ಬೆಳಗಾವಿಯಲ್ಲಿ ರೌಡಿಗಳ ಅಟ್ಟಹಾಸ – ಮಾರಕಾಸ್ತ್ರ ಹಿಡಿದು ದಾಂಧಲೆ, ಅಂಗಡಿ ವಾಹನಗಳಿಗೆ ಬೆಂಕಿ!

ಬೆಳಗಾವಿ : ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ರೌಡಿಗಳು ಮನೆಯೊಂದಕ್ಕೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದಾಂಧಲೆ ಮಾಡಿದ್ದಲ್ಲದೇ, ಅಂಗಡಿ ಮತ್ತು ವಾಹನಗಳಿಗೆ ಬೆಂಕಿಯಿಟ್ಟಿರುವ ಘಟನೆ ಅಥಣಿಯ ಸಂಬರಗಿಯಲಿ ನಡೆದಿದೆ.
ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸೋಮವಾರ ರಾತ್ರಿ ಬಲವಂತ ಟೋಣೆ ಎಂಬುವವರ ಮನೆಗೆ ಹಲವು ದುಷ್ಕರ್ಮಿಗಳು ನುಗ್ಗಿದ್ದರು. ಮಹಿಳೆ ಮಕ್ಕಳು ಎಂಬುದನ್ನೂ ಸಹ ಲೆಕ್ಕಿಸದೆ ಚಾಕು , ಮಚ್ಚು ಮುಂತಾದ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿದ್ದು, ಈ ಘಟನೆ ಸಾರ್ವಜನಿಕರನ್ನು ಆತಂಕಕ್ಕೊಳಪಡಿಸಿದೆ. ಈ ರೌಡಿಗಳ ದಾಳಿಯಲ್ಲಿ ಸಂಜಯ ಟೋಣೆ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮಿರಜದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಗಳನ್ನು ದಾದಾಸಾಹೇಬ ಟೋಣೆ, ರವಿ ಮಿಸಾಳ,ರಮೇಶ ಬೋಸಲೆ, ವಿಜಯ ನಾಟೆಕರ ,ಪಪ್ಪು ಬನ್ನೆ ಎಂದು ಗುರುತಿಸಲಾಗಿದೆ. ಹಳೆಯ ದ್ವೇಷದ ಕಾರಣಕ್ಕೆ ಈ ದಾಳಿ ನಡೆದಿದೆಯೆನ್ನಲಾಗಿದ್ದು, ಬಾಗಿಲು ಮುರಿದು ಮಹಿಳೆಯರು ಮಕ್ಕಳ ಸೇರಿದಂತೆ ಎಲ್ಲರ ಮೇಲೆ ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳನ್ನು ತಡೆಯಲು ಬಂದ ವೇಳೆ ಸಂಜಯ ಟೋಣೆ ಹೊಟ್ಟೆಗೆ ಚಾಕುವಿನಿಂದ ಮೂರು ಬಾರಿ ಇರಿದು ಹಲ್ಲೆ ಮಾಡಿದ್ದಾರೆ. ಮಕ್ಕಳನ್ನು ಮನ ಬಂದಂತೆ ಎಸೆದು ಮಹಿಳೆಯರ ಮೇಲೂ ಹಲ್ಲೆಗೆ ಎತ್ನಿಸಿದ್ದಾರೆ. ಚಾಕು ಇರಿತದಿಂದ ಸಂಜಯ ರಾಮಚಂದ್ರ ಟೋಣೆ ಗಂಭೀರ ಗಾಯಗೊಂಡಿದ್ದಾರೆ.
ಹಲ್ಲೆಯ ಬಳಿಕ ಬಲವಂತ ಟೋಣೆಯವರ ಮಾಲೀಕತ್ವದ ಚಿಕನ್ ಅಂಗಡಿಯನ್ನು ಸಂಪೂರ್ಣವಾಗಿ ದ್ವಂಸ ಮಾಡಿ , ಮನೆಯ ಮುಂದೆ ನಿಂತ 4 ಬೈಕುಗಳನ್ನು ಧ್ವಂಸಗೊಳಿಸಲಾಗಿದೆ. ಅಲ್ಲದೇ ಮನೆಯ ಮುಂದೆ ನಿಂತಿದ್ದ ಪಿಕಪ್ ವಾಹನದ ಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ನಾಶಪಡಿಸಲಾಗಿದೆ.
ಗ್ರಾಮಸ್ಥರು ಟೊಣೆ ಕುಟುಂಬದವರ ರಕ್ಷಣೆಗೆ ಮುಂದಾದಾಗ ಯಾರಾದರೂ ತಡೆಯಲು ಬಂದರೆ ಅವರನ್ನು ಸಹ ಮಚ್ಚಿನಿಂದ ಕೊಚ್ಚಿ ಹಾಕುವುದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದರು. ಹೀಗಾಗಿ ಸಾರ್ವಜನಿಕರು ಮೂಕ ಪ್ರೇಕ್ಷಕರಾಗಿ ನಿಲ್ಲಬೇಕಾಯಿತು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಯಾಗುತ್ತಿದ್ದಂತೆ ಈ ರೌಡಿಗಳು ಅಲ್ಲಿಂದ ಓಡಿ ಹೋಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗಾಗಲೆ ಓರ್ವನನ್ನು ವಶಕ್ಕೆ ಪಡೆಯಲಾಗಿದ್ದು ಮಿಕ್ಕವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.