಿರುವ ಹಲ್ಲೆಗಳ ಬಗ್ಗೆ ಚಾಲಕ ಅನಿಲ್ ಸಿಎಂ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದು, ಗೋವಾದಲ್ಲಿ ದಿನನಿತ್ಯ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ, ಹೀಗಾಗಿ ಈ ಕೂಡಲೇ ಗೋವಾ ಸಿಎಂ ಜೊತೆ ಮಾತನಾಡಿ ಕನ್ನಡಿಗರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ.
ಇನ್ನು ಧಾರವಾಡದಲ್ಲಿ ಪಿಎಸ್‌ಐ ಮೇಲೆ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಧಾರವಾಡದ ವಿದ್ಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಗಿರಿನಗರದ ಬಡಾವಣೆಯೊಂದರಲ್ಲಿ ಇಬ್ಬರು ಕಳ್ಳರು ಮನೆ ಕಳ್ಳತನ ಮಾಡಿ ಪರಾರಿಯಾಗಲು ಮುಂದಾಗಿದ್ದರು. ಈ ವೇಳೆ ರೌಂಡ್ಸ್ ನಲ್ಲಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಖದೀಮರ ನಡವಳಿಕೆ ಗಮನಿಸಿದ ಪಿಎಸ್‌ಐ ಮಲ್ಲಿಕಾರ್ಜುನ್ ಅನುಮಾನಗೊಂಡು ಇಬ್ಬರನ್ನೂ ಕರೆದಿದ್ದಾರೆ. ಈ ವೇಳೆ ಆರೋಪಿಗಳ ಕೈಯಲ್ಲಿ ಏನೋ ಅಡಗಿಸಿ ಇಟ್ಟುಕೊಂಡಿರುವುದನ್ನು ಗಮನಿಸಿದ ಪೊಲೀಸರು ಕಳ್ಳರು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿರುವುದು ಗೊತ್ತಾಗುತ್ತೆ ಕೂಡಲೇ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ಆದರೆ ಈ ವೇಳೆ ಆರೋಪಿಗಳಾದ ಮುಜಾಮಿಲ್ ಮತ್ತು ವಿಜಯ್ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕು ಎಂದು ಹೇಳಿ ಪಿಎಸ್‌ಐ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಮುಂದಾಗಿದ್ದಾರೆ. ಕೂಡಲೇ ಎಚ್ಚೆತ್ತ ಪಿಎಸ್‌ಐ ಮಲ್ಲಿಕಾರ್ಜುನ್ ಇಬ್ಬರ ಮೇಲೆ ಗುಂಡು ಹಾರಿಸಿದ್ದಾರೆ.
ಆರೋಪಿಗಳು ಮಲ್ಲಿಕಾರ್ಜುನ್ ಮೇಲೆ ದಾಳಿ ನಡೆಸಿ ಪರಾರಿಯಾಗಲು ಮುಂದಾಗಿದ್ದಾರೆ, ಈ ವೇಳೆ ನೋವಿನ ನಡುವೆಯೂ ಪಿಎಸ್‌ಐ ತನ್ನ ಗನ್ ನಿಂದ ಆರೋಪಿಗಳಾದ ಮುಜಾಮಿಲ್ ಮತ್ತು ವಿಜಯ್ ಕಾಲಿಗೆ ಗುಂಡು ಹಾರಿಸಿದ್ದಾರೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿದ್ಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಾದ ಮುಜಾಮಿಲ್ ಮತ್ತು ವಿಜಯ್ ನನ್ನು ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಬಂಧಿತರಿಂದ ಬೆಲೆಬಾಳುವ ವಸ್ತು ಸೇರಿದಂತೆ ಒಂದು ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.