ಬೆಳಗಾವಿ: ಸರಕಾರಿ ಮಹಿಳಾ ಅಧಿಕಾರಿಗೆ ಬ್ಲ್ಯಾಕ್ ಮೇಲ್ ಮಾಡಿದ್ದ ನಕಲಿ ಪತ್ರಕರ್ತರನ್ನ 3 ದಿನ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್

ಬೆಳಗಾವಿ: ಸರಕಾರಿ ಮಹಿಳಾ ಅಧಿಕಾರಿಗೆ ಬ್ಲ್ಯಾಕ್ ಮೇಲ್ ಮಾಡಿದ್ದ ಪತ್ರಕರ್ತರ ಸೋಗಿನಲ್ಲಿದ್ದ ನಕಲಿ ಪತ್ರಕರ್ತರಿಗೆ ಬೆಳಗಾವಿ ಜಿಲ್ಲಾ ನ್ಯಾಯಾಲಯ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಮಹಿಳಾ ಅಧಿಕಾರಿ ಮನೆಯಲ್ಲಿ ರಹಸ್ಯ ಕ್ಯಾಮರಾ ಇಟ್ಟು ಖಾಸಗಿ ದೃಶ್ಯ ಸೆರೆಹಿಡಿದು, ವೈರಲ್ ಮಾಡುವ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣದಲ್ಲಿ ಈ ಹಿಂದೆ ಬಂಧಿಸಲಾಗಿದ್ದ ಮೂವರು ನಕಲಿ ಪರ್ತಕರ್ತರನ್ನು ಪುನಃ ವಶಕ್ಕೆ ಪಡೆದಿರುವ ಮಾಳಮಾರುತಿ ಠಾಣೆ ಪೊಲೀಸರು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಸಮೀದ್ ವಿಸಾರ್ ಅಹ್ಮದ್ ಶೇಖ್, ಅಬ್ದುಲ್ ರಶೀದ್ ಮಕಾನದಾರ ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ಇವರಿಂದ ಮಾಹಿತಿ ಪಡೆದು ಕಳೆದ ವಾರ ವಿನೋದನನ್ನು ಬಂಧಿಸಿದ್ದರು. ವಿಚಾರಣೆಯಲ್ಲಿ ವಿನೋದ ಕೆಲ ವಿಷಯಗಳನ್ನು ಹೇಳಿರುವ ಹಿನ್ನೆಲೆ ಈ ಮೊದಲು ಬಂಧಿಸಿದ್ದ ಮೂವರನ್ನು ನ್ಯಾಯಾಲಯದಿಂದ ತಮ್ಮ ವಶಕ್ಕೆ ಪಡೆದು ತೀವು ವಿಚಾರಣೆ ಕೈಗೊಂಡಿದ್ದಾರೆ.
ನಕಲಿ ಪತ್ರಕರ್ತರ ಹಿಂದೆ ಇರುವ ಮಾಸ್ಟರ್ ಮೈಂಡ್ ಹೆಡೆಮುರಿ ಕಟ್ಟಿರುವ ಮಾಳಮಾರುತಿ ಪೊಲೀಸರು ಇವರು ಇನ್ನೂ ಯಾವ ಯಾವ ಅಧಿಕಾರಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎನ್ನುವ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದ್ದರಿಂದ ಮೂರು ದಿನ ಮಾಳಮಾರುತಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈ ಮೂವರ ಮೊಬೈಲ್ ಡೇಟಾ ಸಹ ಲಭ್ಯವಾಗಿದೆ ಎನ್ನಲಾಗಿದ್ದು, ಕೆಲ ಮಾಹಿತಿಗಳು ಸಿಕ್ಕಿವೆ. ಪುನಃ ಶುಕ್ರವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.



