ಡಿ. 8 ರಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ:ಈ ಬಾರಿ ಬೆಳಗಾವಿ ಅಧಿವೇಶನದಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನಶಿಪ್ ಮಾದರಿ ಕಲಾಪ ವೀಕ್ಷಣೆ: ಸ್ಪೀಕರ್ ಯು.ಟಿ. ಖಾದರ್

ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಮಂಡಳದ ಚಳಿಗಾಲ ಅಧಿವೇಶನದಲ್ಲಿ ಇದೇ ಮೊದಲ ಬಾರಿಗೆ 30 ವಿದ್ಯಾರ್ಥಿಗಳಿಗೆ 10 ದಿನ ಪೂರ್ತಿ ಕಾರ್ಯ ಕಲಾಪ ವೀಕ್ಷಣೆಗೆ ಅವಕಾಶ ನೀಡಲಾಗುವುದು. ಇದು ಇಂಟರ್ನಶಿಪ್ ರೀತಿ ಇರಲಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಡಿ.8ರಿಂದ 19ರ ವರೆಗೆ ಬೆಳಗಾವಿಯಲ್ಲಿ 10 ದಿನ ಅಧಿವೇಶನ ಹಿನ್ನೆಲೆಯಲ್ಲಿ ಸಿದ್ಧತೆ ಪರಿಶೀಲಿಸಿದ ಬಳಿಕ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸಂಸದೀಯ ವ್ಯವಸ್ಥೆಯ ಕುರಿತು ಅರಿವು ಮೂಡಿಸಲು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವ ವಿದ್ಯಾಲಯ ಹಾಗೂ ಅಕ್ಕಮಹಾದೇವಿ ವಿಶ್ವ ವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರು ದಿನವಿಡೀ ವಿಧಾನಸಭೆ, ವಿಧಾನಪರಿಷತ್ ಕಾರ್ಯ ಕಲಾಪಗಳನ್ನು ವೀಕ್ಷಿಸಲು ಅವಕಾಶ ನೀಡಲಾಗುವುದು. ಇಂಟರನರ್ಶಿಪ್ ರೀತಿಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಇಡೀ ರಾಜ್ಯಕ್ಕೆ ಸಂಬಂಧಿಸಿದ ಚರ್ಚೆ ಆಗಬೇಕು. ಅದರಲ್ಲಿ ವಿಶೇಷವಾದ ಮಹತ್ವವನ್ನು ಉತ್ತರ ಕರ್ನಾಟಕ ಭಾಗಕ್ಕೆ ಮೀಸಲಿಡಲಾಗುವುದು. ಕಳೆದ ಬಾರಿ 35 ಶಾಸಕರು ಈ ಭಾಗದ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಬಾರಿಯೂ ಅವಕಾಶ ನೀಡಲಾಗುವುದು. ಅಧಿವೇಶನದ ಮೊದಲ ದಿನ ಲೆಕ್ಕಪತ್ರ ವ್ಯವಹಾರದ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನಿಸಲಾಗುತ್ತದೆ ಎಂದರು.
ಬೆಳಗಾವಿ ಅಧಿವೇಶನಕ್ಕೆ ಪ್ರವಾಸಕ್ಕೆ ಬಂದಂತೆ ಬರುತ್ತಾರೆ ಎಂಬ ಟೀಕೆಗೆ, ನಾವೆಲ್ಲಾ ಸಕಾರಾತ್ಮಕ ಚಿಂತನೆ ಮಾಡಬೇಕು. ಕಳೆದ ಬಾರಿ ಶಾಸಕರ ಉತ್ತಮ ಹಾಜರಾತಿ ದಾಖಲಾಗಿತ್ತು. ಬೇರೆ ರಾಜ್ಯ ಮತ್ತು ದೇಶಗಳಲ್ಲಿ ಅಲ್ಲಿನ ಪ್ರತಿನಿಧಿಗಳನ್ನು ಹೋಲಿಕೆ ಮಾಡಿದರೆ ನಮ್ಮಲ್ಲಿ ಇನ್ನೂ ಚೆನ್ನಾಗಿದೆ. ಕೆಲವೊಂದು ಸಮಸ್ಯೆಗಳು ಇರುತ್ತವೆ. ಆದರೂ ಕೆಲ ಸಚಿವರು ರಾತ್ರಿ 1 ಗಂಟೆವರೆಗೂ ಸದನದಲ್ಲಿ ಕುಳಿತು ಉತ್ತರಿಸಿದ್ದಾರೆ. ಕೆಲವರು ಬರದಿದ್ದ ಹಿನ್ನೆಲೆಯಲ್ಲಿ ಎಲ್ಲರೂ ಬಂದಿಲ್ಲ ಎನ್ನಲು ಆಗಲ್ಲ ಎಂದು ಸ್ಪೀಕರ್ ಹೇಳಿದರು.



