MICRO FINANCE: ಕಿರುಕುಳಕ್ಕೊಳಗಾದ ಸಂತ್ರಸ್ತರಿಗೆ ನೆರವಾದ ಲಕ್ಷ್ಮಿ ಹೆಬ್ಬಾಳ್ಕರ್- ಜಪ್ತಿಯಾಗಿದ್ದ ಮನೆ ವಾಪಸ್!

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಒಳಗಾದ ಮತ್ತೊಂದು ಕುಟುಂಬಕ್ಕೆ ನೆರವಾಗಿದ್ದಾರೆ. ಖಾಸಗಿ ಫೈನಾನ್ಸ್ ಸಂಸ್ಥೆಯವರು 8 ತಿಂಗಳ ಹಿಂದೆ ಸೀಜ್ ಮಾಡಿ ಹರಾಜಿಗಿಟ್ಟಿದ್ದ ಮನೆಯನ್ನು ಹೆಬ್ಬಾಳ್ಕರ್ ಕುಟುಂಬಕ್ಕೆ ಬಿಡಿಸಿಕೊಟ್ಟಿದ್ದಾರೆ.
ವಾಗ್ವಾಡೆ ಗ್ರಾಮದ ಅಂಬೇಡ್ಕರ್ ಗಲ್ಲಿಯ ಸುರೇಶ ಗೀರಪ್ಪ ಕಾಂಬಳೆ ಫೈನಾನ್ಸ್ ಒಂದರಿಂದ 2020ರಲ್ಲಿ 7 ಲಕ್ಷ ರೂ. ಸಾಲ ಪಡೆದಿದ್ದರು. ಅವರು ಬಹುತೇಕ ಹಣವನ್ನು ಪಾವತಿಸಿದ್ದರೂ ನಂತರ ಆರ್ಥಿಕ ಸಮಸ್ಯೆಯಿಂದಾಗಿ ಇನ್ನೂ 2.50 ಲಕ್ಷ ರೂ. ತುಂಬುವುದು ಬಾಕಿ ಉಳಿದಿತ್ತು. ಹಣ ಕಟ್ಟಲಾಗದ ಹಿನ್ನೆಲೆ 8 ತಿಂಗಳ ಹಿಂದೆ ಫೈನಾನ್ಸ್ ಕಂಪನಿಯವರು ಕುಟುಂಬವನ್ನು ಹೊರ ಹಾಕಿ, ಮನೆಯನ್ನು ಲಾಕ್ ಮಾಡಿ, ಹರಾಜಿಗಿದೆ ಎಂದು ಫಲಕ ಹಾಕಿದ್ದರು.
ಇತ್ತೀಚೆ ಲಕ್ಷ್ಮಿ ಹೆಬ್ಬಾಳ್ಕರ್ ಮೈಕ್ರೋ ಫೈನಾನ್ಸ್ ಸಂತ್ರಸ್ತರಿಗೆ ನೆರವಾಗಿರುವ ವಿಚಾರವನ್ನು ತಿಳಿದ ಕಾಂಬಳೆ ಅವರು ಗುರುವಾರ ಸಚಿವೆಯನ್ನು ಸಂಪರ್ಕಿಸಿ, ಮನೆಯನ್ನು ಬಿಡಿಸಿ ಕೊಡುವಂತೆ ವಿನಂತಿಸಿಕೊಂಡಿದ್ದಾರೆ. ನಂತರ ಹೆಬ್ಬಾಳ್ಕರ್ ಸೂಚನೆಯಂತೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಫೈನಾನ್ಸ್ ಸಂಸ್ಥೆಯವರನ್ನು ಕರೆಸಿ ಮಾತುಕತೆ ನಡೆಸಿ, ಬಾಕಿ ಇರುವ ಹಣ ತುಂಬಲು 2 ತಿಂಗಳು ಕಾಲಾವಕಾಶ ನೀಡುವಂತೆ ತಾಕೀತು ಮಾಡಿದ್ದಾರೆ.
ನಂತರ ಸಚಿವರ ಆಪ್ತ ಸಹಾಯಕ ಮಹಾಂತೇಶ ಹಿರೇಮಠ ಮಂಗಳವಾರ ಸ್ಥಳಕ್ಕೆ ತೆರಳಿ ಬ್ಯಾಂಕ್ ಸಿಬ್ಬಂದಿಯಿಂದ ಮನೆಯ ಕೀ ಪಡೆದು ಅದನ್ನು ಮಾಲಿಕರಿಗೆ ಹಸ್ತಾಂತರಿಸಿದ್ದಾರೆ. ಮಂಗಳವಾರ ಸಂಜೆ ಸುರೇಶ ಕಾಂಬಳೆ ಕುಟುಂಬ ತಮ್ಮ ಮನೆಗೆ 8 ತಿಂಗಳುಗಳ ಬಳಿಕ ಕೊನೆಗೂ ಪ್ರವೇಶ ಮಾಡಿದೆ.



