ನರೇಗಾ ಯೋಜನೆಯಿಂದ ಗ್ರಾಮಗಳ ಅಭಿವೃದ್ಧಿ ತಾಲೂಕ ಪಂಚಾಯತ ಸಹಾಯಕ ನಿರ್ದೇಶಕಿ ರೂಪಾಲಿ ಬಡಕುಂದ್ರಿ

ನರೇಗಾ ಯೋಜನೆಯಿಂದ ಗ್ರಾಮಗಳ ಅಭಿವೃದ್ಧಿ*ರೂಪಾಲಿ ಬಡಕುಂದ್ರಿ
ಖಾನಾಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಗ್ರಾಮೀಣ ಭಾಗದ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿರುವುದರ ಜೊತೆಗೆ ಗ್ರಾಮಗಳ ಅಭಿವೃದ್ಧಿಯೂ ಸಾಧ್ಯವಾಗುತ್ತಿದೆ ಎಂದು ತಾಲೂಕ ಪಂಚಾಯತ ಸಹಾಯಕ ನಿರ್ದೇಶಕಿ ರೂಪಾಲಿ ಬಡಕುಂದ್ರಿ ಹೇಳಿದರು.
ತಾಲೂಕಿನ ಬೀಡಿ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿದ್ದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಜಿಲ್ಲಾ ಪಂಚಾಯತ ಬೆಳಗಾವಿ, ತಾಲೂಕ ಪಂಚಾಯತ ಖಾನಾಪೂರ ಹಾಗೂ ಗ್ರಾಮ ಪಂಚಾಯತ ಬೀಡಿ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನರೇಗಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಜನರಿಗೆ ನರೇಗಾ ಯೋಜನೆ ಆಶಾಕಿರಣವಾಗಿದ್ದು, ಜೀವನೋಪಾಯಕ್ಕೂ ದಾರಿಯಾಗಿದೆ. ಯೋಜನೆಯಡಿ ಒಟ್ಟು 266 ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು, ಇದರಿಂದ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕೂಡ ಸಹಾಯವಾಗುತ್ತಿದೆ ಎಂದರು.
2006 ಫೆಬ್ರವರಿ 2 ರಂದು ಯೋಜನೆ ದೇಶಾದ್ಯಂತ ಅನುಷ್ಟಾನಗೊಂಡಿದ್ದರಿಂದ ಈ ದಿನವನ್ನು ನರೇಗಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಯೋಜನೆ 19 ವರ್ಷಗಳನ್ನು ಪೂರೈಸಿ 20ನೇ ವರ್ಷಕ್ಕೆ ಕಾಲಿಟ್ಟಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಸಂತೋಷ ಕಾಶೀಲಕರ್ ಮಾತನಾಡಿ, ಬೀಡಿ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 1300 ಕ್ಕೂ ಹೆಚ್ಚು ಸಕ್ರಿಯ ಕೂಲಿಕಾರರಿದ್ದು, ಪ್ರತಿವರ್ಷ ಎಲ್ಲ ಕೂಲಿಕಾರರಿಗೂ 100 ದಿನಗಳವರೆಗೆ ಕೆಲಸ ನೀಡಲಾಗುತ್ತಿದೆ. ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮಸ್ಥರು ಕೂಡ ಸಹಕಾರ ನೀಡುತ್ತಿದ್ದಾರೆ ಎಂದರು.
“ಕೂಲಿಕಾರರು-ಸಿಬ್ಬಂದಿಗೆ ಸನ್ಮಾನ:
2023-24 ನೇ ಸಾಲಿನಲ್ಲಿ 100 ಮಾನವ ದಿನಗಳನ್ನು ಪೂರೈಸಿದ ಕೂಲಿಕಾರರು, ಕಾಯಕ ಬಂಧುಗಳು, 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಕ್ಯಾಪ್ ಮತ್ತು ಹೂಗಳನ್ನು ನೀಡುವ ಮೂಲಕ ಅಭಿನಂದಿಸಲಾಯಿತು.
ಯೋಜನೆಯ ಪ್ರಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಂತ್ರಿಕ ಸಹಾಯಕರು, ಗ್ರಾಪಂ ಗಣಕಯಂತ್ರ ನಿರ್ವಾಹಕರು, ಬಿ.ಎಫ್.ಟಿ. ಹಾಗೂ ಗ್ರಾಮ ಕಾಯಕ ಮಿತ್ರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಜಯವಂತ ಕಾಳೆ, ರಮೇಶ ಕಮ್ಮಾರ, ಕಾರ್ಯದರ್ಶಿ ರಾಜು ಟೋಪಗೋಳ, ತಾಂತ್ರಿಕ ಸಹಾಯಕ ಶಶಿಧರ ಸತ್ತಿಗೇರಿ, ಐಇಸಿ ಸಂಯೋಜಕ ಮಹಾಂತೇಶ ಜಾಂಗಟಿ, ಆಡಳಿತ ಸಹಾಯಕ ಗಣೇಶ ಅಲಾಬದಿ, ಬಿಷ್ಟಪ್ಪ ತಳವಾರ, ಶಂಕರ ಇಟಗಿ, ನರಸಪ್ಪ ಅಲಾಬದಿ, ಗೀತಾ ಪೆಡ್ನೇಕರ್ ಸೇರಿ ಕಾಯಕ ಬಂಧುಗಳು, ಕೂಲಿಕಾರರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ: ಜ್ಯೋತಿಬಾ ಬೆಂಡಿಗೇರಿ


