CHEATING: ಸಾವಿರಾರು ಮಹಿಳೆಯರಿಗೆ ಕೋಟಿ ಕೋಟಿ ಪಂಗನಾಮ- ಬಡ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕೋಟ್ಯಂತರ ರೂಪಾಯಿ ವಂಚನೆ

ಬೆಳಗಾವಿ: ವ್ಯಕ್ತಿಯೊಬ್ಬ ಬಡ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕೋಟ್ಯಂತರ ರೂಪಾಯಿ ವಂಚನೆ (Cheating) ಮಾಡಿರುವ ಘಟನೆಯೊಂದು ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರ ಮೂಲದ ಬಾಬಾಸಾಹೇಬ್ ಕೋಳೆಕರ್ ಎಂಬಾತನ ಮೇಲೆ ವಂಚನೆ ಆರೋಪ ಕೇಳಿಬಂದಿದೆ.
ಈತ ಹೆಚ್ಚಾಗಿ ಗೃಹ ಲಕ್ಷ್ಮೀ ಯೋಜನೆ ಲಾಭ ಪಡೆಯುತ್ತಿರೋ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಲೂಟಿ ಮಾಡಿ ಎಸ್ಕೇಪ್ ಆಗಿದ್ದಾನೆ. ಲೂಸ್ ಅಗರಬತ್ತಿ ಪ್ಯಾಕೆಟ್ ಪ್ಯಾಕ್ ಮಾಡುವ ಕೆಲಸದ ಆಮಿಷ ತೋರಿಸಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾನೆ ಎನ್ನಲಾಗಿದೆ.
ಮೊದಲಿಗೆ ಐಡಿ ಕಾರ್ಡ್ ಮಾಡಲು ಮಹಿಳೆಯರಿಂದ 2,500 ರೂಪಾಯಿ ಹಣ ವಸೂಲಿ ಮಾಡಿರೋ ಗಿರಾಕಿ, ಒಂದೊಂದು ಐಡಿ ಕಾರ್ಡ್‌ಗೆ 20 ದಿನಕ್ಕೆ 3 ಸಾವಿರ ಹಾಗೂ ದಿನಕ್ಕೆ 150 ರೂಪಾಯಿ ಹಣ ಕೊಡುವುದಾಗಿ ನಂಬಿಸಿದ್ದ. ವಂಚಕನ ಮಾತಿಗೆ ಮರುಳಾಗಿ ಹಣದಾಸೆಗೆ ಬಿದ್ದ ಒಬ್ಬೊಬ್ಬ ಮಹಿಳೆಯರಿಂದ 20 ರಿಂದ 30ರ ವರೆಗೆ ಐಡಿ ಕಾರ್ಡ್ ಮಾಡಿಸಿಕೊಂಡಿದ್ದಾನೆ. ಅದರಲ್ಲಿ ಓರ್ವ ಮಹಿಳೆ ಅಂದಾಜು 75 ಸಾವಿರದಿಂದ ಹೆಚ್ಚಿನ ಹಣ ಕಳೆದುಕೊಂಡಿದ್ದಾರೆ. ಸಂತ್ರಸ್ತ ಮಹಿಳೆಯರು ತಲಾ ಒಂದು ಐಡಿ ಕಾರ್ಡ್ ಮಾಡಿಸಲು 2,500 ಹಣ ನೀಡಿದ್ದಾರಂತೆ.
ಬೆಳಗಾವಿ ಜಿಲ್ಲೆಯಲ್ಲಿ ಅಂದಾಜು 8 ಸಾವಿರ ಮಹಿಳೆಯರಿಗೆ 12 ಕೋಟಿ ರೂಪಾಯಿ ವಂಚನೆ ಮಾಡಿರುವುದು ಬಯಲಾಗಿದೆ. ಸದ್ಯ ಗೃಹ ಬಳಕೆಗೆ ಕೂಡಿಟ್ಟ ಹಣ ಲಪಟಾಯಿಸಿ ಆಸಾಮಿ ಪರಾರಿ ಆಗಿದ್ದು, ವಂಚಕನ ಮಾತು ನಂಬಿ ಸಾವಿರಾರು ಮಹಿಳೆಯರು ಇದೀಗ ಬೀದಿಗೆ ಬಂದಿದ್ದಾರೆ. ಮಹಿಳಾ ಗೃಹ ಉದ್ಯೋಗ ಸಮೂಹ ಬೆಳಗಾವಿ ಎಂಬ ಗ್ರೂಪ್ ಮಾಡಿಕೊಂಡು ಮೋಸ ಹೋಗಿದ್ದಾರೆ.
ನಮಗೆ ಸೂಕ್ತ ನ್ಯಾಯ ಕೊಡಿಸಬೇಕೆಂದು ನೂರಾರು ಮಹಿಳೆಯರು ಡಿಸಿ ಕಚೇರಿ ಮೇಟ್ಟಿಲೇರಿದ್ದಾರೆ. ವಂಚಿತನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಂತ್ರಸ್ತ ಮಹಿಳೆಯರು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಪ್ರಕರಣದ ಪತ್ತೆಗೆ ವಿಶೇಷ ತಂಡ ರಚನೆ ಮಾಡಿರೋದಾಗಿ ನಗರ ಪೊಲೀಸ ಆಯುಕ್ತ ಭೂಷಣ್ ಬೋರಸೆ ಹೇಳಿದ್ದಾರೆ.


