ಐದು ತಿಂಗಳಿನಿಂದ ಅನ್ನಭಾಗ್ಯ ಹಣ ಇಲ್ಲ, ಗೃಹಲಕ್ಷ್ಮಿ ಹಣವೂ ಇಲ್ಲ! ಸರ್ಕಾರವು ಅದನ್ನು ಜಾರಿ ಮಾಡುವಲ್ಲಿ ಎಡವಿದೆ ಎನ್ನುವ ಮತ್ತೊಂದು ಆರೋಪ ಕೇಳಿ ಬಂದಿದೆ.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕವೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಅದನ್ನು ಜಾರಿ ಮಾಡುವಲ್ಲಿ ಎಡವಿದೆ ಎನ್ನುವ ಮತ್ತೊಂದು ಆರೋಪ ಕೇಳಿ ಬಂದಿದೆ. ಇದಕ್ಕೆ ಕಾರಣ ಕಳೆದ ಐದು ತಿಂಗಳಿನಿಂದಲೂ ಹೆಚ್ಚುವರಿ ಅಕ್ಕಿ ಸಿಗದೆ ಇರುವುದು.
ಅನ್ನಭಾಗ್ಯ ಯೋಜನೆಯ ಹಣವೂ ಖಾತೆಗಳಿಗೆ ಬೀಳದೆ ಇರುವುದು ಹಾಗೂ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಸಹ ಬಂದಿಲ್ಲ. ಇದು ಜನರನ್ನು ಕೆರಳಿಸಿದೆ. ಗೃಲಕ್ಷ್ಮಿ ಯೋಜನೆಯಲ್ಲಂತೂ ಪ್ರತಿ ತಿಂಗಳೂ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ ಎನ್ನುವ ಉತ್ತರ ಸರ್ಕಾರದಿಂದ ಬರುತ್ತಿದ್ದು. ಇದು ತೀವ್ರ ಟೀಕೆಗೆ ಗುರಿಯಾಗಿದೆ.
ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಮುಗಿಬಿದ್ದಿವೆ. ಈ ಸಂಬಂಧ ಸಂಸದ ಪ್ರಹ್ಲಾದ್ ಜೋಶಿ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದಾರೆ. ಹತ್ತು ಕೆಜಿ.. ಹತ್ತು ಕೆಜಿ ಅಕ್ಕಿ ಫ್ರೀ.. ಕಟಾಕಟ್.. ಕಟಾಕಟ್ ಅಂತಾ ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ ಪ್ರತಿ ತಿಂಗಳು ಹಣ ಬಂದು ಬಿದ್ದೇ ಬಿಡುತ್ತೆ. ಇದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಅಂತಾ ಸುಳ್ಳು ಹೇಳಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಆದರೆ, ಇತ್ತ ಅಕ್ಕಿಯ ಬದಲು ನೀಡುತ್ತಿದ್ದ ಹಣ, ಗೃಹಲಕ್ಷ್ಮಿಯ ಹಣವನ್ನು ನೀಡದೆ ರಾಜ್ಯದ ಜನರಿಗೆ ಸಿದ್ದರಾಮಯ್ಯನವರ ಸರ್ಕಾರ ಮೋಸ ಮಾಡುತ್ತಿದೆ. ರಾಜ್ಯದ ಬೊಕ್ಕಸ ಖಾಲಿ ಮಾಡಿ ಜನರಿಗೆ ಬೆಲೆ ಏರಿಕೆಯ ಬರೆಯನ್ನು ದಿನನಿತ್ಯ ಎಳೆಯುತ್ತಾ ಶಾಕ್ ನೀಡುತ್ತಲೇ ಇದೆ ಎಂದು ಅವರು ಹೇಳಿದ್ದಾರೆ.
ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿ ಕೊಡುವ ಬದಲು, ಕೇಂದ್ರ ಸರ್ಕಾರ ಪ್ರತಿ ಕೆಜಿ ಅಕ್ಕಿ 22.50 ರೂಪಾಯಿಗೆ ಕೊಡುವುದನ್ನು ಖರೀದಿ ಮಾಡಿ, ವಾರ್ಷಿಕ 2280 ಕೋಟಿ ಅಷ್ಟು ಹಣವನ್ನು ಉಳಿತಾಯ ಮಾಡುವಂತೆ ಹಾಗೂ ಎಷ್ಟು ಬೇಕಾದರೂ ಅಕ್ಕಿಯನ್ನು ನೀಡುವುದಾಗಿ ಹೇಳಿದ್ದರೂ ಸಿದ್ದರಾಮಯ್ಯನವರ ಸರ್ಕಾರ ಜಾಣಕುರುಡು ಪ್ರದರ್ಶಿಸುತ್ತಾ ಜನರಿಗೆ ಮೋಸ ಮಾಡುತ್ತಲೇ ಬಂದಿದೆ. ಇದು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರ ಸರ್ಕಾರ ರಾಜ್ಯದ ಜನರಿಗೆ ಮಾಡುತ್ತಿರುವ ಮೋಸದ ಗ್ಯಾರಂಟಿ. ಸಿಎಂ ಸಿದ್ದರಾಮಯ್ಯ ಅವರೇ ನಿಮಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದೂ ಹೇಳಿದ್ದಾರೆ.
ಇನ್ನು ಈ ಸಂಬಂಧ ಮಾತನಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಕಾಂಗ್ರೆಸ್ ನಂಬಿದ್ರೆ ಚೊಂಬು ಗ್ಯಾರಂಟಿ ಎಂದು ಹೇಳಿದ್ದಾರೆ. 5 ತಿಂಗಳಿಂದ ಅನ್ನಭಾಗ್ಯದ ಹಣ ಸಿಕ್ಕಿಲ್ಲ. ಇತ್ತ ಅಕ್ಕಿಯೂ ಕೊಡುತ್ತಿಲ್ಲ. ಗೃಹಲಕ್ಷ್ಮಿ ಹಣ 3 ತಿಂಗಳಿಂದ ಬಂದಿಲ್ಲ ಎಂದಿದ್ದು. ಗ್ಯಾರಂಟಿಗಳ ನೆಪದಲ್ಲಿ ಮತದಾರರನ್ನು ನಂಬಿಸಿ ಮೋಸ ಮಾಡಿ ಅಧಿಕಾರ ಹಿಡಿದ ನಯವಂಚಕ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಕನ್ನಡಿಗರ ಕೈಗೆ ದೊಡ್ಡ ಚೊಂಬು ಕೊಟ್ಟಿದೆ ಎಂದಿದ್ದಾರೆ.



