ಮಾಲೀಕರ ಮನೆಯಲ್ಲಿ ಕೈಚಳಕ ತೋರಿದ ಘಟನೆ ಕಿಲಾಡಿ ಕೆಲಸದಾಕೆ ಅರೆಸ್ಟ್!!!
MARKET POLICE CRACK HIGH-VALUE HOUSE BURGLARY; WOMAN HELD, GOLD WORTH ₹9.27 LAKH RECOVERED

ವಿಶ್ವಾಸವಿಟ್ಟು ಕೆಲಸಕ್ಕೆ ಇರಿಸಿಕೊಂಡಿದ್ದ ಮಹಿಳೆಯೇ ಮಾಲೀಕರ ಮನೆಯಲ್ಲಿ ಕೈಚಳಕ ತೋರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಶಿವಾಜಿ ನಗರದ ಮನೆಯೊಂದರಲ್ಲಿ ನಡೆದಿದ್ದ ಬೃಹತ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ಮಾರ್ಕೆಟ್ ಠಾಣೆ ಪೊಲೀಸರು, ಆರೋಪಿತೆಯನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿಯ ಛತ್ರಪತಿ ಶಿವಾಜಿ ನಗರದ ನಿವಾಸಿ ಲಲಿತಾ ಪ್ರಕಾಶ ಮಮದಾಪೂರ ಎಂಬುವವರ ಮನೆಯಲ್ಲಿ ಕಳೆದ ಡಿಸೆಂಬರ್‌ನಿಂದ ಫೆಬ್ರವರಿ ಅವಧಿಯಲ್ಲಿ ಬರೋಬ್ಬರಿ 68.74 ಗ್ರಾಂ ಚಿನ್ನಾಭರಣಗಳು ಕಳವಾಗಿದ್ದವು. ಈ ಬಗ್ಗೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಾಂಭೀರ್ಯ ಅರಿತ ಬೆಳಗಾವಿ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಜೆ.ಎಮ್. ಕಾಲಿಮಿರ್ಚಿ ನೇತೃತ್ವದ ವಿಶೇಷ ತಂಡವು ತನಿಖೆ ಆರಂಭಿಸಿತ್ತು. ತನಿಖೆಯ ವೇಳೆ ಸಂಶಯದ ಆಧಾರದ ಮೇಲೆ ಖಾಸಬಾಗ್ ನಿವಾಸಿ ಸುರೇಖಾ ಬಸವರಾಜ ತಳವಾರ (40) ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಸತ್ಯಾಂಶ ಬಯಲಾಗಿದೆ.
ಬಂಧಿತ ಮಹಿಳೆಯಿಂದ ಸದ್ಯ 9,27,990 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ಹುಸೇನ ಕೇರೂರ, ವಿಠಲ ಹಾವನ್ನವರ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳು ಪ್ರಮುಖ ಪಾತ್ರ ವಹಿಸಿದ್ದರು. ಕಳ್ಳತನವಾದ ಕೆಲವೇ ದಿನಗಳಲ್ಲಿ ಆರೋಪಿತೆಯನ್ನು ಪತ್ತೆ ಹಚ್ಚಿ ಮಾಲು ವಶಪಡಿಸಿಕೊಂಡ ತಂಡದ ಕಾರ್ಯದಕ್ಷತೆಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ. ಚಾಣಾಕ್ಷತನದಿಂದ ತಾಂತ್ರಿಕ ವಿಭಾಗದ ನೆರವು ಪಡೆದು ನಡೆಸಿದ ಈ ಕಾರ್ಯಾಚರಣೆ ಈಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.



