ಬೆಳಗಾವಿ: ಸಮಾಜಕ್ಕೆ ಮಾರಕವಾಗಿರುವ ಬಾಲ್ಯವಿವಾಹಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮ ವಹಿಸಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್
Belagavi: ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯಿತಿಗೆ 25 ಸಾವಿರ ರೂ. ಬಹುಮಾನ: ಹೆಬ್ಬಾಳಕರ್

ಬೆಳಗಾವಿ: ಸಮಾಜಕ್ಕೆ ಮಾರಕವಾಗಿರುವ ಬಾಲ್ಯವಿವಾಹಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮ ವಹಿಸಿದೆ. ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯಿತಿಗೆ 25 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿಯಲ್ಲಿ ನಡೆದ ಪೋಷಣ್ ಮಾಸಾಚರಣೆ ಹಾಗೂ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಅಂಗವಿಕಲ ಫಲಾನುಭವಿಗಳಿಗೆ ಸಾಧನ, ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಲ್ಯ ವಿವಾಹ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅನ್ಯಾಯವಾದರೆ ನೇರವಾಗಿ ನನ್ನನ್ನು ಸಂಪರ್ಕಿಸಿ. ನಾನು ನೆರವಿಗೆ ನಿಲ್ಲುತ್ತೇನೆ. ಮಹಿಳೆಯರ ಮೇಲಿನ ದೌರ್ಜನ್ಯ ಸಹಿಸುವುದಿಲ್ಲ ಎಂದರು.
ಬಾಲ್ಯ ವಿವಾಹ ಪದ್ಧತಿ ವಿರುದ್ಧ ಎಲ್ಲರೂ ಹೋರಾಡಬೇಕು. ತಮ್ಮ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹ ನಡೆದಿರುವುದು ಕಂಡುಬಂದರೆ, ಅಂಗನವಾಡಿ ಕಾರ್ಯಕರ್ತೆಯರು ನಿರ್ಭೀತಿಯಿಂದ ಸಂಬಂಧಿತರಿಗೆ ಮಾಹಿತಿ ಕೊಡಬೇಕು. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಬೇರು ಸಮೇತವಾಗಿ ಕಿತ್ತು ಹಾಕಲು ಎಲ್ಲರೂ ಸನ್ನದ್ಧರಾಗಬೇಕು ಎಂದರು.
ಪ್ರತಿ ಗರ್ಭಿಣಿಯರಿಗೆ ಆರೋಗ್ಯವಂತ ಮಗು ಜನಿಸಲಿ ಎಂಬುದು ನಮ್ಮ ಆಶಯ. ಈ ಹಿನ್ನೆಲೆಯಲ್ಲಿ ಇಡೀ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಒಂದು ತಿಂಗಳು ನಡೆಸಲಿದ್ದೇವೆ ಎಂದು ಸಚಿವರು ಹೇಳಿದರು.
ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕರಿಗೆ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ACDPO) ಹುದ್ದೆಗೆ ಬಡ್ತಿ ಕೊಡಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದೇನೆ. ಬೇರೆ ಬೇರೆ ಹಂತಗಳಲ್ಲಿ ಕೆಲಸ ಮಾಡುತ್ತಿರುವ 400 ಜನರಿಗೆ ಅಂಗನವಾಡಿ ಮೇಲ್ವಿಚಾರಕರ ಹುದ್ದೆಗೆ ಒಂದು ಬಾರಿ ಸೇವಾಬಡ್ತಿ ನೀಡುವ ಕುರಿತು ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೆಬ್ಬಾಳಕರ ಹೇಳಿದರು.