ಬೆಳಗಾವಿ : ಆಸ್ಪತ್ರೆಯ ಕಿಟಿಕಿಯಿಂದ ಎಸ್ಕೇಪ್ ಆಗಿದ್ದ ಕೈದಿ ಮತ್ತೆ ವಶಕ್ಕೆ ಪಡೆಯುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿ

ಬೆಳಗಾವಿ : ಆಸ್ಪತ್ರೆಯ ಕಿಟಕಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಕೈದಿಯನ್ನು ಮತ್ತೆ ವಶಕ್ಕೆ ಪಡೆಯುವಲ್ಲಿ ಬೆಳಗಾವಿ (Belagavi) ಪೊಲೀಸರು ಯಶಸ್ವಿಯಾಗಿದ್ದಾರೆ. ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಅನಿಲ್ ಲಂಬುಗೋಳ ಎಂಬ ಕೈದಿ ತಪ್ಪಿಸಿಕೊಂಡು ಓಡಿಹೋಗಿದ್ದ.
ಈಗ ಈತ ಮತ್ತೆ ಪೊಲೀಸರಿಂದ ಬಂಧಿತನಾಗಿದ್ದಾನೆ.
ಪೋಕ್ಸೋ ಕೇಸ್ ನಲ್ಲಿ ಆರೋಪಿಯಾಗಿದ್ದ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಅನಿಲ್ ಲಂಬುಗೋಳನಿಗೆ ನ್ಯಾಯಾಲಯ 20 ವರ್ಷ ಸಜೆ ವಿಧಿಸಿತ್ತು. ಹಿಂಡಲಗಾ ಜೈಲಿನಲ್ಲಿದ್ದ ಈತನನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಬೆಳಗ್ಗೆ 8.35ಕ್ಕೆ ಅನಿಲ್ ಶೌಚಾಲಯಕ್ಕೆ ಹೋಗಿ ಬರುವದಾಗಿ ಹೇಳಿ, ಶೌಚಾಲಯದ ಕಿಟಿಕಿಯಿಂದ ನುಸುಳಿಕೊಂಡು ತಪ್ಪಿಸಿಕೊಂಡು ಪರಾರಿಯಾಗಿದ್ದ.
ಕೂಡಲೇ ಇಡೀ ನಗರದಲ್ಲಿ ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಅನಿಲ್ ಪತ್ತೆಗೆ ಕಾರ್ಯಾಚರನೆ ಕೈಗೊಂಡಿದ್ದರು. ಇಡೀ ದಿನ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲೇ ಅಡಗಿಕೊಂಡು ಸಂಜೆ 6ಗಂಟೆ ಸಮಯದಲ್ಲಿ ಓಡಿಹೋಗಲು ಅನಿಲ್ ಪ್ಲಾನ್ ರೂಪಸಿದ್ದ. ತನ್ನ ಸಂಚನ್ನು ಕಾರ್ಯರೂಪಕ್ಕೆ ತಂದು ಸಂಜೆ ಓಡಿ ಹೋಗುವ ವೇಳೆಗೆ ಬೆಳಗಾವಿ ನಗರದ ಕೋರ್ಟ್ ಆವರಣ ಪಕ್ಕದಲ್ಲಿಯೇ ಪೊಲೀಸರ ಕೈಗೆ ಅನಿಲ್ ಸಿಕ್ಕಿ ಬಿದ್ದಿದ್ದ. ಈಗ ಈತನನ್ನು ಮತ್ತೆ ವಶಕ್ಕೆ ಪಡೆದ ಪೊಲೀಸರು ಕೃಷ್ಣ ಜನ್ಮಸ್ಥಾನದ ಹಾದಿ ತೋರಿಸಿದ್ದಾರೆ.


