ಯಮಕನಮರ್ಡಿ ಸಿಪಿಐ ಜಾವೀದ್ ಮುಶಾಪುರೆ ಮಿಂಚಿನ ಕಾರ್ಯಾಚರಣೆ; ಕೇವಲ 6 ಗಂಟೆಯಲ್ಲಿ ಆರೋಪಿ ಅರೆಸ್ಟ್
ರೌಡಿಶೀಟರ್ ಕೊಲೆ ಮುಚ್ಚಿ ಹಾಕಲು ಯತ್ನ.

ಯಮಕನಮರ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರೌಡಿಶೀಟರ್ ಕೊಲೆ ಪ್ರಕರಣವನ್ನು ಬೇಧಿಸಿ ಕೇವಲ 6 ಗಂಟೆಯಲ್ಲಿ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಸಿಪಿಐ ಜಾವೀದ್ ಮುಶಾಪುರೆ ಯಶಸ್ವಿಯಾಗಿದ್ಧಾರೆ.
ಬೆಳಗಾವಿ ಜಿಲ್ಲೆಯ ಯಮಕನಮರ್ಡಿ ಪೊಲೀಸ್ ಠಾಣಾ ವ್ಯಾಪ್ತಿಯ ಜಮೀನೊಂದರಲ್ಲಿ ಕುರಣಿ ಗ್ರಾಮದ ಸಂಜು ಊರ್ಫ ಪಿಂಟು ಮಹಾದೇವ ಪಾಟೀಲ (31) ಎಂಬಾತನ ಕೊಲೆ ನಡೆದಿತ್ತು. ಆದರೇ, ಕುಟುಂಬಸ್ಥರು ಈ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದರು. ಆದರೇ ಇದರಿಂದ ಅನುಮಾನಗೊಂಡು ಯಮಕನಮರ್ಡಿ ಸಿಪಿಐ ಜಾವೀದ್ ಮುಶಾಪುರೆ ಅವರು ಪ್ರಕರಣ ಜಾಡು ಹಿಡಿದು ತನಿಖೆ ನಡೆಸಿದರು.
ಈ ವೇಳೆ ಕೊಲೆಯಾದವ ತಮ್ಮ ಮನೆಯಲ್ಲಿರಲಿಲ್ಲ. ಕುಟುಂಬಸ್ಥರನ್ನು ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಕೊಲೆಯಾದ ಸಂಜು ಪಾಟೀಲನ ತಮ್ಮ ರಾಕೇಶ ಮಹಾದೇವ ಪಾಟೀಲ (29) ಮತ್ತು ಆತನ ಸಂಬಂಧಿ ಕೆಂಚಪ್ಪಾ ಹುಲೇಪ್ಪಾ ಪಾಟೀಲ (21) ಸೇರಿಕೊಂಡು ಕೊಲೆ ಮಾಡಿರುವುದಾಗಿ ಬೆಳಕಿಗೆ ಬಂದಿದೆ.
ಸುಮಾರು ಎರಡು ವರ್ಷಗಳ ಹಿಂದೆ ಸಂಜು, ಮದುವೆ ಮತ್ತು ಆಸ್ತಿ ವಿಷಯವಾಗಿ ತಂದೆ-ತಾಯಿ ಹಾಗೂ ತಮ್ಮ ರಾಕೇಶನನ್ನು ಮನೆಯಿಂದ ಹೊರಹಾಕಿದ್ದ. ಈ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕುರಣಿ ಗ್ರಾಮದಲ್ಲಿರುವ ಅವರ ಮನೆಯಲ್ಲಿ ಸಹೋದರರ ನಡುವೆ ತಂಟೆ ಶುರುವಾಗಿದೆ. ನಂತರ ಕುಡುಗೋಲಿನಿಂದ ಹೊಡೆದು ಸಂಜುನನ್ನು ಕೊಲೆ ಮಾಡಲಾಗಿದೆ. ಮಿಂಚಿನ ಕಾರ್ಯಾಚರಣೆಯನ್ನು ನಡೆಸಿ ಕೇವಲ 6 ಗಂಟೆಯಲ್ಲಿ ಪ್ರಕರಣವನ್ನು ಬೇಧಿಸಿ ಸಿಪಿಐ ಜಾವೀದ್ ಮುಶಾಪುರೆ ಮತ್ತು ಅವರ ತಂಡ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.


