BREAKING: ನೇಹಾ ಹಿರೇಮಠ ಹ*ತ್ಯೆ ಪ್ರಕರಣ, ಆಗಸ್ಟ್ 28ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

ಹುಬ್ಬಳ್ಳಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ (Neha hiremath) ಸಂಬಂಧಪಟ್ಟಂತೆ ಹುಬ್ಬಳ್ಳಿಯ (Hubli) ಕಾಲೇಜು ಒಂದರಲ್ಲಿ ನೇಹಾಳನ್ನು ಚಾಕುವಿನಿಂದ 10ಕ್ಕೂ ಹೆಚ್ಚು ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿ ಫಯಾಜ್ (Fayaz) ಇಂದು (ಆ.21) 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದಾನೆ.
ಈ ಕೇಸ್ ನ ವಿಚಾರಣೆಯನ್ನು ನ್ಯಾಯಲಾಯ ಆಗಸ್ಟ್ 28ಕ್ಕೆ ಮುಂದೂಡಿಕೆ ಮಾಡಿದೆ.
ನೇಹಾ ಹಿರೇಮಠ ಹತ್ಯೆ ಪ್ರಕರಣ :
ಈ ಹಿಂದೆ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊ*ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಹಂತಕನ ಜಾಮೀನು ಅರ್ಜಿಯನ್ನು ನ್ಯಾಯಾಲಯ (Court) ವಜಾಗೊಳಿಸಿ ಮಹತ್ವದ ಆದೇಶ ಹೊರಡಿಸಿತ್ತು.ಈ ಕೇಸ್ ನ ಆರೋಪಿ ಫಯಾಜ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಆಗಸ್ಟ್ 4ರಂದುಹುಬ್ಬಳ್ಳಿ 1ನೇ ಹೆಚ್ಚುವರಿ ಜಿಲ್ಲಾ ಸತ್ರ ಕೋರ್ಟ್ ನಲ್ಲಿ ನಡೆದಿತ್ತು.ಈ ವೇಳೆ ಮುಂದಿನ ವಿಚಾರಣೆಯನ್ನು ಆಗಸ್ಟ್ 10 ಕ್ಕೆ ಮುಂದೂಡಿಕೆ ಮಾಡಲಾಗಿತ್ತು ಮತ್ತು ಆಗಸ್ಟ್ 6 ರಂದು ಆರೋಪಿ ಕೋರ್ಟ್ ಗೆ ಹಾಜರಾಗುವಂತೆಯೂ ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.
ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಕಳೆದ ಒಂದು ವರ್ಷ 4 ತಿಂಗಳಿನಿಂದ ಆರೋಪಿ ಫಯಾಜ್ ಜೈಲಿನಲ್ಲಿದ್ದಾನೆ. ಹೈಕೋರ್ಟ್ ಗೆ ಆರೋಪಿ ಪರ ವಕೀಲರು ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಬೇಲ್ ನೀಡಿದಂತೆಯೇ ತಮಗೂ ಜಾಮೀನು ಮಂಜೂರು ಮಾಡಬೇಕು ಎಂದು ಆರೋಪಿ ಈ ಹಿಂದೆ ಕೋರ್ಟ್ ಗೆ ಮನವಿ ಮಾಡಿದ್ದ.
ಪ್ರಕರಣದ ಹಿನ್ನೆಲೆ:
2024 ರ ಏಪ್ರಿಲ್ 18 ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ 24 ವರ್ಷದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆ ನಡೆದಿತ್ತು. 10 ಕ್ಕೂ ಹೆಚ್ಚು ಬಾರಿ ಬರ್ಬರವಾಗಿ ಇರಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಆರೋಪಿ ಬೆಳಗಾವಿ ಜಿಲ್ಲೆಯ ಫಯಾಜ್ ಕೊಂಡುನಾಯ್ಕ (24) ಎಂಬಾತನನ್ನು ಬಂಧಿಸಲಾಗಿತ್ತು. ಪ್ರಕರಣವು ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆ ಖಂಡಿಸಿ ಸಾವಿರಾರು ವಿದ್ಯಾರ್ಥಿಗಳು ಮತ್ತು ನಾಗರಿಕರು ಪ್ರತಿಭಟನೆ ನಡೆಸಿದ್ದರು.
ಇದಾದ ನಂತರ ಜಾಮೀನಿಗೆ ಅರ್ಜಿ ಹಾಕಿದ್ದ ಈತ, ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಹೇಗೆ ಜಾಮೀನು ನೀಡಲಾಗಿದೆಯೋ ಹಾಗೇ ನನಗೂ ನೀಡಿ ಎಂದು ಬೇಡಿಕೆ ಇಟ್ಟಿದ್ದ. ಫಯಾಜ್ ಮನವಿ ಬಗ್ಗೆ ಕೊಲೆಯಾದ ನೇಹಾ ತಂದೆ ನಿರಂಜನ್ ಅಸಮಾಧಾನ ಹೊರಹಾಕಿದ್ದರು. ದರ್ಶನ್ ತಮ್ಮ ನಟನೆ ಮತ್ತು ಒಳ್ಳೆಯ ಕಾರ್ಯದಿಂದ ಜನರಿಗೆ ಮಾದರಿ ಆಗಬೇಕಿತ್ತು. ಆದರೆ ಹತ್ಯೆ ಪ್ರಕರಣದಲ್ಲಿ ಇತರೇ ಆರೋಪಿಗಳಿಗೆ ಮಾದರಿಯಾಗಿದ್ದು ನಿಜಕ್ಕೂ ನೋವು ತಂದಿದೆ. ನನ್ನ ಮಗಳಿಗೆ ಆದ ಅನ್ಯಾಯ ಯಾರಿಗೂ ಆಗಬಾರದು. ನನ್ನ ಮಗಳಿಗೆ ನ್ಯಾಯ ಸಿಗಬೇಕು ಎಂದು ಕಣ್ಣೀರಿಟ್ಟಿದ್ದರು.
ನೇಹಾ ಹಿರೇಮಠ ಕೊಲೆ ಪ್ರಕರಣ ಬಳಿಕ ಆರೋಪಿ ಫಯಾಜ್ ನನ್ನು ಪಿಸಿ ಜಾಬಿನ್ ಕಾಲೇಜ್‌ನಿಂದ ಅಮಾನತು ಮಾಡಲಾಗಿದೆ. ಅಲ್ಲದೇ ಯಾವ ಪರೀಕ್ಷೆಗೂ ಆತನಿಗೆ ಅವಕಾಶ ನೀಡದಿರಲು ನಿರ್ಧರಿಸಿದೆ.ಪಿಸಿ ಜಾಬಿನ್ ಕಾಲೇಜ್‌ನಲ್ಲಿ ಫಯಾಜ್ 2022 ರಲ್ಲಿ BCA ವ್ಯಾಸಂಗ ಮಾಡುತಿದ್ದ. 5 ಮತ್ತು 6ನೇ ಸೆಮಿಸ್ಟರ್‌ನಲ್ಲಿ ಕೆಲ ವಿಷಯಗಳಲ್ಲಿ ಫೇಲ್ ಕೂಡ ಆಗಿದ್ದ. ಇನ್ಮುಂದೆ ಫಯಾಜ್ ಕಾಲೇಜ್‌ಗೆ ಬರಲು ಬಿಡಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿತ್ತು.